ಬೆಂಗಳೂರು: ವ್ಯಕ್ತಿಯೊಬ್ಬರು ಕ್ಲಿನಿಕ್‌ಗೆ ಹೋಗಿ ಬರುವಷ್ಟರಲ್ಲಿ 2 ಲಕ್ಷ ರೂ. ಹಣವಿದ್ದ ಬ್ಯಾಗ್ ನಾಪತ್ತೆಯಾಗಿದ್ದು, ಹಣದೊಂದಿಗೆ ಪರಾರಿಯಾಗಿದ್ದ ಆಟೋ ಚಾಲಕ ಕೊನೆಗೂ ಮಲ್ಲೇಶ್ವರ ಠಾಣೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
ಆಟೋ ಚಾಲಕ, ತ್ಯಾಗರಾಜನಗರದ ರಂಗನಾಥ (27) ಬಂಧಿತ ಆರೋಪಿ. ಆತನಿಂದ 1.5 ಲಕ್ಷ ನಗದು ಹಾಗೂ ಆಟೋ ವಶಪಡಿಸಿಕೊಳ್ಳಲಾಗಿದೆ. ಬನಶಂಕರಿಯ ಅಶೋಕನಗರ 1ನೇ ಹಂತದ ನಿವಾಸಿ ಜಿ.ಎಸ್.ರವಿ ಎಂಬವರು ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೂರುದಾರ ಜಿ.ಎಸ್.ರವಿ ಅವರು ಜ.24ರಂದು ಸಂಜೆ 4 ಗಂಟೆಗೆ ಗಾಂಧಿಬಜಾರ್‌ನ ಸುಬ್ಬರಾಮು ಶೆಟ್ಟಿ ರಸ್ತೆ ಅಮೃತ ಹೋಟೆಲ್ ಬಳಿಯಿಂದ ಮಲ್ಲೇಶ್ವರಂನ ಮಾರ್ಗೊಸ ರಸ್ತೆಯ 7ನೇ ಕ್ರಾಸ್‌ನ ಖಾಸಗಿ ಹೋಮಿಯೋಪತಿ ಕ್ಲಿನಿಕ್‌ಗೆ ಆರೋಪಿಯ ಆಟೋರಿಕ್ಷಾದಲ್ಲಿ ಬಂದಿದ್ದರು. ಈ ವೇಳೆ ಕ್ಲಿನಿಕ್‌ಗೆ ತೆರಳಿ ವೈದ್ಯರಿಗೆ ಕಿವಿ ತೋರಿಸಿಕೊಂಡು 20 ನಿಮಿಷದಲ್ಲಿ ವಾಪಸ್ ಬರುತ್ತೇನೆ. ಅಲ್ಲಿಯವರೆಗೂ ಕಾಯುವಂತೆ ಆರೋಪಿಗೆ ಹೇಳಿದ್ದರು. ಅಲ್ಲದೆ ತಮ್ಮ ಹಣ ಹಾಗೂ ದಾಖಲೆಗಳಿದ್ದ ಬ್ಯಾಗ್ ಆಟೋರಿಕ್ಷಾದ ಹಿಂಬದಿ ಸೀಟಿನಲ್ಲಿ ಇರಿಸಿ, ವಾಪಸ್ ಬರುವವರೆಗೂ ಬ್ಯಾಗ್ ನೋಡಿಕೊಳ್ಳುವಂತೆ ಸೂಚಿಸಿದ್ದರು. ಇದಕ್ಕೆ ಆರೋಪಿ ಸಮ್ಮತಿಸಿದ್ದ. ಜಿ.ಎಸ್.ರವಿ ಚಿಕಿತ್ಸೆ ಮುಗಿಸಿಕೊಂಡು ವಾಪಸ್ ಬಂದು ನೋಡಿದಾಗ ಆರೋಪಿ ಬ್ಯಾಗ್ ಸಹಿತ ಪರಾರಿಯಾಗಿದ್ದ. ಈ ಸಂಬಂಧ ರವಿ ದೂರು ನೀಡಿದ್ದರು.
ಸಾಲ ತೀರಿಸಲು ಕೃತ್ಯ: ಘಟನಾ ಸ್ಥಳ ಹಾಗೂ ಸುತ್ತಮುತ್ತಲ ಸಿಸಿ ಕ್ಯಾಮರಾ ದೃಶ್ಯಾವಳಿ ಪರಿಶೀಲಿಸಿ ಸಿಕ್ಕ ಸುಳಿವಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿ ರಂಗನಾಥ ಸಾಲ ಮಾಡಿಕೊಂಡಿದ್ದು, ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ. ಆಟೋ ಚಾಲನೆಯಿಂದ ಬರುವ ಆದಾಯ ಸಾಲ ತೀರಿಸಲು ಸಾಲುತ್ತಿರಲಿಲ್ಲ. ಹೀಗಾಗಿ ಕಳ್ಳತನ ಮಾಡಲು ಯೋಜನೆ ರೂಪಿಸಿದ್ದ. ಅದರಂತೆ ಗ್ರಾಹಕ ರವಿ ಅವರ ಬ್ಯಾಗ್ ಪರಿಶೀಲಿಸಿದಾಗ ಹಣ ಇರುವುದು ಕಂಡು ಬಂದಿದೆ. ಈ ಹಣ ಕದ್ದರೆ ಸಾಲ ತೀರಿಸಬಹುದು ಎಂದು ಬ್ಯಾಗ್ ಸಹಿತ ಆಟೋರಿಕ್ಷಾದಲ್ಲಿ ಪರಾರಿಯಾಗಿದ್ದೆ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.