ವಿಜಯವಾಣಿ ಸುದ್ದಿಜಾಲ ಹಾರೋಹಳ್ಳಿ
ರಾಜ್ಯದಲ್ಲಿ ಈ ಬಾರಿ ಜೆಡಿಎಸ್ ಬಹುಮತದಿಂದ ಸರ್ಕಾರ ರಚಿಸಲಿದ್ದು, ರಾಜ್ಯದ ಸಮಗ್ರ ಅಭಿವೃದ್ಧಿ ಮಾಡಲು ಪಣ ತೊಟ್ಟಿದ್ದೇವೆ ಎಂದು ರಾಮನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹೇಳಿದರು.
ಹಾರೋಹಳ್ಳಿ ತಾಲೂಕಿನ ಚೀಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹನುಮನಹಳ್ಳಿಯಲ್ಲಿ ಮತಯಾಚನೆ ಮಾಡಿ ಮಾತನಾಡಿದರು.
ರೈತರಿಗೆ ರಸಗೊಬ್ಬರ, ಬಿತ್ತನೆಬೀಜ ಸೇರಿ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು 10 ಸಾವಿರ ರೂಪಾಯಿ ಅವರ ಖಾತೆಗಳಿಗೆ ನೇರವಾಗಿ ಜಮೆ ಮಾಡಲಾಗುವುದು. ಜತೆಗೆ ಗ್ರಾಮ ಪಂಚಾಯಿತಿಗೆ ಒಂದರಂತೆ ಹೈಟೆಕ್ ಸರ್ಕಾರಿ ಶಾಲೆಯನ್ನು ನಿರ್ಮಿಸಿ, ಬಡವರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಶ್ರಮಿಸುವುದು ನಮ್ಮ ಕನಸಾಗಿದೆ. ಆ ನಿಟ್ಟಿನಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಸೇರಿ ರಾಜ್ಯದಲ್ಲಿ ಜೆಡಿಎಸ್‌ನ ಪ್ರತಿ ಕಾರ್ಯಕರ್ತರು ಕಾರ್ಯೋನ್ಮುಖರಾಗಿದ್ದೇವೆ ಎಂದರು.
ಜೆಡಿಎಸ್ ಅಧಿಕಾರಕ್ಕೆ ಬಂದ 15 ದಿನದಲ್ಲಿ ಮಹಿಳೆಯರು ಒಗ್ಗೂಡಿಕೊಂಡು ಮಾಡಿಕೊಂಡಿರುವ ಸ್ತ್ರೀ ಶಕ್ತಿ ಸ್ವ-ಸಹಾಯ ಗುಂಪುಗಳ ಸಾಲ ಮನ್ನಾ, ಹಿರಿಜೀವಗಳ ಸಂಕಷ್ಟ ನಿವಾರಿಸಲು 65 ವರ್ಷ ಮೇಲ್ಪಟ್ಟವರಿಗೆ ಮಾಸಿಕ 5 ಸಾವಿರ ರೂ. ವೃದ್ಧಾಪ್ಯ ವೇತನ, ವಿಧವಾ ಹಾಗೂ ಅಂಗವಿಕಲರಿಗೆ 5 ಸಾವಿರ ರೂ.ಮಾಸಾಸನ ನೀಡಲಾಗುವುದು ಎಂದರು.
ಚೀಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಸ್ತೆಜಕ್ಕಸಂದ್ರ, ದೇವರಕಗ್ಗಲಹಳ್ಳಿ, ಚೀಲೂರು ಕಾಳೇಗೌಡನದೊಡ್ಡಿ ಸೇರಿ ಹಲವು ಕಡೆಗಳಲ್ಲಿ ಪ್ರಚಾರ ನಡೆಸಿದರು.
ಮುಖಂಡರಾದ ಬನ್ನಿಕುಪ್ಪೆರಾಜು, ರವಿಕುಮಾರ್, ಪ್ರವೀಣ ಗಬ್ಬಾಡಿ, ಕೆಂಪರಾಮು, ಸುಧಾನಾಗೇಶ್, ಕೃಷ್ಣಮೂರ್ತಿ, ಭೈರೆಗೌಡನವಲಸೆರೆಡ್ಡಿ, ಸಿದ್ದಪ್ಪ, ತಿಮ್ಮಪ್ಪ ಇದ್ದರು.
ಯುವಜನರ ಸಬಲೀಕರಣ: ರಾಜ್ಯದಲ್ಲಿ ಜೆಡಿಎಸ್ ಸರ್ಕಾರ ಬರುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ರೈತರು, ಮಹಿಳೆಯರು, ಯುವಕರು ಸೇರಿ ಎಲ್ಲ ವರ್ಗದವರ ಅಭಿವೃದ್ಧಿಗೆ ಒತ್ತು ನೀಡಿದ್ದು, ಯುವಜನರಿಗೆ ಉದ್ಯೋಗ ಕಲ್ಪಿಸುವುದರಿಂದ ಹಿಡಿದ ಅವರ ಸರ್ವತೋಮುಖ ಬೆಳವಣಿಗೆಗೆ ಸಹಕಾರ ನೀಡಲಾಗುವುದು. 18 ವರ್ಷ ಮೇಲ್ಪಟ್ಟ ಕಾಲೇಜು ವಿದ್ಯಾಭ್ಯಾಸ ಮಾಡುತ್ತಿರುವ ಯುವತಿಯರಿಗೆ ಉಚಿತ ಮೊಪೆಡ್‌ಗಳನ್ನು ವಿತರಿಸುವ ಮೂಲಕ ವಿದ್ಯಾಭ್ಯಾಸಕ್ಕೆ ಅನುಕೂಲ ಕಲ್ಪಿಸಲಾಗುವುದು ಎಂದು ಎಂದು ನಿಖಿಲ್ ತಿಳಿಸಿದರು.
ಗ್ರಾಪಂಗೊಂದು ಹೈಟೆಕ್ ಆಸ್ಪತ್ರೆ: ಪ್ರತಿ ಗ್ರಾಮ ಪಂಚಾಯಿತಿಗೆ 30 ಬೆಡ್‌ಗಳ ಸುಸಜ್ಜಿತವಾದ ಹೈಟೆಕ್ ಆಸ್ಪತ್ರೆ ನಿರ್ಮಾಣ ಮಾಡಿ ಬಡವರ ಆರೋಗ್ಯ ಕಾಪಾಡುವುದು ಜೆಡಿಎಸ್ ಗುರಿಯಾಗಿದೆ. ಪಂಚರತ್ನ ಕಾರ್ಯಕ್ರಮಗಳ ಮೂಲಕ ಜನರ ಬಾಳಿಗೆ ಬೆಳಕಾಗುವುದು ಧ್ಯೇಯವಾಗಿದ್ದು, ಗ್ಯಾಸ್ ಬೆಲೆ ಬಿಜೆಪಿ ಸರ್ಕಾರವು ಬಡವರ ಕೈಗೆಟುಕದಂತೆ ಮಾಡಿದ್ದು, ಜೆಡಿಎಸ್‌ನಿಂದ ವಾರ್ಷಿಕವಾಗಿ ಬಡವರಿಗೆ 5 ಸಿಲಿಂಡರ್‌ಗಳನ್ನು ಉಚಿತ ನೀಡಿ ನೆರವಾಗುತ್ತೇವೆ ಎಂದು ನಿಖಿಲ್ ಭರವಸೆ ನೀಡಿದರು.
10ರಂದು ಜನ ನಿರ್ಧರಿಸಲಿದ್ದಾರೆ
ರಾಮನಗರ: ಕ್ಷೇತ್ರದ ಪ್ರವಾಸದ ವೇಳೆ ಜನರಿಂದ ಉತ್ತಮ ಸ್ಪಂದನೆ ಸಿಗುತ್ತಿದೆ. ಕ್ಷೇತ್ರದ ಜನತೆ ನಮ್ಮ ಕುಟುಂಬವನ್ನು ರಾಜಕಾರಣಿಗಳು ಎನ್ನುವುದಕ್ಕಿಂತ ಮನೆ ಮಕ್ಕಳಂತೆ ನೋಡುತ್ತಿದ್ದಾರೆ ಎಂದು ರಾಮನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹೇಳಿದರು.
ನಗರದ ಬಾಲಗೇರಿಯಲ್ಲಿ ಸೋಮವಾರ ಬಿಜೆಪಿ ಮುಖಂಡ ಶಂಕರ್‌ರಾವ್ ಮತ್ತು ಬೆಂಬಲಿಗರನ್ನು ಪಕ್ಷಕ್ಕೆ ಸ್ವಾಗತಿಸಿ ಮಾತನಾಡಿದರು.
ಬಾಲಗೇರಿ ನಿವಾಸಿ ಶಂಕರ್‌ರಾವ್ ಅವರು ಜೆಡಿಎಸ್‌ಗೆ ಮರಳಿರುವುದು ಪಕ್ಷಕ್ಕೆ ದೊಡ್ಡ ಶಕ್ತಿ ಬಂದಂತಾಗಿದೆ. ಶಂಕರ್‌ರಾವ್ ಅವರ ತಂದೆಯವರು ಜೆಡಿಎಸ್‌ನ ಕಟ್ಟಾಳು. ಒಂದಿಷ್ಟು ಅಡೆತಡೆಗಳಿಂದ ಶಂಕರ್‌ರಾವ್ ಜೆಡಿಎಸ್‌ನಿಂದ ದೂರ ಇದ್ದರು. ಇದೀಗ ಮನೆಗೆ ಮರಳಿದ್ದಾರೆ. ಈ ಭಾಗದಲ್ಲಿ ಜೆಡಿಎಸ್‌ಗೆ ಶಕ್ತಿ ವೃದ್ಧಿಸಿದೆ. ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ, ಅನಿತಾಕುಮಾರಸ್ವಾಮಿ ಅವರು ಪ್ರಾಮಾಣಿಕವಾಗಿ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ್ದಾರೆ ಎಂದರು.
ಹಾರೋಹಳ್ಳಿ, ಮರಳವಾಡಿ ಹೋಬಳಿಗಳಲ್ಲಿ ಕಾಂಗ್ರೆಸ್, ಬಿಜೆಪಿಯವರು ನಮ್ಮದೇ ರಾಜ್ಯ ಎನ್ನುವಂತೆ ಕಲ್ಪಿಸಿಕೊಳ್ಳುತ್ತಿದ್ದಾರೆ. ಆದರೆ, ಅಲ್ಲಿ ಜೆಡಿಎಸ್ ವಾತಾವರಣ ಹೇಗಿದೆ ಎಂದು ಆ ಕ್ಷೇತ್ರದ ಮಹಾ ಜನರೇ ಮೇ 13 ರಂದು ಹೇಳುತ್ತಾರೆ ಎಂದು ಸುದ್ದಿಗಾರರ ಪ್ರಶ್ನೆಗೆ ನಿಖಿಲ್ ಪ್ರತಿಕ್ರಿಯಿಸಿದರು.
ಮುಖಂಡರಾದ ರಾಜಶೇಖರ್, ನಗರಸಭಾ ಮಾಜಿ ಸದಸ್ಯ ಎ.ರವಿ, ಗೂಳಿಕುಮಾರ್, ರಮೇಶ್, ಕಂಟ್ರಾಕ್ಟರ್ ಪ್ರಕಾಶ್, ಮಾಜಿ ಸದಸ್ಯ ಕಾಡನಕುಪ್ಪೆ ರಾಘವೇಂದ್ರ, ಅವ್ವೇರಹಳ್ಳಿ ಪ್ರಶಾಂತ್, ನಂದೀಶ್‌ಗೌಡಸ್ವಾಮಿ, ತುಂಬೇನಹಳ್ಳಿ ಅಜಯ್, ಅಂಜನಾಪುರ ಕಿರಣ್, ಬನ್ನಿಕುಪ್ಪೆ ಮಧು, ಹನುಮಂತ, ನಗರಸಭಾ ಸದಸ್ಯ ರಮೇಶ್ ಇದ್ದರು.