ಕೋಲಾರದಲ್ಲಿ ಡಿಸಿಸಿ ಬ್ಯಾಂಕ್​ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಅಂಗವಿಕಲ ಪ್ರಸಾದ್​ಗೆ ಆಟೋ ಖರೀದಿಗೆ ನೆರವಾದರು. 
ಜಿಲ್ಲೆ

ಅಂಗವಿಕಲನ ಬದುಕಿಗೆ ಆಟೋ ನೆರವು: ಸ್ನೇಹಿತರ ಮೂಲಕ 1.20 ಲಕ್ಷ ರೂ. ಆಟೋ ಖರೀದಿಗೆ ಸಹಕರಿಸಿದ ಗೋವಿಂದಗೌಡ

ಕೋಲಾರ : ಮಧುಮೇಹದಿಂದಾಗಿ ಕಾಲು ಕಳೆದುಕೊಂಡು ಜೀವನ ನಿರ್ವಹಣೆಗೆ ತೊಂದರೆ ಅನುಭವಿಸುತ್ತಿದ್ದ ನಗರದ ಕೋಟೆ ಬಡಾವಣೆಯ ಪ್ರಸಾದ್​ಗೆ ಆಟೋ ಖರೀದಿಸಿಕೊಡುವ ಮೂಲಕ ಕೋಲಾರ, ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್​ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಹೃದಯವಂತಿಕೆ ಮೆರೆದಿದ್ದಾರೆ.

ಬಾಡಿಗೆ ಆಟೋ ಓಡಿಸುತ್ತಿದ್ದ ಪ್ರಸಾದ್​ ಗ್ಯಾಂಗ್ರಿನ್​ ಆಗಿ ಎಡಗಾಲು ಕಳೆದುಕೊಂಡಾಗ ಬಾಡಿಗೆ ಆಟೋ ಸಹ ಸಿಗದಾಯಿತು. ಆದಾಯವಿಲ್ಲದೆ, ಸಂಸಾರ ನಿರ್ವಹಣೆ ಹೊರೆಯಾಯಿತು. ಪತ್ನಿ, ಪುತ್ರನೂ ಸಂಕಷ್ಟಕ್ಕೆ ಸಿಲುಕಿದ್ದರು. ಆ ಕುಟುಂಬದ ಸಂಕಷ್ಟವನ್ನು ಗೋವಿಂದಗೌಡರ ಗಮನಕ್ಕೆ ತಂದಾಗ ಕೂಡಲೇ ಆತನನ್ನು ಕರೆಸಿ ಆಟೋ ಓಡಿಸಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರಸಾದ್​ ಒಪ್ಪಿಗೆ ಸೂಚಿಸಿದ್ದು, ಅದರಂತೆ ಆಟೋ ವ್ಯವಸ್ಥೆ ಮಾಡಿದ್ದಾರೆ.

ಗೋವಿಂದಗೌಡರ ಪ್ರಯತ್ನದ ಫಲವಾಗಿ 1.20 ಲಕ್ಷ ರೂ.ಗೆ ಆಟೋ ಖರೀದಿಸಿಕೊಡಲಾಗಿದೆ. ಸಂಬಂಧಿಕರು, ಬಂಧುಗಳು ಕಷ್ಟಕಾಲದಲ್ಲಿ ಕೈಹಿಡಿಯಲಿಲ್ಲ. ಗೋವಿಂದಗೌಡರು ನೆರವಿಗೆ ಬಂದಿದ್ದರಿಂದ ಕುಟುಂಬ ನಿರ್ವಹಣೆಗೆ ಆಟೋ ಸಹಕಾರಿಯಾಗುತ್ತದೆ. ದುಡಿದು ಊಟ ಹಾಕುವ ಮೂಲಕ ಸ್ವಾವಲಂಬಿ ಬದುಕು ನಿರ್ವಹಿಸುತ್ತೇನೆ ಎಂದು ಪ್ರಸಾದ್​ ಹರ್ಷ ವ್ಯಕ್ತಪಡಿಸಿದರು.

ಡಿಸಿಸಿ ಬ್ಯಾಂಕ್​ ನಿರ್ದೇಶಕ ನಾಗನಾಳ ಸೋಮಣ್ಣ ಮಾತನಾಡಿ, ಗೋವಿಂದಗೌಡರ ಮಾನವೀಯ ಗುಣ ಮಾದರಿಯಾಗಿದೆ. ಗೌಡರು ಈಗಾಗಲೇ ಸಾವಿರಾರು ಮಂದಿಗೆ ನೆರವಾಗಿದ್ದಾರೆ. ದಿನಕ್ಕೆ ಒಂದಿಬ್ಬರಾದರೂ ಕಿಡ್ನಿ, ಹೃದಯ ಸಮಸ್ಯೆ, ಶಿಕ್ಷಣಕ್ಕೆ ನೆರವು ಕೋರಿ ಬರುತ್ತಿದ್ದು, ನೆರವು ಒದಗಿಸುವ ಮೂಲಕ ಹೃದಯವಂತಿಕೆ ಮೆರೆಯುತ್ತಿದ್ದಾರೆ ಎಂದರು.

ಜಿಲ್ಲೆಯಲ್ಲಿನ ಪರಿಸರ ಮಾಲಿನ್ಯವೋ, ನೀರಿನ ಸಮಸ್ಯೆಯೋ ಗೊತ್ತಿಲ್ಲ. ಹೆಚ್ಚು ಕಿಡ್ನಿ ಸಂಬಂಧಿತ ಪ್ರಕರಣಗಳು ಪತ್ತೆಯಾಗುತ್ತಿವೆ. ಅನೇಕರು ಚಿಕಿತ್ಸೆಗೂ ಪರದಾಡುತ್ತಿದ್ದಾರೆ ಎಂದು ತಿಳಿಸಿದರು.

ಹಣ ನೀಡಿದ್ದರೆ ಅದು ಕೆಲವೇ ದಿನಗಳಲ್ಲಿ ಮುಗಿದು ಹೋಗುತ್ತಿತ್ತು. ಆದರೆ ಆಟೋ ನೀಡಿರುವುದರಿಂದ ಅಂಗವಿಕಲನೂ ಸ್ವಾವಲಂಬಿ ಜೀವನ ನಡೆಸಲು ಅವಕಾಶ ಕಲ್ಪಿಸಿದಂತಾಗಿದೆ.

|ಬ್ಯಾಲಹಳ್ಳಿ ಗೋವಿಂದಗೌಡ, ಡಿಸಿಸಿ ಬ್ಯಾಂಕ್​ ಅಧ್ಯಕ್ಷ