ಜಿಲ್ಲೆ

ಆಟೋ ಪಲ್ಟಿಯಾಗಿ ವಿದ್ಯಾರ್ಥಿಗಳಿಗೆ ಗಾಯ

Kopala - Raveendra V K

ಕೊಪ್ಪಳ : ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 60ರಲ್ಲಿ ಮಂಗಳವಾರ ಸಂಜೆ ಆಟೋ ಪಟ್ಟಲಿಯಾಗಿ 30ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಾಯಗಳಾಗಿವೆ. ಮಕ್ಕಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಕೊಪ್ಪಳ ತಾಲೂಕಿನ ಬೂದಗುಂಪಾ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಮಂಗಳವಾರ ಬೂದಗುಂಪಾ ಕ್ಲಸ್ಟರ್​ ಮಟ್ಟದ ಕ್ರೀಡಾಕೂಟಕ್ಕೆಂದು ಕೊಪ್ಪಳಕ್ಕೆ ಆಗಮಿಸಿದ್ದರು. ಸುರತ ವಾಹನದಲ್ಲಿ ಮಕ್ಕಳನ್ನು ಕಳಿಸುವ ಬದಲು ಗೂಡ್ಸ್​ ವಾಹನದಲ್ಲಿ 40ಕ್ಕೂ ಹೆಚ್ಚು ಮಕ್ಕಳನ್ನು ಕರೆತಂದಿದ್ದಾರೆ. ಕ್ರೀಡಾಕೂಟ ಮುಗಿಸಿಕೊಂಡು ವಾಪಸ್​ ತೆರಳುವಾಗ ರಸ್ತೆಯಲ್ಲಿ ಆರ್​ಟಿಒ ಅಧಿಕಾರಿಗಳು ಹೋಮ್​ ಗಾರ್ಡ್​ ಅಧಿಕಾರಿಗಳ ಸಹಾಯದಿಂದ ವಾಹನ ನಿಲ್ಲಿಸುವಂತೆ ಕೈ ಮಾಡಿದ್ದಾರೆ.

ಇದರಿಂದ ಹೆದರಿದ ಆಟೋ ಚಾಲಕ ಅಡ್ಡಾದಿಡ್ಡಿ ವಾಹನ ಓಡಿಸಿದ್ದಾನೆ. ಆಯ ತಪ್ಪಿ ಆಟೋ ಪಲ್ಟಿಯಾಗಿದೆ. 30ಕ್ಕೂ ಹೆಚ್ಚು ಮಕ್ಕಳಿಗೆ ಗಾಯವಾಗಿದೆ. ಸ್ಥಳದಲ್ಲಿದ್ದ ಸಾರ್ವಜನಿಕರು ಮಕ್ಕಳು ಅವಡಕ್ಕೆ ಕಾರಣವಾದ ಗೃಹರಕ್ಷ ಸಿಬ್ಬಂದಿಗೆ ಥಳಿಸಲು ಮುಂದಾಗಿದ್ದಾರೆ. ಈ ವೇಳೆ ಹೊಲದಲ್ಲಿ ಓಡಿ ಹೋಗಿ ತಪ್ಪಿಸಿಕೊಂಡಿದ್ದಾರೆ. ಆರ್​ಟಿಒ ಇನ್ಸಪೆಕ್ಟರ್​ ಮಕ್ಕಳೊಂದಿಗೆ ಜಿಲ್ಲಾಸ್ಪತ್ರೆಗೆ ಬಂದಿದ್ದಾರೆ. ಮಕ್ಕಳ ತಲೆ, ಕೈ, ಕಾಲು, ಕಣ್ಣಿನ ಭಾಗ, ಎದೆ ಎಲುಬಿಗೆ ಗಾಯಗಳಾಗಿವೆ. ಗಂಭೀರ ಗಾಯ ಹಾಗೂ ಪ್ರಾಣಾಪಾಯ ಸಂಭವಿಸಿಲ್ಲ. ವಾಹನ ಚಾಲಕನಿಗೂ ಗಾಯಗಳಾಗಿವೆ.

ವಿಷಯ ತಿಳಿದು ಶಾಸಕ ರಾಘವೇಂದ್ರ ಹಿಟ್ನಾಳ, ಬಿಇಒ ಶಂಕ್ರಯ್ಯ ಟಿ.ಎಸ್​., ಡಿವೈಎಸ್ಪಿ ಮುತ್ತಣ್ಣ ಸರವಗೋಳ, ಸಿಪಿಐ ಸುರೇಶ ಡಿ., ನಗರಠಾಣೆ ಪಿಐ ಜಯಪ್ರಕಾಶ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶರಣಬಸನಗೌಡ ಪಾಟೀಲ್​ ಹಾಗೂ ಇತರ ಪದಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಮಕ್ಕಳಿಗೆ ಸೂಕ್ತ ಚಿಕಿತ್ಸೆ ನೀಡಲು ಸೂಚಿಸಿದರು. ಮಕ್ಕಳ ಅಪಘಾತ ಸುದ್ದಿ ಕೇಳಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲಕರು ಆಸ್ಪತ್ರೆಗೆ ಧಾವಿಸಿದರು. ಇದರಿಂದ ಕೆಲ ಕಾಲ ಜಿಲ್ಲಾಸ್ಪತ್ರೆಯಲ್ಲಿ ಗದ್ದಲ ಉಂಟಾಯಿತು. ಕೊಪ್ಪಳ ನಗರಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.