ಜಿಲ್ಲೆ

ಯುವಕರಿಗೆ ಸಾಹಿತ್ಯ ಕೃಷಿಯತ್ತ ಇರಲಿ ಚಿತ್ತ

ಹೊನ್ನಾಳಿ: ಕವಿ ಎಚ್​ಎಸ್​ವಿ ಕವಿತೆಗಳಲ್ಲಿ ಸಂವೇದನೆ, ಭಾವನೆಗಳನ್ನೊಳಗೊಂಡ ಒಳ್ಳೆಯ ಸಂದೇಶಗಳು ಇವೆ ಎಂದು ಲೇಖಕ, ನಿವೃತ್ತ ಮುಖ್ಯಶಿಕ್ಷಕ ಕೆ.ಪಿ. ದೇವೇಂದ್ರಯ್ಯ ಹೇಳಿದರು.

ಪಟ್ಟಣದ ರೂಪದರ್ಶಿ ಮಹಿಳಾ ಮಂಡಳಿ ತರಬೇತಿ ಕೇಂದ್ರದಲ್ಲಿ ಮಂಗಳವಾರ ಹೊನ್ನರಳಿ ಸಾಹಿತ್ಯ ಬಳಗದ ವತಿಯಿಂದ ಡಾ.ಎಚ್.ಎಸ್. ವೆಂಕಟೇಶಮೂರ್ತಿ ಮತ್ತು ರೈತ ಹೋರಾಟಗಾರ ಜಿ.ಬಿ. ಧನರಾಜಪ್ಪ ಅವರಿಗೆ ಹಮ್ಮಿಕೊಂಡಿದ್ದ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಲೇಖಕರು ಹಾಗೂ ವಿಮರ್ಶಕರು ಸೇರಿ ಹಲವಾರು ಸೃಜನಶೀಲ ಮೇರು ಸಾಹಿತಿಗಳನ್ನು ಕಳೆದುಕೊಳ್ಳುತ್ತಿದ್ದೇವೆ, ಯುವ ಸಮುದಾಯ ಸಾಹಿತ್ಯ ಕೃಷಿಯತ್ತ ಚಿತ್ತ ಹರಿಸಬೇಕು ಎಂದು ಸಲಹೆ ನೀಡಿದರು.

ಯೋಧರ ಬಗ್ಗೆ ಕೃತಿ ರಚಿಸದ ವೇಳೆಯಲ್ಲಿ ಸಾಹಿತಿ ಎಚ್​ಎಸ್​ವಿ ಅವರು ಸೈನಿಕನ ವೃತ್ತಾಂತ ಎಂಬ ನಾಟಕ ಕೃತಿ ರಚಿಸಿದರು. ಅವರ ಕಷ್ಟ ಕಾರ್ಪಣೆಗಳನ್ನು ನಾಟಕದಲ್ಲಿ ಎಳೆಎಳೆಯಾಗಿ ಬಿಚ್ಚಿಟ್ಟರು ಎಂದರು.

ಸದಾ ಹಸಿರು ಶಾಲು ಧರಿಸುತ್ತಿದ್ದ ಜಿ.ಬಿ. ಧನರಾಜಪ್ಪ ರೈತ ಹೋರಾಟಗಾರ ಮತ್ತು ಒಗಟು, ಗಾದೆಮಾತುಗಳ ಪರಿಚಾರಕ ಜತೆ ನಾಟಕ ಸಾಹಿತಿ ಎಂದು ತಿಳಿಸಿದರು.

ಹಿರಿಯ ಸಾಹಿತಿ ಯು.ಎನ್. ಸಂಗನಾಳಮಠ ಮಾತನಾಡಿ, ಮಿತ ಹಾಗೂ ಹಿತ ಭಾಷಿಯಾಗಿದ್ದ ಕವಿ ಎಚ್​ಎಸ್​ವಿ ಅವರು ಸ್ನೇಹಿ ಜೀವಿಯಾಗಿದ್ದರು. ತಾಲೂಕು ಮತ್ತು ಜಿಲ್ಲಾ ಸಾಹಿತ್ಯ ಸಮ್ಮೇಳನ ಹಾಗೂ 85ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿ, ಸಾಹಿತ್ಯ ಕ್ಷೇತ್ರದಲ್ಲಿ ಬಹುದೊಡ್ಡ ಸಾಧನೆ ಮಾಡಿದ್ದರು ಎಂದು ಹೇಳಿದರು.

ರಂಗ ಕಲಾವಿದ ಪ್ರೇಮಕುಮಾರ್​ಭಂಡಿಗಡಿ, ಶಿಕ್ಷಕರಾದ ಷಣ್ಮುಖಯ್ಯ, ಸಿದ್ದಯ್ಯ, ಪುರಸಭೆ ಸದಸ್ಯ ಸುರೇಶ್ ಹೊಸಕೇರಿ, ಶುಭಶ್ರೀ, ನಾರಾಯಣ ಗೋಣಿಗೆರೆ, ನಿವೃತ್ತ ಮುಖ್ಯಶಿಕ್ಷಕ ಎಂ.ಪಿ.ಎಂ. ವಿಜಯಾನಂದಸ್ವಾಮಿ ಮಾತನಾಡಿದರು.

ತಾಲೂಕು ಕಸಾಪ ಕಾರ್ಯದರ್ಶಿ ಶೇಖರಪ್ಪ, ಮಾಜಿ ಅಧ್ಯಕ್ಷ ಎಂ.ಎಸ್. ರೇವಣಪ್ಪ, ನಿವೃತ್ತ ಉಪನ್ಯಾಸಕ ಡಿ. ಶಿವರುದ್ರಪ್ಪ, ಕಡದಕಟ್ಟೆ ತಿಮ್ಮಪ್ಪ, ಮಂಜಪ್ಪ, ಕತ್ತಿಗೆ ನಾಗರಾಜು, ರೂಪದರ್ಶಿ ಮಹಿಳಾ ಮಂಡಳಿ ತರಬೇತಿ ಕೇಂದ್ರದ ಎ.ಜಿ. ಹೇಮಲತಾ, ಎ.ಜಿ. ಸುನಂದಾ ಹಾಗೂ ಇತರರು ಇದ್ದರು.