ಬೆಂಗಳೂರು: ಕಡಿಮೆ ದೃಷ್ಟಿ ಹೊಂದಿರುವವರಿಗಾಗಿ ನಾರಾಯಣ ನೇತ್ರಾಲಯವು ಎಸ್‌ಎಚ್‌ಜಿ ಟೆಕ್ನಾಲಜೀಸ್ ಸಹಯೋಗದಲ್ಲಿ ಮೇಡ್ ಇನ್ ಇಂಡಿಯಾ ಪರಿಕಲ್ಪನೆಯಡಿ ದೃಷ್ಟಿ ಸಹಾಯಕ ಸಾಧನ ‘ಔರಾ ವಿಷನ್’ಅನ್ನು ಅಭಿವೃದ್ಧಿ ಪಡಿಸಿರುವುದಾಗಿ ನಾರಾಯಣ ನೇತ್ರಾಲಯದ ಉಪಾಧ್ಯಕ್ಷ ಡಾ. ನರೇನ್ ಶೆಟ್ಟಿ ತಿಳಿಸಿದರು.
ಈ ಕುರಿತು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ‘ಔರಾ ವಿಷನ್’ ಕುರಿತು ಪ್ರಾತ್ಯಕ್ಷಿಕೆ ನೀಡಿ ಮಾತನಾಡಿದ ಅವರು, ಬಹುಕ್ಯಾಮೆರಾ ಸಂಯೋಜಿತ ತಂತ್ರಜ್ಞಾನ ಆಧಾರಿತ ಈ ಸಾಧನವು ದೇಶದಲ್ಲಿ ಇದೇ ಮೊದಲ ಬಾರಿಗೆ ಪರಿಚಯಿಸಲಾಗುತ್ತಿದೆ ಎಂದು ಹೇಳಿದರು.
ಸಾಮಾನ್ಯ ದೃಷ್ಟಿ ತೀಕ್ಷ್ಣತೆಯನ್ನು 6/6 ಎಂದು ವ್ಯಾಖ್ಯಾನಿಸಲಾಗುತ್ತದೆ. ಅಂದರೆ ಒಬ್ಬ ವ್ಯಕ್ತಿ ಸಾಮಾನ್ಯ ದೃಷ್ಟಿಯು 6 ಮೀಟರ್ ದೂರದಲ್ಲಿ ಎಲ್ಲವನ್ನೂ ಸ್ಪಷ್ಟವಾಗಿ ನೋಡಬಹುದಾಗಿದೆ. 6/18ರಿಂದ ಕಡಿಮೆ ಇದ್ದರೆ ದೃಷ್ಟಿದೋಷ ಎಂದು ಗುರುತಿಸಲಾಗುತ್ತದೆ. ತೀಕ್ಷ್ಣತೆ 3/60ಕ್ಕಿಂತ ಕಡಿಮೆಯಾದರೆ ಅಂಧರಾಗುತ್ತಾರೆ. ವಯಸ್ಸು, ಅನುವಂಶಿಯತೆ, ಆಘಾತ, ಮ್ಯಾಕ್ಯುಲರ್ ಡಿಜನರೇಶನ್, ಡಯಾಬಿಟಿಕ್ ರೆಟಿನೋಪಥಿ, ಗ್ಲುಕೋಮಾ ರೆಟಿನೈಟಿಸ್ ಪಿಗ್ಮೆಂಟೋಸಾ, ಅಕ್ಷಿಪಟಲದ ಬೇರ್ಪಡುವಿಕೆ, ಆಪ್ಟಿಕ್ ಕ್ಷೀಣತೆಗಳೆಲ್ಲ ಕಣ್ಣಿನ ಸಮಸ್ಯೆಗಳಿಗೆ ಕಾರಣವಾಗುತ್ತವೆ ಎಂದು ವಿವರಿಸಿದರು.
ದೃಷ್ಟಿ ಮಂದವಾದಾಗ ಚಲನಶೀಲತೆಯ ತೊಂದರೆ, ಓದುವ ಸಮಸ್ಯೆ, ಸಂವಹನ, ಸಂಪರ್ಕದ ಸಮಸ್ಯೆಗಳು ಉಂಟಾಗುತ್ತವೆ. ಅವರ ಸಹಾಯಕ್ಕೆ ಸುಧಾರಿತ ಅಗ್ಮೆಂಟೆಡ್ ರಿಯಾಲಿಟಿ (ಎಆರ್) ತಂತ್ರಜ್ಞಾನವನ್ನು ಬಳಸಿ ‘ಔರಾ ವಿಷನ್’ ಸಾಧನ ತಯಾರಿಸಲಾಗಿದೆ. ಏಕಕಾಲದಲ್ಲಿ ಸಮೀಪ ಮತ್ತು ದೂರದ ದೃಷ್ಟಿ ಸಮಸ್ಯೆಗೆ ಇದು ಪರಿಹಾರ ಒದಗಿಸಲಿದೆ. ಇದರಲ್ಲಿ ಝೂಮ್, ವೈಡ್‌ಮೋಡ್‌ಗಳು ಇದ್ದು, ಬಟನ್ ಮೂಲಕ ಮಾತ್ರವಲ್ಲದೆ ಧ್ವನಿ ಮತ್ತು ಸನ್ನೆಯ ಸಹಾಯದಿಂದಲೂ ಕಾರ್ಯನಿರ್ವಹಿಸುತ್ತದೆ. ಮಾತಿನಲ್ಲೇ ಆದೇಶ ನೀಡಿದರೆ ಅದರಂತೆ ಕೆಲಸ ಮಾಡುತ್ತದೆ ಎಂದು ಮಾಹಿತಿ ನೀಡಿದರು.
ವಸ್ತು ಗುರುತಿಸುವಿಕೆ, ಸ್ಟೆಲ್ ವರ್ಡ್ ಮೋಡ್, ಕೇಂದ್ರ ಮತ್ತು ಬಾಹ್ಯದೃಷ್ಟಿ ನಷ್ಟಕ್ಕೆ ಪರಿಹಾರ, ಮಸುಕಾದ ದೃಷ್ಟಿ ಪರಿಹಾರಗಳು ಇದರಲ್ಲಿ ಸಾಧ್ಯ. ಒಂದು ಬಾರಿ ಚಾರ್ಚ್ ಮಾಡಿದರೆ ನಾಲ್ಕು ಗಂಟೆ ಬಳಸಬಹುದು. ಇದರ ಮೊತ್ತ 1 ಲಕ್ಷದ ಒಳಗೆ ಇದೆ ಎಂದರು.
ಈ ವೇಳೆ ‘ಔರಾ ವಿಷನ್’ ಕನ್ನಡಕ ಬಳಸುತ್ತಿರುವ ರೋಗಿಗಳು ಜೀವನದಲ್ಲಿ ಆಗಿರುವ ಬದಲಾವಣೆಯ ಅನುಭವನಗಳನ್ನು ಹಂಚಿಕೊಂಡರು. ಎಸ್‌ಎಚ್‌ಜಿ ಟೆಕ್ನಾಲಜೀಸ್ ಸಿಇಒ ಸೀತಾರಾಮ್ ಮುತ್ತಂಗಿ, ನಾರಾಯಣ ನೇತ್ರಾಲಯದ ಸಿಇಒ ಎಸ್.ಕೆ. ಮಿತ್ತಲ್, ಮಕ್ಕಳ ನೇತ್ರ ವಿಭಾಗದ ಮುಖ್ಯಸ್ಥೆ ಡಾ.ಭಾನುಮತಿ, ವೈದ್ಯರಾದ ಡಾ. ಪೂಜಾ, ಡಾ. ಶೀಲಾ, ಡಾ. ಆನಂದ್ ಇತರರು ಇದ್ದರು.