ಹುಳಿಯಾರು : ತುಮಕೂರು ಜಿಲ್ಲಾ ಪಂಚಾಯಿತಿಯನ್ನು ಅತಂತ್ರ ವಾಡದೆ ಭಾರಿ ಬಹುಮತದೊಂದಿಗೆ ಬಿಜೆಪಿ ತೆಕ್ಕೆಗೆ ಕೊಟ್ಟರೆ ಜಿಲ್ಲೆಯಲ್ಲಿ ಅಭಿವೃದ್ಧಿ ಪರ್ವ ನಿಶ್ಚಿತ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು. ಹೋಬಳಿಯ ಬೆಳ್ಳಾರ ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ವಿವಿಧ ಪಕ್ಷದ ಕಾರ್ಯಕರ್ತರು ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಳೆದ ಬಾರಿ ತುಮಕೂರು ಜಿಲ್ಲಾ ಪಂಚಾಯಿತಿಗೆ ಅತಂತ್ರ ಫಲಿತಾಂಶ ನೀಡಿದ ಪರಿಣಾಮ ಮೈತ್ರಿ ಆಡಳಿತ ನಡೆಸಲಾಯಿತು. ಇದರಿಂದಾಗಿ ಅಭಿವೃದ್ಧಿ ಬಗ್ಗೆ ಯೋಚನೆ ಮಾಡದೆ ಕೇವಲ ಅಧಿಕಾರಕ್ಕೆ ಕಿತ್ತಾಡಿದರು. ಜಿಪಂನಲ್ಲಿ 600 ಕೋಟಿ ರೂ. ಇದ್ದರೂ ಸರಿಯಾಗಿ ಸಭೆ ನಡೆಸದೆ ಜಿಲ್ಲೆಯಲ್ಲಿ ಕೆಲಸ ಕಾರ್ಯಗಳು ಕುಂಠಿತವಾದವು. ಇದು ಅತಂತ್ರ ಫಲಿತಾಂಶದ ಫಲದ ನಿದರ್ಶನವಾಗಿದ್ದು, ಬಿಜೆಪಿಗೆ ಬಹುಮತ ಕೊಟ್ಟರೆ ಜಿಲ್ಲೆಯ ಅಭಿವೃದ್ಧಿ ಮಂತ್ರ ಪಠಿಸುವಂತೆ ಸದಸ್ಯರನ್ನು ತಯಾರಿ ಮಾಡುವುದಾಗಿ ತಿಳಿಸಿದರು.
ಬಿಜೆಪಿಯಲ್ಲಿ ಹೊಸಬ, ಹಳಬ ಎನ್ನುವ ಭೇದಭಾವ ಇರುವುದಿಲ್ಲ. ಏಕೆಂದರೆ ಬಿಜೆಪಿಗೆ ನಾನೇ ಹೊಸಬ. ಆದರೂ ನನ್ನನ್ನು ಕರೆದು ಮಂತ್ರಿ ವಾಡಿದ್ದಾರೆ. ಹಾಗಾಗಿ ಪಕ್ಷಕ್ಕೆ ಸೇರುವವರನ್ನು ಪ್ರೀತಿ ವಿಶ್ವಾಸದಿಂದ ಕಾಣುತ್ತೇನೆ ಎಂದರಲ್ಲದೆ, ಕಾರ್ಯಕರ್ತರು ಮತ್ತು ಮತದಾರರು ವೈಯಕ್ತಿಕ ಹಿತ ಬದಿಗಿಟ್ಟು ದೇಶದ ಒಳಿತಿಗೆ ಚುನಾವಣೆಯಲ್ಲಿ ಕೆಲಸ ಮಾಡಬೇಕು ಎಂದರು.
ಐದಾರು ಸಾವಿರ ರೂಪಾಯಿ ದುಡಿಯಲು ಹಳ್ಳಿಯಿಂದ ಪಟ್ಟಣಕ್ಕೆ ಬರುವುದನ್ನು ತಪ್ಪಿಸಿ ಮನೆ ಮುಂದೆಯೇ ದುಡಿಯುವ ವಾತಾವರಣ ನಿರ್ವಾಣ ಮಾಡಿದಾಗ ಹಳ್ಳಿಗರ ಅಭಿವೃದ್ಧಿ ಸಾಧ್ಯ. ಈ ನಿಟ್ಟಿನಲ್ಲಿ ತಾಲೂಕಿನ ಎಲ್ಲ ಕೆರೆಗಳನ್ನೂ ತುಂಬಿಸಿ ಜನರು ಕೃಷಿ ಜತೆ ಉಪಕಸುಬು ಮಾಡಿ ನೆಮ್ಮದಿಯ ಜೀವನ ನಡೆಸಲು ಅನುಕೂಲ ಮಾಡಲಾಗುವುದು ಎಂದರು.
ಜಿಪಂ ಮಾಜಿ ಸದಸ್ಯೆ ಮಂಜುಳಾ, ಮುಂಖಡರಾದ ಬರಕನಹಾಲ್ ವಿಶ್ವನಾಥ್, ನಿರಂಜನಮೂರ್ತಿ, ಶಂಕರಲಿಂಗಯ್ಯ, ಗ್ರಾಪಂ ಉಪಾಧ್ಯಕ್ಷೆ ಕಮಲಮ್ಮ, ಸದಸ್ಯರಾದ ರುವೀರ್, ರಾಧಮ್ಮ, ರೇಣುಕಮ್ಮ ಮತ್ತಿತರರು ಇದ್ದರು.
ಹಳೇ ಕ್ಷೇತ್ರದಲ್ಲಿ ಜನರನ್ನು ಅರ್ಥ ಮಾಡಿಕೊಂಡಿದ್ದೆ. ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದೆ. ಹಾಗಾಗಿಯೇ ಪಕ್ಷೇತರ ಅಭ್ಯರ್ಥಿಯಾಗಿಯೂ ಗೆದ್ದಿದ್ದೇನೆ. ದೇವೇಗೌಡ, ಸಿದ್ದರಾಮಯ್ಯ, ಪಟೇಲ್ ಎಲ್ಲರೂ ನನ್ನ ವಿರುದ್ಧ ಬಂದರೂ ಚುನಾವಣೇ ಎದುರಿಸಿ ಗೆದ್ದಿದ್ದೇನೆ. ಆದರೆ ಈ ಹೊಸ ಕ್ಷೇತ್ರ ನನಗೆ ಸ್ವಲ್ಪ ಕಷ್ಟವಾಗಿದೆ. ನಿಮಗೆ ನಾನು, ನನಗೆ ನೀವು ಅರ್ಥವಾಗುತ್ತಿಲ್ಲ. ಈ ಸಮಸ್ಯೆ ನಿವಾರಣೆ ಮಾಡಿಕೊಂಡು ಮುಂದಿನ ಚುನಾವಣೆ ಎದುರಿಸಲು ಕಾರ್ಯಕರ್ತರು ಸಜ್ಜಾಗಬೇಕು ಎಂದು ಜೆ.ಸಿ.ಮಾಧುಸ್ವಾಮಿ ತಿಳಿಸಿದರು.