ಮಂಗಳೂರು: ಭ್ರಾಮರಿ ಯಕ್ಷಮಿತ್ರರು ಮಂಗಳೂರು ಇದರ ಐದನೇ ವರ್ಷದ ಭ್ರಾಮರಿ ಯಕ್ಷವೈಭವ 2022 ಅ.27 ರಂದು ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಸಂಜೆ 7 ರಿಂದ ಮರುದಿನ ಮುಂಜಾನೆ ತನಕ ಜರುಗಲಿದೆ.
ಯಕ್ಷಗಾನದ ಹಿರಿಯ ಹಾಸ್ಯಕಲಾವಿದ ಪೆರುವಡಿ ನಾರಾಯಣ ಭಟ್ಟರಿಗೆ ಭ್ರಾಮರೀ ಯಕ್ಷಮಣಿ ಪ್ರಶಸ್ತಿ, ನೇಪಥ್ಯ ಕಲಾವಿದರಾದ ಗೋಪಾಲ ಪೂಜಾರಿ ಹಾಗೂ ಬೊಕ್ಕಸ ಜಗನ್ನಾಥ ರಾವ್ ಅವರಿಗೆ ಭ್ರಾಮರಿ ಯಕ್ಷಸೇವಾ ಪುರಸ್ಕಾರ ನೀಡಿ ಗೌರವಿಸಲಾಗುವುದು.
ಹಿರಿಯ ಯಕ್ಷಗಾನ ಪ್ರಸಂಗಕರ್ತ ಪೊಳಲಿ ನಿತ್ಯಾನಂದ ಕಾರಂತ ಅಧ್ಯಕ್ಷತೆ ವಹಿಸಲಿದ್ದು, ಮಂಗಳೂರು ಉತ್ತರದ ಶಾಸಕ ಡಾ.ವೈ.ಭರತ್ ಶೆಟ್ಟಿ, ಮೇಯರ್ ಪ್ರೇಮಾನಂದ ಶೆಟ್ಟಿ, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕ ಟಿ.ಜಿ.ರಾಜಾರಾಮ್ ಭಟ್, ಧಾರ್ಮಿಕ ಪರಿಷತ್ ಸದಸ್ಯ ನಿಡ್ಡೋಡಿ ಚಾವಡಿಮನೆ ಜಗನ್ನಾಥ ಶೆಟ್ಟಿ, ಮಂಗಳೂರು ಗಣೇಶೋತ್ಸವದ ಅಧ್ಯಕ್ಷ ಶಶಿಕಾಂತ್ ನಾಗ್ವೇಕರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ದಿ. ಬಲಿಪ ಪ್ರಸಾದ ಭಟ್ ಅವರ ಸಂಸ್ಮರಣೆ, ಯಕ್ಷಗಾನ ಪೂರ್ವರಂಗ, ಚೆಂಡೆ ಜುಗಲ್ ಬಂಧಿ, ಪ್ರಸಿದ್ದ ಕಲಾವಿದರ ಕೂಡುವಿಕೆಯಲ್ಲಿ ದಮಯಂತಿ ಪುನಃ ಸ್ವಯಂವರ, ಮಾಯಾತಿಲೋತ್ತಮೆ, ವೀರವರ್ಮ ಕಾಳಗ ಯಕ್ಷಗಾನದ ಪ್ರದರ್ಶನ ಜರಗಲಿದೆ. ಎಲ್ಲ ಕಾರ್ಯಕ್ರಮಗಳಿಗೆ ಉಚಿತ ಪ್ರವೇಶ ಎಂದು ಭ್ರಾಮರೀ ಯಕ್ಷಮಿತ್ರರು ಅಧ್ಯಕ್ಷ ವಿನಯಕೃಷ್ಣ ಕುರ್ನಾಡ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.