ಜಿಲ್ಲೆ

ದತ್ತಪೀಠದಲ್ಲಿರುವುದು ಔದುಂಬರ ವೃಕ್ಷ

ಬಾಳೆಹೊನ್ನೂರು: ಹಿಂದುಗಳ ಪವಿತ್ರ ಧಾರ್ಮಿಕ ಕ್ಷೇತ್ರ ಗುರು ದತ್ತಾತ್ರೇಯ ಪೀಠದ ಆವರಣದಲ್ಲಿ ಇರುವುದು ಔದುಂಬರ ವೃಕ್ಷವೇ ಹೊರತು ಅತ್ತಿ ಮರವಲ್ಲ ಎಂದು ವಿಶ್ವ ಹಿಂದು ಪರಿಷತ್ ಹಾಸನ ವಿಭಾಗದ ಸಹ ಕಾರ್ಯದರ್ಶಿ ಆರ್.ಡಿ.ಮಹೇಂದ್ರ ಹೇಳಿದರು.

ಶಾಖಾದ್ರಿ ವಂಶಸ್ಥ ಎಂದು ಹೇಳಿಕೊಳ್ಳುವ ಸೈಯ್ಯದ್ ಫಕ್ರುದ್ದಿನ್ ದತ್ತಪೀಠದ ಕುರಿತು ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳ ಮೂಲಕ ಕೆಲವು ವಿವಾದಾತ್ಮಕ ಹೇಳಿಕೆ ನೀಡಿ ಜನರ ದಾರಿ ತಪ್ಪಿಸುವ ಯತ್ನ ಮಾಡುತ್ತಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಗುರು ದತ್ತಾತ್ರೇಯರ ತಪೋಭೂಮಿಯಲ್ಲಿ ಇರುವ ಔದುಂಬರ ವೃಕ್ಷವನ್ನು ಅತ್ತಿ ಮರಕ್ಕೆ ಹೋಲಿಸಿ ಮಾತನಾಡಿರುವುದರಿಂದ ಹಿಂದು ಸಮಾಜಕ್ಕೆ ಮತ್ತು ದತ್ತಭಕ್ತರ ಭಾವನೆಗಳಿಗೆ ಧಕ್ಕೆ ಉಂಟಾಗಿದೆ. ದತ್ತಪೀಠದಲ್ಲಿ ನನ್ನ ತಾತನ ಗೋರಿಗಳಿಗೆ ಕುಂಕುಮ ಮತ್ತು ಅರಿಶಿಣ ಹಾಕಿ, ತೆಂಗಿನ ಕಾಯಿ ಒಡೆದಿದ್ದಾರೆ ಎಂದು ಸೈಯ್ಯದ್ ಫಕ್ರುದ್ದಿನ್ ಪೊಲೀಸ್ ಇಲಾಖೆಗೆ ಸುಳ್ಳು ದೂರು ಕೊಟ್ಟಿದ್ದಾರೆ ಎಂದರು.
ಶಾಖಾದ್ರಿ ಕುಟುಂಬಸ್ಥರಿಗೆ ಅವರ ವಂಶಸ್ಥರ ಗೋರಿಗಳಿಗೆ ಗೌರವ ಸಲ್ಲಿಸುವ ಮನಸ್ಸು ಇದ್ದರೆ ಸರ್ವೇ ನಂ.56ರ ನಾಗೇನಹಳ್ಳಿಯಲ್ಲಿ ಇರುವಂತಹ ಬಾಬಾಬುಡನ್ ದರ್ಗಾಕ್ಕೆ ಹೋಗಿ ಸಲ್ಲಿಸಬೇಕು. ಎಲ್ಲ ಸರ್ಕಾರಿ ದಾಖಲೆಗಳಲ್ಲಿ ಹಾಗೂ ಪಹಣಿಯಲ್ಲೂ ಬಾಬಾ ಬುಡನ್ ದರ್ಗಾ ಸ.ನಂ.57 ನಾಗೇನಹಳ್ಳಿ ಗ್ರಾಮ ಎಂದೇ ಉಲ್ಲೇಖವಾಗಿದೆ. ಹಾಗೆಯೇ ಸ.ನಂ.195ರಲ್ಲಿ ಶ್ರೀ ದತ್ತಾತ್ರೇಯ ಪೀಠ ಎಂದು ಉಲ್ಲೇಖವಿದೆ. ಇದನ್ನು ಮೊದಲು ಶಾಖಾದ್ರಿ ಕುಟುಂಬಸ್ಥರು ಎನ್ನುತ್ತಿರುವವರು ಅರ್ಥೈಸಿಕೊಳ್ಳಬೇಕು. ಶಾಖಾದ್ರಿ ವಂಶಸ್ಥರ ಸಮಾಧಿಗೆ ಹೋಗಿ ಪೂಜೆ ಮಾಡುವಷ್ಟು ಮೂರ್ಖರು ಹಿಂದು ಸಂಘಟನೆಯವರಲ್ಲ. ಹಿಂದುಗಳು ಪೂಜೆ ಮಾಡಿದ್ದು ದತ್ತಾತ್ರೇಯರ ಪ್ರಿಯವಾದ ಔದುಂಬರ ವೃಕ್ಷಕ್ಕೆ ಮತ್ತು ಹಿಂದುಗಳ ಪವಿತ್ರ ತುಳಸಿ ಕಟ್ಟೆಗೆ ಎಂದು ಹೇಳಿದರು.
ಶಾಖಾದ್ರಿ ಕುಟುಂಬಸ್ಥರು ಹೇಳುತ್ತಿರುವ ಹಾಗೆ ದತ್ತಪೀಠದ ಆವರಣದಲ್ಲಿ ಇರುವಂತಹದ್ದು ಯಾವುದೂ ನೈಜವಾದ ಗೋರಿಗಳೇ ಅಲ್ಲ. ಅವುಗಳೆಲ್ಲ ಮಣ್ಣು, ಕಲ್ಲಿನ ರಾಶಿಗಳು. ಔದುಂಬರ ಮರದ ಪಕ್ಕದಲ್ಲಿ ಇರುವುದು ಕೂಡ ಗೋರಿಯಲ್ಲ. ಶಾಖಾದ್ರಿ ವಂಶಸ್ಥರು ಜನನಕ್ಕೂ ಸಾವಿರಾರು ವರ್ಷಗಳ ಮುಂಚೆಯೇ ದತ್ತಾತ್ರೇಯರು ದತ್ತಪೀಠದಲ್ಲಿ ತಪಸ್ಸು ಮಾಡಿದ ಐತಿಹ್ಯಗಳು ಇವೆ ಮತ್ತು ಅದಕ್ಕೆ ಪ್ರತ್ಯಕ್ಷ ಸಾಕ್ಷಿಯೇ ಅಲ್ಲಿ ಇರುವ ಔದುಂಬರ ಮರ ಎಂದರು.
ಹಿಂದುಗಳ ಐತಿಹ್ಯದ ಪ್ರಕಾರ ಔದುಂಬರ ಮರ ಎಲ್ಲಕಡೆ ಬೆಳೆಯುವುದಿಲ್ಲ. ದತ್ತಾತ್ರೇಯರು ತಪಸ್ಸು ಮಾಡಿರುವ ಸ್ಥಳ ಮತ್ತು ದತ್ತಾತ್ರೇಯರನ್ನು ಪೂಜಿಸಲ್ಪಡುವ ಸ್ಥಳದಲ್ಲಿ ಮಾತ್ರ ಇರುವಂಥ ಪವಿತ್ರ ವೃಕ್ಷ. ಅದನ್ನು ಜಿಲ್ಲಾಡಳಿತ ಮತ್ತು ದತ್ತಪೀಠದ ವ್ಯವಸ್ಥಾಪನಾ ಸಮಿತಿ ಗಮನಿಸಬೇಕು. ದತ್ತಪೀಠದಲ್ಲಿರುವ ಔದುಂಬರ ವೃಕ್ಷದ ಸುತ್ತಲಿನ ಆವರಣವನ್ನು ಜಿಲ್ಲಾಡಳಿತ ಅಭಿವೃದ್ಧಿಪಡಿಸಿ ಭಕ್ತರಿಗೆ ಪೂಜೆ ಸಲ್ಲಿಸಲು ಮತ್ತು ಪ್ರದಕ್ಷಿಣೆ ಹಾಕಲು ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಶಾಖಾದ್ರಿ ಕುಟುಂಬದವರು ಇತ್ತೀಚಿನ ದಿನಗಳಲ್ಲಿ ನ್ಯಾಯಾಲಯದ ಆದೇಶ ಮೀರಿ ಇಲ್ಲ ಸಲ್ಲದ ಅವರ ಧಾರ್ಮಿಕ ಆಚರಣೆಗಳನ್ನು ದತ್ತಪೀಠದ ಆವರಣದಲ್ಲಿ ನೆರವೇರಿಸಲು ಪ್ರಯತ್ನ ಪಡುತ್ತಿದ್ದಾರೆ. ನ್ಯಾಯಾಲಯದ ಆದೇಶದ ಪ್ರಕಾರ 200 ಮೀಟರ್‌ನ ಸುತ್ತಳತೆಯಲ್ಲಿ ಮಾಂಸಾಹಾರ ನಿಷೇಧವಿದ್ದರೂ ಅಧಿಕಾರಿಗಳ ಕಣ್ತಪ್ಪಿಸಿ ಮಾಂಸಾಹಾರ ತಯಾರಿಸಿ ಸೇವನೆ ಮಾಡುತ್ತಿದ್ದಾರೆ. ಈ ಬಗ್ಗೆಯೂ ಜಿಲ್ಲಾಡಳಿತ, ವ್ಯವಸ್ಥಾಪನಾ ಸಮಿತಿ ಗಮನಿಸಬೇಕು. ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸುವವರ ವಿರುದ್ಧ ಕೇಸ್ ದಾಖಲಿಸಬೇಕು ಎಂದು ಒತ್ತಾಯಿಸಿದರು.