ಜಿಲ್ಲೆ

ಏ. 6ರಂದು ಪ್ರೇಮ್​ ಗೀತ್​ ಆಡಿಷನ್ಸ್​

Dharwada - Basavaraj Idli

ಹುಬ್ಬಳ್ಳಿ: ಇಲ್ಲಿಯ ಪ್ರೇಮ್ ಜೀ ಫೌಂಡೇಷನ್, ಸ್ವರ್ಣ ಗ್ರೂಪ್ ಹಾಗೂ ಹುಬ್ಬಳ್ಳಿ ರೋಟರಿ ಕ್ಲಬ್ ಎಲೈಟ್ ಸಹಯೋಗದಲ್ಲಿ ಏಪ್ರಿಲ್ 26ರಂದು "ಪ್ರೇಮ್ ಗೀತ್ ಸವಿ ನೆನಪುಗಳು 2025' ಶೀರ್ಷಿಕೆ ಅಡಿಯಲ್ಲಿ ಯುಗಳ ಗೀತೆಗಳ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಸಂಯೋಜಕ ಹರೀಶ್ ಬೊಮ್ಮನಹಳ್ಳಿ ತಿಳಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಪರ್ಧೆಯ ಹಿನ್ನೆಲೆಯಲ್ಲಿ ಪೂರ್ವಭಾವಿಯಾಗಿ ಲ್ಯಾಮಿಂಗ್ಟನ್ ಪ್ರೌಢಶಾಲೆಯಲ್ಲಿ ಏಪ್ರಿಲ್ 6ರಂದು ಬೆಳಗ್ಗೆ 11ಕ್ಕೆ ಮೊದಲ ಆಡಿಷನ್ಸ್ ಏರ್ಪಡಿಸಲಾಗಿದೆ ಎಂದರು.

ಪ್ರೇಮ್ ಜೀ ಫೌಂಡೇಷನ್ ಹಲವು ವರ್ಷಗಳಿಂದ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿದ್ದು, ಇದರ ಅಧ್ಯಕ್ಷರಾಗಿದ್ದ ದಿ. ಪ್ರೇಮಾ ಹೂಗಾರ ಕ್ಯಾನ್ಸರ್ ನಿಂದ ಬಳಲಿದ್ದರು. ಅದರ ಸಂಕಷ್ಟವನ್ನು ಅನುಭವಿಸಿದ್ದ ಅವರು ಇತರ ರೋಗಿಗಳಿಗೆ ನೆರವಾಗಬೇಕೆಂಬ ಉದ್ದೇಶದಿಂದ ನಿರಂತರವಾಗಿ ಒಂದಿಲ್ಲೊಂದು ಕಾರ್ಯಕ್ರಮ ಆಯೋಜಿಸಿ ಅದರಿಂದ ಬಂದ ಹಣದಿಂದ ರೋಗಿಗಳ ಚಿಕಿತ್ಸೆಗೆ ಸಹಾಯ ಮಾಡುತ್ತಿದ್ದರು ಎಂದರು.

ಪ್ರೇಮಾ ಅವರೊಬ್ಬ ಸಂಗೀತಗಾರರು, 20ಕ್ಕೂ ಹೆಚ್ಚು ಸಂಗೀತ ಕಾರ್ಯಕ್ರಮ ನಡೆಸಿದ್ದರು. ಅವರ ನೆನಪಿಗಾಗಿ ಯುವ ಗಾಯಕರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಯುಗಳ ಗೀತೆಗಳ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಆಸಕ್ತ 18ರಿಂದ 38 ವಯಸ್ಸಿನ ಮಹಿಳೆಯರು -ಪುರುಷರು ಆಡಿಶನ್ ನಲ್ಲಿ ಭಾಗವಹಿಸಬಹುದು. ಇದರಲ್ಲಿ ಆಯ್ಕೆಯಾದ 20 ಜೋಡಿಗಳಿಗೆ ಏ. 26ರ ಸ್ಪರ್ಧೆಗೆ ಅವಕಾಶ ನೀಡಲಾಗುವುದು.

ವಿಜೇತ ಜೋಡಿಗೆ ನಗದು ಬಹುಮಾನ ನೀಡಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ ಪ್ರಮಾಣಪತ್ರ ನೀಡಲಾಗುವುದು ಎಂದರು.

ಗೋಷ್ಠಿಯಲ್ಲಿ ಶ್ರೀನಿವಾಸ ಕುಲಕರ್ಣಿ, ವಿಜಯಲಕ್ಷ್ಮಿ ಪಾಟೀಲ್, ರೀತು ಸರಾಫ್, ಅನೀಶ್ ಖೋಜೆ, ಸುನೀಲ್ ಯಡ್ರಾವಿ ಇದ್ದರು.