ಜಿಲ್ಲೆ

ಆಡಿಯೋ ಸಂಚಲನ, ತಣ್ಣಗಾದ ಪ್ರತಿಭಟನೆ !

ಜಗನ್ನಾಥ್ ಕಾಳೇನಹಳ್ಳಿ

ತುಮಕೂರು: ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮದಲ್ಲಿ ಕಪ್ಪು ಬಾವುಟ ಪ್ರದರ್ಶಿಸುವವರಿಗೆ 1 ಲಕ್ಷ ರೂ., ಬಹುಮಾನ ನೀಡುವುದಾಗಿ ಗ್ರಾಮಾಂತರ ಕ್ಷೇತ್ರದ ಬಿಜೆಪಿ ಶಾಸಕ ಬಿ.ಸುರೇಶಗೌಡ ಘೋಷಿಸಿದ್ದಾರೆ ಎನ್ನಲಾದ ಆಡಿಯೋ ಸಂಚಲನ ಸೃಷ್ಟಿಸಿದೆ. ಆಡಿಯೋ ಬಾಂಬ್​ ಬೆನ್ನಲ್ಲೇ ಜಿಲ್ಲಾ ಉಸ್ತುವಾರಿ ಸಚಿವರು ಆದ ಗೃಹ ಸಚಿವ ಡಾ.ಜಿ.ಪರಮೇಶ್ವರ್​ರನ್ನು ಭೇಟಿ ಮಾಡಿದ ಶಾಸಕ ಸುರೇಶಗೌಡ ಪ್ರತಿಭಟನೆ ಹಿಂಪಡೆಯುವುದಾಗಿ ಹೇಳುವ ಮೂಲಕ ಸಿಎಂ ವಿರುದ್ಧ ಜಿಲ್ಲೆಯ ಎನ್​ಡಿಎ ಶಾಸಕರ ಕಪು$್ಪಪಟ್ಟಿ ಹೋರಾಟ ತಣ್ಣಗಾಗಿದೆ. ಇದರೊಂದಿಗೆ ಪೊಲೀಸರು ನಿಟ್ಟುಸಿರು ಬಿಡುವಂತಾಗಿದೆ.

ಸುರೇಶಗೌಡ ರಾಜಕೀಯಬದ್ಧ ವೈರಿ ಡಿ.ಸಿ.ಗೌರಿಶಂಕರ್​ ಪಕ್ಷದ ಕಚೇರಿಯಲ್ಲಿ ಭಾನುವಾರ ಬೆಳಗ್ಗೆ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಸ್ಫೋಟಕ ಆಡಿಯೋ ರಿಲೀಸ್​ ಮಾಡಿದ್ದು ರಾಜಕೀಯ ವಲಯದಲ್ಲಿ ಬಿರುಗಾಳಿ ಎಬ್ಬಿಸಿತು. ಬಿಜೆಪಿ ಶಾಸಕ ಸುರೇಶಗೌಡ ತಮ್ಮ ಕಚೇರಿಯಲ್ಲಿ ಕಾರ್ಯಕರ್ತರ ಸಭೆ ನಡೆಸಿ, ಡಿ.2ರ ಸಿಎಂ ಕಾರ್ಯಕ್ರಮದಲ್ಲಿ ಕಪ್ಪು ಬಾವುಟ ಪ್ರದರ್ಶಿಸಿದರೆ 1 ಲಕ್ಷ ರೂ,, ಹಾಗೂ ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿದರೆ 50 ಸಾವಿರ ರೂ., ಹಣ ನೀಡುವುದಾಗಿ ಘೋಷಣೆ ಮಾಡಿದ್ದು, ಆ ಮೂಲಕ ರೌಡಿಗಳು, ಗೂಂಡಾಗಳನ್ನು ಬಿಟ್ಟು ದೊಂಬಿ ಎಬ್ಬಿಸುವ ಹುನ್ನಾರ ನಡೆಸಿದ್ದಾರೆ. ಈ ಸಂಬಂಧ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿಗೆ ದೂರು ನೀಡುತ್ತಿದ್ದು, ಶಾಸಕರ ವಿರುದ್ಧ ಎಫ್​ಐಅರ್​ ದಾಖಲಿಸಿ ತನಿಖೆ ನಡೆಸುವಂತೆ ಗೌರಿಶಂಕರ್​ ಒತ್ತಾಯಿಸಿದರು.

ಇದಕ್ಕೆ ಧ್ವನಿಗೂಡಿಸಿದ ಕಾಂಗ್ರೆಸ್​ ಜಿಲ್ಲಾಧ್ಯಕ್ಷ ಜಿ.ಚಂದ್ರಶೇಖರಗೌಡ, ವಿಪಕ್ಷ ಶಾಸಕರು, ಮುಖಂಡರು ಪದೇ ಪದೇ ಕಾಂಗ್ರೆಸ್​ ಸರ್ಕಾರದಲ್ಲಿ ಅಭಿವೃದ್ಧಿ ಕೆಲಸಗಳೇ ಆಗುತ್ತಿಲ್ಲ ಎಂಬ ಹೇಳಿಕೆ ನೀಡುವ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಜನರಲ್ಲಿ ತಪ್ಪು ಭಾವನೆ ಮೂಡುವಂತೆ ಮಾಡುತ್ತಿದ್ದಾರೆ. ಗುಬ್ಬಿ ಶಾಸಕ ಎಸ್​.ಆರ್​.ಶ್ರೀನಿವಾಸ್​ರನ್ನು ಮಂತ್ರಿ ಮಾಡುತ್ತೇವೆಂದು ಕರೆದು ಕೊಂಡು ಮಂಗ ಮಾಡಿದ್ದಾರೆ ಎಂಬ ಬಿಜೆಪಿ ಶಾಸಕ ಬಿ.ಸುರೇಶಗೌಡ ಆರೋಪ ಸುಳ್ಳು. ಇಂತಹ ಆಧಾರರಹಿತ ಹೇಳಿಕೆಗಳನ್ನು ನೀಡುವುದನ್ನು ಶಾಸಕರು ಕೂಡಲೇ ನಿಲ್ಲಿಸಬೇಕು ಎಂದು ಎಚ್ಚರಿಸಿದರು.

ಕೆಪಿಸಿಸಿ ಉಪಾಧ್ಯಕ್ಷ ಮುರುಳೀಧರ್​ ಹಾಲಪ್ಪ ಮಾತನಾಡಿ, ಅಮೃತ್​ ಯೋಜನೆಗೆ ಕೇಂದ್ರದ ಬಿಜೆಪಿ ಸರ್ಕಾರ ಹಣವನ್ನೆ ಬಿಡುಗಡೆ ಮಾಡಿಲ್ಲ. ಸುರೇಶ್​ಗೌಡ ಸುಮ್ಮನೇ ಅಪಪ್ರಚಾರ ಮಾಡುತ್ತಿದ್ದಾರೆ. ಸಿಎಂ ಬಂದಾಗ ಯಾವುದೇ ಅಹಿತಕರ ಘಟನೆ ನಡೆದರೆ ಸುರೇಶ್​ಗೌಡ ಹಾಗೂ ವಿಪಕ್ಷ ಮುಖಂಡರೇ ನೇರಹೊಣೆ ಹೊರಬೇಕಾಗುತ್ತದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಬ್ಲಾಕ್​ಕಾಂಗ್ರೆಸ್​ ಅಧ್ಯಕ್ಷರುಗಳಾದ ಪ್ರಕಾಶ್​, ಬುಗಡನಹಳ್ಳಿ ನಾರಾಯಣಪ್ಪ,ಮುಖಂಡರಾದ ಷಣ್ಮುಖಪ್ಪ, ಶಿವಣ್ಣ ಮತ್ತಿತರರು ಹಾಜರಿದ್ದರು.