ಕೆರೂರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಭಾನುವಾರ ಆರ್‌ಎಸ್‌ಎಸ್ ಪಥಸಂಚಲನ ನಡೆಯಿತು. 
ಜಿಲ್ಲೆ

ಕೆರೂರಲ್ಲಿ ಆಕರ್ಷಕ ಆರ್‌ಎಸ್‌ಎಸ್ ಪಥಸಂಚಲನ

Vijayapura - Desk - Gurappa Lokuri

ಕೆರೂರ: ವಿಜಯದಶಮಿ ನಿಮಿತ್ತ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಭಾನುವಾರ ಆರ್‌ಎಸ್‌ಎಸ್ ಸ್ವಯಂ ಸೇವಕರ ಪಥಸಂಚಲನ ವಾದ್ಯ ಘೋಷದೊಂದಿಗೆ ನಡೆಯಿತು.

ಪಟ್ಟಣದ ಅ.ರಾ. ಹಿರೇಮಠ ಪ್ರೌಢಶಾಲೆ ಮೈದಾನದಿಂದ ಆರಂಭಗೊಂಡ ಪಥಸಂಚಲನ ರಾಷ್ಟ್ರೀಯ ಹೆದ್ದಾರಿ 218, ಅಂಬೇಡ್ಕರ್ ವೃತ್ತ, ರಾಚೋಟೇಶ್ವರ ಗುಡಿ, ಬಸ್ ನಿಲ್ದಾಣ, ಕಿಲ್ಲಾ ಪೇಟೆ, ಮ್ಯಾಗಡಿ ಓಣಿ, ಬನಶಂಕರಿ ಗುಡಿ ಮಾರ್ಗವಾಗಿ ಸಂಚರಿಸಿ ಕಾರ್ಯಕ್ರಮದ ವೇದಿಕೆ ತಲುಪಿತು.

ಪಥಸಂಚಲನ ಸಂಚರಿಸುವ ದಾರಿಯುದ್ದಕ್ಕೂ ಕೇಸರಿ ಬಾವುಟಗಳು ರಾಜಾಜಿಸಿದವು. ರಸ್ತೆಗಳನ್ನು ರಂಗೋಲಿ ಹಾಕಿ ಸಿಂಗಾರಗೊಳಿಸಲಾಗಿತ್ತು. ಪ್ರಮುಖ ವೃತ್ತ ಹಾಗೂ ರಸ್ತೆಗಳಲ್ಲಿ ಚಿಕ್ಕ ಮಕ್ಕಳು ರಾಷ್ಟ್ರ ನಾಯಕರ ವೇಷ ಧರಿಸಿ ಪಥಸಂಚಲನಕ್ಕೆ ಸ್ವಾಗತ ಕೋರಿದರು.

ಪಥಸಂಚಲನ ಸಂಚರಿಸುವ ರಸ್ತೆಗಳ ಅಕ್ಕಪಕ್ಕದ ಮನೆ ಮೇಲೆ ನಿಂತ ಮಹಿಳೆಯರು ಭಗವಾ ಧ್ವಜಕ್ಕೆ ಪುಷ್ಪಾರ್ಪಣೆ ಮಾಡಿ ಗೌರವ ಸಲ್ಲಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ, ತಾಲೂಕು ಅಧ್ಯಕ್ಷ ನಾಗರಾಜ ಕಾಚಟ್ಟಿ ಇತರರಿದ್ದರು.

ಡಿವೈಎಸ್‌ಪಿ ವಿಶ್ವನಾಥರಾವ ಕುಲಕರ್ಣಿ, ಸಿಪಿಐ ಕರಿಯೆಪ್ಪ ಬನ್ನೆ, ಪಿಎಸ್‌ಐ ಭೀಮಪ್ಪ ರಬಕವಿ ನೇತೃತ್ವದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.