ಜಿಲ್ಲೆ

ಬಸ್​ ಸೌಕರ್ಯ ಕಾಣದ ಬೈರತ್ನಹಳ್ಳಿ

ಜನಪ್ರತಿನಿಧಿಗಳು, ಅಧಿಕಾರಿಗಳ ನಿರ್ಲಕ್ಷ್ಯ, ಮೂಲಸೌಕರ್ಯ ಕೊರತೆ

ಎನ್​.ಮುನಿವೆಂಕಟೇಗೌಡ ಕೋಲಾರ
ಸ್ವಾತಂತ್ರ್ಯ ಬಂದು 77 ವರ್ಷಗಳಾದರೂ ತಾಲೂಕು ಕೇಂದ್ರದಿಂದ 7 ಕಿಲೋ ಮೀಟರ್​ ದೂರದಲ್ಲಿರುವ ಗ್ರಾಮವೊಂದು ಇಲ್ಲಿಯವರೆಗೂ ಬಸ್​ ಸೌಕರ್ಯವನ್ನೇ ಕಂಡಿಲ್ಲ.
ಹೌದು. ಮಾಲೂರು ತಾಲೂಕು ಕೇಂದ್ರದಿಂದ ಟೇಕಲ್​ ಹೋಬಳಿ ಕೇಂದ್ರಕ್ಕೆ ಹೋಗುವ ಮಾರ್ಗ ಮಧ್ಯೆ ಚಿಕ್ಕ ಕುಂತೂರು ಮತ್ತು ಕೊಂಡಶೆಟ್ಟಿಹಳ್ಳಿ ನಡುವಣ ಇರುವ ಬೈರತ್ನಹಳ್ಳಿಯೇ ಸಾರಿಗೆ ವ್ಯವಸ್ಥೆಯಿಂದ ವಂಚಿತಗೊಂಡ ಗ್ರಾಮ. ಗ್ರಾಮದಲ್ಲಿ ಸುಮಾರು 950 ಜನಸಂಖ್ಯೆ ಇದ್ದು, ಶೇ.80 ಪರಿಶಿಷ್ಟ ಜಾತಿಯ ಜನಾಂಗದವರೇ ವಾಸಿಸುತ್ತಿದ್ದಾರೆ. ಪ.ಜಾತಿ, ಪಂಗಡ ಜನಾಂಗ ವಾಸಿಸುವ ಗ್ರಾಮಗಳಿಗೆ ಸರ್ಕಾರ ಮೂಲ ಸೌಕರ್ಯ ಕಲ್ಪಿಸಿ ಕೊಡುವುದಾಗಿ ಘೋಷಣೆ ಮಾಡುತ್ತದೆ. ಆದರೆ ಸಾಕಷ್ಟು ಸೌಲಭ್ಯಗಳು ಬೈರತ್ನಹಳ್ಳಿಗೆ ತಲುಪಿಲ್ಲ.
ದಿನನಿತ್ಯ ನಗರಕ್ಕೆ ಬರುವ ನಾಗರಿಕರು ಮತ್ತು ಶಾಲಾ&ಕಾಲೇಜು ವಿದ್ಯಾರ್ಥಿಗಳು ಪರದಾಡುವುದನ್ನು ತಪ್ಪಿಸುವಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ರಾಜ್ಯ ಸರ್ಕಾರ ಮಹಿಳೆಯರಿಗಾಗಿ ಶಕ್ತಿ ಯೋಜನೆಯನ್ನು ಜಾರಿಗೆ ತಂದಿದೆ. ಆದರೆ ಬಸ್​ ಸೌಕರ್ಯ ಇಲ್ಲದ ಗ್ರಾಮಕ್ಕೆ ಆ ಯೋಜನೆ ಉಪಯೋಗಕ್ಕೆ ಬಾರದಂತಾಗಿದೆ. ಈ ಗ್ರಾಮಕ್ಕೆ 5 ಕಿಮೀ ದೂರದಲ್ಲಿ ಮಾಲೂರು ತಾಲೂಕಿನ ಶಾಸಕ ಕೆ.ವೈ.ನಂಜೇಗೌಡ ವಾಸಿಸುವ ಊರು ಇದೆ. ಇಷ್ಟು ದಿನಗಳ ಕಾಲ ಸಂಸತ್​ ಸದಸ್ಯರಾಗಿದ್ದ ಎಂ.ಮುನಿಸ್ವಾಮಿ ಅವರ ಊರು 5 ಕಿಮೀ ಅಂತರದಲ್ಲಿದ್ದರೂ ಬೈರತ್ನಹಳ್ಳಿಗೆ ಬಸ್​ ಸೌಕರ್ಯ ಕಲ್ಪಿಸಲು ಕಡೆಗಣಿಸಲಾಗಿದೆ.

ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಹೆಣ್ಣುಮಕ್ಕಳು: ವಿದ್ಯಾರ್ಥಿಗಳು ಮಾಲೂರಿಗೆ ಶಾಲಾ&ಕಾಲೇಜಿಗೆ ಹೋಗಬೇಕಾದರೆ ಸುಮಾರು 1.5 ಕಿಮೀ ನಡೆದು ಚಿಕ್ಕಕುಂತೂರು ಗೇಟ್​ಗೆ ಹೋಗಬೇಕಾಗುತ್ತದೆ. ಟೇಕಲ್​ಗೆ ಹೋಗಬೇಕಾದರೆ ಸುಮಾರು 1 ಕಿಲೋಮೀಟರ್​ ದೂರದ ಕೊಂಡಶೆಟ್ಟಿಹಳ್ಳಿ ಗ್ರಾಮದ ಗೇಟಿಗೆ ನಡೆದುಕೊಂಡು ಹೋಗಿ ಬಸ್​ ಕಾಯಬೇಕಾದ ಪರಿಸ್ಥಿತಿ ಇದೆ. ಬಸ್​ ವ್ಯವಸ್ಥೆ ಇಲ್ಲದ ಕಾರಣ ಹೆಣ್ಣುಮಕ್ಕಳನ್ನು ಪ್ರೌಢಶಾಲೆ ಮತ್ತು ಕಾಲೇಜುಗಳಿಗೆ ಕಳುಹಿಸಲು ಪಾಲಕರು ಹಿಂಜರಿಯುತ್ತಿದ್ದಾರೆ. ಇದರಿಂದ ಮಕ್ಕಳ ವಿದ್ಯಾಭ್ಯಾಸ ಮೊಟುಕುಗೊಳಿಸುವಂತಹ ಪರಿಸ್ಥಿತಿ ಎದುರಾಗಿದೆ.


ಮನವಿಗೂ ಸ್ಪಂದನೆಯಿಲ್ಲ: ಗ್ರಾಮಸ್ಥರು ಅನೇಕ ಬಾರಿ ಜನಪ್ರತಿನಿಧಿಗಳಿಗೆ ಮತ್ತು ಕೆಎಸ್​ಆರ್​ಟಿಸಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಆದರೆ ಯಾರೊಬ್ಬರಿಂದಲೂ ಸ್ಪಂದನೆ ದೊರಕಿಲ್ಲ. ಗ್ರಾಮದಿಂದ ಶಾಲಾ&ಕಾಲೇಜುಗಳಿಗೆ ವಿದ್ಯಾರ್ಥಿಗಳು ಮತ್ತು ಆಸ್ಪತ್ರೆಗಳಿಗೆ ರೋಗಿಗಳು ಹೋಗಬೇಕಾದರೆ ಖಾಸಗಿ ವಾಹನ ಅವಲಂಬಿಸಬೇಕಾದ ಅನಿವಾರ್ಯ ಇದೆ. ಮಾಲೂರಿಗೆ ಆಸ್ಪತ್ರೆಗೆ ಹೋಗಬೇಕಾದರೆ ಆಟೋ ಒಂದಕ್ಕೆ 250 ರೂ. ಕೊಟ್ಟು ಹೋಗಬೇಕಾಗುತ್ತದೆ. ಹೋಬಳಿ ಕೇಂದ್ರದ ಟೇಕಲ್​ಗೆ ಹೋಗಬೇಕಾದರೆ ಆಟೋಗೆ 100 ರೂ. ಕೊಟ್ಟು ಹೋಗಬೇಕಾದ ಪರಿಸ್ಥಿತಿ ಇದೆ ಎಂದು ಗ್ರಾಮಸ್ಥರು ಅಲವತ್ತುಕೊಂಡಿದ್ದಾರೆ.
ಶಿಥಿಲಾವಸ್ಥೆ ತಲುಪಿದ ಕಟ್ಟಡ: ಗ್ರಾಮದಲ್ಲಿ ಅಂಗನವಾಡಿ ಕೇಂದ್ರವಿದ್ದು, ಅದು ಶಿಥಿಲಾವಸ್ಥೆಗೆ ತಲುಪಿದೆ. ಪ್ರಾಥಮಿಕ ಶಾಲೆಗೆ 2 ಬೋಧನಾ ಕೊಠಡಿಗಳಿದ್ದು, ಇದರಲ್ಲಿ 1 ಕೊಠಡಿ ಶಿಥಿಲಾವಸ್ಥೆಗೆ ತಲುಪಿದೆ. ಹಾಲು ಒಕ್ಕೂಟಕ್ಕೆ ವಿಶಾಲವಾದ ಕೊಠಡಿ ಬೇಕಾಗಿದೆ.

ಸ್ವಾತಂತ್ರ ಬಂದು ಇಷ್ಟು ವರ್ಷಗಳಾದರೂ ಗ್ರಾಮಕ್ಕೆ ಸರ್ಕಾರಿ ಬಸ್​ ಬಂದೇ ಇಲ್ಲ. ಖಾಸಗಿ ಬಸ್​ ಇಲ್ಲವೇ ಇಲ್ಲ. ಜನಪ್ರತಿನಿಧಿಗಳು ವಾಸಿಸುವ ಗ್ರಾಮಕ್ಕೆ ಮತ್ತು ತಾಲೂಕು ಕೇಂದ್ರಕ್ಕೆ ಕೂಗಳತೆಯ ದೂರದಲ್ಲಿದ್ದರೂ ಬಸ್​ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗಿಲ್ಲ. ವಿದ್ಯಾರ್ಥಿಗಳು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ತಾಲೂಕು ಕೇಂದ್ರ ಮತ್ತು ಹೋಬಳಿ ಕೇಂದ್ರಕ್ಕೆ ಹೋಗದೆ ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸುವಂತಾಗಿದೆ. ಆಸ್ಪತ್ರೆಗೆ ಹೋಗಬೇಕಾದರೆ ರೋಗಿಗಳು ಮತ್ತು ವಯೋವೃದ್ಧರು ಹರಸಾಹಸ ಪಡಬೇಕಾಗುತ್ತದೆ. ಹೆಚ್ಚಿನ ಕಾಸು ಕೊಟ್ಟು ಆಟೋಗಳಲ್ಲಿ ಪ್ರಯಾಣಿಸಬೇಕಾದ ಪರಿಸ್ಥಿತಿ ನಿಮಾರ್ಣವಾಗಿದೆ.

ಶ್ರೀನಿವಾಸ್​ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ, ಬೈರತ್ನಹಳ್ಳಿ

ಗ್ರಾಮಕ್ಕೆ ಕೊಂಡಶೆಟ್ಟಿಹಳ್ಳಿ ಗ್ರಾಪಂನಿಂದ ಚರಂಡಿ, ನೀರಿನ ವ್ಯವಸ್ಥೆ ಮತ್ತು ಬೀದಿದೀಪ ಕಲ್ಪಿಸಿಕೊಡಲಾಗಿದೆ. ಬಸ್​ ಸೌಕರ್ಯ ಅತ್ಯವಶ್ಯವಿದ್ದು, ಈಗಾಗಲೇ ಶಾಸಕರ ಗಮನಕ್ಕೆ ತರಲಾಗಿದೆ. ಮಾಲೂರಿನಿಂದ ಟೇಕಲ್​ಗೆ ಮತ್ತು ಟೇಕಲ್​ನಿಂದ ಮಾಲೂರಿಗೆ ಹೋಗುವ ಬಸ್​ ಬೈರತ್ನಹಳ್ಳಿ ಮೂಲಕ ಸಂಚರಿಸಿದರೆ ನಮ್ಮ ಗ್ರಾಮಕ್ಕೂ ಬಸ್​ ಸಂಪರ್ಕ ಕಲ್ಪಿಸಿದಂತಾಗುತ್ತದೆ.

ಅರ್ಚನಾ ಶ್ರೀನಿವಾಸ್​ ಗ್ರಾಮ ಪಂಚಾಯಿತಿ ಅಧ್ಯೆ, ಕೊಂಡಶೆಟ್ಟಹಳ್ಳಿ

ಗ್ರಾಮಕ್ಕೆ ಬಸ್​ ಸೌಕರ್ಯ ಒದಗಿಸುವ ಬಗ್ಗೆ ನಮ್ಮ ಅಧಿರ್ಕಾರಿಗಳನ್ನು ಕಳುಹಿಸಿ ಸರ್ವೇ ಮಾಡಿಸಲಾಗುವುದು. ಬಸ್​ ಸೌಕರ್ಯ ಇಲ್ಲದೆ ಇರುವುದು ನನ್ನ ಗಮನಕ್ಕೆ ಬಂದಿಲ್ಲ. ಅವಶ್ಯಕತೆಗೆ ಅನುಗುಣವಾಗಿ ಬಸ್​ ಸೌಕರ್ಯವನ್ನು ಕಲ್ಪಿಸಿಕೊಡಲಾಗುವುದು.

ಬಸವರಾಜ್​ ಜಿಲ್ಲಾ ವಿಭಾಗೀಯ ನಿಯಂತ್ರಣಾಧಿಕಾರಿ, ಕೋಲಾರ ವಿಭಾಗ