ಹೊಳೆನರಸೀಪುರ: ಸಾಮಾಜಿಕ ಪಿಡುಗುಗಳನ್ನು ದೂರ ಇರಿಸುವ ಮೂಲಕ ಸಾಮಾಜಿಕ ನ್ಯಾಯಕ್ಕಾಗಿ ಎಲ್ಲರೂ ಗಮನ ಹರಿಸಬೇಕಿದೆ ಎಂದು ಜೆಎಂಎಫ್‌ಸಿ ಹಿರಿಯ ನ್ಯಾಯಾಧೀಶೆ ನಿವೇದಿತಾ ಮಹಾಂತೇಶ್ ಮುನವಳ್ಳಿಮಠ್ ತಿಳಿಸಿದರು.
ಪಟ್ಟಣದ ಸರಕಾರಿ ಗೃಹವಿಜ್ಞಾನ ಮಹಿಳಾ ಕಾಲೇಜಿನಲ್ಲಿ ಗುರುವಾರ ವಿಶ್ವ ಸಾಮಾಜಿಕ ನ್ಯಾಯ ದಿನ ಕುರಿತು ಕಾನೂನು ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಹುತೇಕರಲ್ಲಿ ಸಾಮಾಜಿಕ ಕಳಕಳಿ ಇಲ್ಲವಾಗಿದೆ. ಎಲ್ಲರಿಗೂ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸಮಾಜದಲ್ಲಿನ ಹಲವು ಪಿಡುಗುಗಳನ್ನು ದೂರ ಇರಿಸಬೇಕಿದೆ. ಆಗ ಮಾತ್ರ ಸಮಾಜದಲ್ಲಿ ಮೌಲ್ಯ ಸ್ಥಾಪನೆ ಸಾಧ್ಯ. ಭ್ರಷ್ಟಾಚಾರ, ಅತ್ಯಾಚಾರದಂತಹ ಪಿಡುಗುಗಳನ್ನು ಬಹುಮುಖ್ಯವಾಗಿ ತೊಡೆದು ಹಾಕಬೇಕಿದೆ. ಸಂವಿಧಾನದ ತಳಹದಿಯಾಗಿ ಎಲ್ಲ ಹಕ್ಕುಗಳು ಪ್ರಾಪ್ತಿಯಾಗಿರುವುದರ ಸಂಕೇತ ಎಲ್ಲರಿಗೂ ನ್ಯಾಯಯುತವಾದ ನಡೆ ಅನುಸರಿಸಬೇಕು ಎನ್ನುವುದಾಗಿದೆ ಎಂದು ತಿಳಿಸಿದರು.
ನ್ಯಾಯಾಧೀಶೆ ಚೇತನಾ ಮಾತನಾಡಿ, ಲೋಕ ಬದಲಾಗುವುದು ನೀ ಬದಲಾದರೆ, ಸಮಾಜ ಬದಲಾಗುವುದು ನೀ ಮೊದಲಾದರೆ ಎನ್ನುವ ಪರಿಕಲ್ಪನೆ ಇದೆ. ಅಂದರೆ ನಾವು ಮೊದಲು ನ್ಯಾಯಯುತ ನಡೆ ಅನುಸರಿಸಬೇಕು ಎನ್ನುವುದಷ್ಟೆ. ಎಲ್ಲರಿಗೂ ಸಮಾನವಾದ ಹಕ್ಕುಗಳು ನೀಡಲಾಗಿದೆ. ಆದರೆ ಸಮಾಜಿಕ ನ್ಯಾಯ ಉತ್ತುಂಗಕ್ಕೆ ಏರುವವರೆಗೂ ದೇಶದ ಶೀಘ್ರಗತಿಯ ಬೆಳವಣಿಗೆ ಸಾಧ್ಯವಾಗದು. ಧಾರ್ಮಿಕ, ಲಿಂಗ, ಜಾತಿಗಳ ತಾರತಮ್ಯವನ್ನು ಹೋಗಲಾಡಿಸಿ, ಎಲ್ಲರಿಗೂ ಸಮಾನ ಅವಕಾಶ ಒದಗಬೇಕಿದೆ ಎಂದರು.
ಹಿರಿಯ ವಕೀಲ ಎಸ್.ಎಚ್.ಅರುಣ್‌ಕುಮಾರ್, ಪ್ರಾಂಶಾಲರಾದ ಯು.ಎಚ್.ಆಶಾಜ್ಯೋತಿ, ವಕೀಲ ಸಂಘದ ಅಧ್ಯಕ್ಷ ಎಂ.ವಿ.ಶಿವಕುಮಾರ್ ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು.