ಹುಣಸೂರು: ಮೈಸೂರಿನ ಬಾ ಸೃಷ್ಟಿ ಸಂಸ್ಥೆ ಮತ್ತು ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಸಹಯೋಗದಲ್ಲಿ ತಾಲೂಕಿನ ಮುಳ್ಳೂರು ಸರ್ಕಾರಿ ಶಾಲೆ ಆವರಣದಲ್ಲಿ ಬಾ ಸೃಷ್ಟಿ ಮಕ್ಕಳ ರಂಗ ತರಬೇತಿ ಶಿಬಿರ-2025ರ ಸಮಾರೋಪ ಸಮಾರಂಭದ ಅಂಗವಾಗಿ ಶಾಲೆಯ ವಿದ್ಯಾರ್ಥಿಗಳು ಪ್ರದರ್ಶಿಸಿದ ಹಟ್ಟಿಪದ ನಾಟಕ ಗ್ರಾಮೀಣರ ಮನಸೆಳೆಯುವಲ್ಲಿ ಯಶಸ್ವಿಯಾಯಿತು.
ನಾಟಕವು ಮೂಲ ಅಸ್ಸಾಂ ಭಾಷೆಯಲ್ಲಿದ್ದು(ರಚನೆ ಶಿರಾಜ್ ಉಲ್ ಹಕ್) ಕನ್ನಡಕ್ಕೆ ಭಾಗೀರಥಿ ಬಾಯಿ ಕದಂ ರೂಪಾಂತರಿಸಿದ್ದಾರೆ. ಹಳ್ಳಿಯ ಸೊಗಡು, ಸೊಬಗಿನೊಂದಿಗೆ ಗ್ರಾಮೀಣರ ಮುಗ್ಧ ಬದುಕು, ಪ್ರಕೃತಿಯೊಂದಿಗಿನ ಅವಿನಾಭಾವ ಸಂಬಂಧ, ಪ್ರಕೃತಿಯೊಂದಿಗೆ ಕಲಿಯುವ ಜೀವನ ಪಾಠ ಮುಂತಾದ ವಿಷಯಗಳನ್ನು ಹೊಂದಿರುವ ಈ ನಾಟಕವನ್ನು ಮುಳ್ಳೂರು ಶಾಲೆಯ ವಿದ್ಯಾರ್ಥಿಗಳು ಯಶಸ್ವಿಯಾಗಿ ಅಭಿನಯಿಸಿದರು.
ನಾಟಕದಲ್ಲಿ ಬರುವ ಅಜ್ಜಿಯ ಪಾತ್ರ, ಗ್ರಾಮದ ಮಹಿಳೆಯರು ಹಾಡುವ ಸುಗ್ಗಿ ಪದಗಳು, ವಿವಿಧ ಜಾನಪದಗಳು ಎಲ್ಲಿ ಸಿಗುತ್ತವೆ ಎಂದು ಕೇಳುವ ಅಜ್ಜಿ, ಪೇಟೆಯಲ್ಲಿ ಅಂಗಡಿಯಲ್ಲಿ ಇದೆ, ತಂದುಕೊಡು ಎಂದು ಅಜ್ಜನ ದುಂಬಾಲು ಬೀಳುವ ಅಜ್ಜಿ, ಪದಗಳನ್ನು ಖರೀದಿಸಲು ಹೋದ ಅಜ್ಜಿನಿಗೆ ಸಿಗುವ ಹುಡುಗ, ಹುಡುಗನ ಬಾಯಿಂದ ಬಂದ ಪದಗಳು ಜೀವನ ದರ್ಶನದ ಹಾಡುಗಳಾಗಿ ಹೊರಹೊಮ್ಮುತ್ತದೆ. ಎಲ್ಲವೂ ಸರಳವಾಗಿ ಮತ್ತು ಸುಂದರವಾಗಿ ವಿದ್ಯಾರ್ಥಿಗಳು ಅಭಿನಯಿಸಿದರು. ಬದುಕು ಪ್ರಕೃತಿಯೊಂದಿಗೆ ಮಿಳಿತವಾದಾಗ ಮಾತ್ರ ಜೀವನಪಾಠ ಕಲಿಯಲು ಸಾಧ್ಯವೆನ್ನುವ ಸಂದೇಶವನ್ನು ನಾಟಕ ಪ್ರತಿಬಿಂಬಿಸಿತು.
ವಿದ್ಯಾರ್ಥಿಗಳಾದ ಮೇಘಬಾಯಿ, ಶರ್ಮಿಳಾ, ಚೈತ್ರಾ, ಕುಸುಮಾ, ಎಂ.ಎಸ್.ಪೂರ್ವಜ್, ಸಗನ್, ಎಂ.ಎಸ್.ಮಾನಸ, ಸಾನ್ವಿ, ಡಿಂಪಲ್ ಲಕ್ಷ್ಮಿ, ಧನುಷ್, ಲಕ್ಷ್ಮಣರಾವ್ ನಿಂಬಲ್ಕರ್, ರಾಹುಲ್ ರಾವ್ ನಿಂಬಲ್ಕರ್, ದಿವ್ಯ, ರೋಹಿತ್ ರಾವ್ ಜಗತಾಪ್, ಎಂ.ಮೋನಿಷಾ ಪಾತ್ರಧಾರಿಗಳಾಗಿ ಮಿಂಚಿದರು.
ಬಾ ಸೃಷ್ಠಿ ಸಂಸ್ಥೆ ಕಾರ್ಯದರ್ಶಿ ಚೇತನ್ ಜಗತಾಪ್ ನಿರ್ಮಾಣದೊಂದಿಗೆ, ಸಂಗೀತ ನಿರ್ದೇಶಕ ದಿಗ್ವಿಜಯ ಹೆಗ್ಗೋಡು ಸಂಗೀತ ನೀಡಿದ್ದು, ಶ್ರೀಕಾಂತ್ ನವಲಗಿರಿ ನಾಟಕವನ್ನು ನಿರ್ದೇಶಿಸಿದರು. ಇದೇ ವೇಳೆ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮೂವರು ವಿದ್ಯಾರ್ಥಿಗಳಿಗೆ ತಲಾ 1 ಸಾವಿರ ರೂ.ನಗದು ಬಹುಮಾನ ನೀಡಿ ಗೌರವಿಸಿ ಪ್ರೋತ್ಸಾಹಿಸಲಾಯಿತು.