ಧಾರವಾಡ: ನಗರದ ಸ್ಟೇಷನ್ ರಸ್ತೆಗೆ ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಹೆಸರಿಡಲು ವಿವಿಧ ಸಮಾಜದವರು ವಿನಂತಿಸಿದ್ದಾರೆ. ಈ ಸಂಬಂಧ ಪ್ರಯತ್ನಿಸಲಾಗುವುದು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ನಗರದ ಮಾಳಮಡ್ಡಿ ವನವಾಸಿ ರಾಮ ಮಂದಿರದಲ್ಲಿ ಶುಕ್ರವಾರ ಏರ್ಪಾಟಾಗಿದ್ದ ಸಮಾರಂಭದಲ್ಲಿ ಅಖಿಲ ಭಾರತ ಮಾಧ್ವ ಮಹಾ ಮಂಡಲದ ಧಾರವಾಡ ಶಾಖೆ ಉದ್ಘಾಟಿಸಿ ಅವರು ಮಾತನಾಡಿದರು.
ಶ್ರೀ ವಿಶ್ವೇಶತೀರ್ಥರು ಮಾಡಿದ ಕಾರ್ಯಗಳು ಅಪಾರ. ಅವರ ಹಾದಿಯಲ್ಲೇ ಈಗಿನ ಪೀಠಾಧಿಪತಿ ಶ್ರೀ ವಿಶ್ವಪ್ರಸನ್ನ ತೀರ್ಥರು ಸಾಗುತ್ತಿದ್ದು, ಸಮಾಜ ಅವರೊಂದಿಗೆ ಇದೆ ಎಂದರು.
ಶಾಸಕ ಅರವಿಂದ ಬೆಲ್ಲದ ಮಾತನಾಡಿ, ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಧಾರವಾಡದೊಂದಿಗೆ ವಿಶಿಷ್ಟ ನಂಟು ಹೊಂದಿದ್ದರು.ನಗರದಲ್ಲಿ ಅವರ ಮೂರ್ತಿ ಸ್ಥಾಪಿಸಬೇಕು. ಸ್ಟೇಷನ್ ರಸ್ತೆಗೆ ಅವರ ಹೆಸರಿಡುವುದು ಸೂಕ್ತ ಎಂದರು.
ಅನುಗ್ರಹ ಸಂದೇಶ ನೀಡಿದ ಶ್ರೀ ವಿಶ್ವಪ್ರಸನ್ನ ತೀರ್ಥರು, ಮಾಧ್ವ ಸಿದ್ಧಾಂತದ ತಿರುಳು ಎಲ್ಲರಿಗೂ ಸಮ. ಭಗವಂತ ಒಬ್ಬನೇ ಸವೋತ್ತಮ. ಪರಸ್ಪರರನ್ನು ಪ್ರೀತಿಸುವುದನ್ನು ಕಲಿಯಬೇಕು ಎಂದರು.
ಗಣ್ಯರಾದ ಡಾ. ಎಸ್.ಆರ್. ಕೌಲಗುಡ್ಡ, ಅ.ಭಾ. ಮಾಧ್ವ ಮಹಾ ಮಂಡಲದ ಅಧ್ಯಕ್ಷ ಎಚ್.ಬಿ. ಗೌತಮ, ಪ್ರಧಾನ ಕಾರ್ಯದರ್ಶಿ ಶ್ರೀಪಾದ ಸಿಂಗನಮಲ್ಲಿ, ಪಂ. ಕಪಿಲಾಚಾರ್ಯ ಗಲಗಲಿ, ಡಾ. ವಿ.ಆರ್. ದೇಸಾಯಿ, ಇತರರು ಇದ್ದರು.
ಶ್ರೀ ವಿಶ್ವೇಶತೀರ್ಥರಂಥವರು ಅತ್ಯಂತ ಅಪರೂಪ
ಹುಬ್ಬಳ್ಳಿ: ಪೇಜಾವರ ಶ್ರೀ ವಿಶ್ವೇಶ ತೀರ್ಥರಂಥ ಸ್ವಾಮೀಜಿಗಳು ಶತಮಾನಕೊಬ್ಬರು ಜನ್ಮ ತಾಳುತ್ತಾರೆ ಎಂದು ಪಂ. ನರಸಿಂಹ ಆಚಾರ್ಯ ಕೊರಲಹಳ್ಳಿ ಅವರು ಬಣ್ಣಿಸಿದರು.
ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರ ಪ್ರಥಮ ಆರಾಧನೆ ನಿಮಿತ್ತ ಅಶೋಕ ನಗರ ಪ್ರಾಣದೇವರ ಸನ್ನಿಧಾನದಲ್ಲಿ ಜ್ಞಾನಸತ್ರ ಹಾಗೂ ಸಭಾ ಕಾರ್ಯಕ್ರಮದಲ್ಲಿ ಅವರು ಪ್ರವಚನ ನೀಡಿದರು. ಶ್ರೀಗಳು 50 ವರ್ಷದ ಮುಂದಾಲೋಚನೆ ಮಾಡುತ್ತಿದ್ದ ಮಹಾಸಂತರು ಎಂದರು.
ಪಂ. ಶ್ರೀಹರಿ ಆಚಾರ್ಯ ವಾಳ್ವೇಕರ್ ಮಾತನಾಡಿ, ರಾಜಕೀಯ ವ್ಯಕ್ತಿಗಳಿಗೆ ತಮ್ಮ ಪ್ರವಚನದಲ್ಲಿ ಹೀಗೆ ಮಾಡಿದರೆ ದೇಶಕ್ಕೆ ಒಳ್ಳೆಯದಾಗುತ್ತದೆ ಎಂದು ಶ್ರೀಗಳು ಚಾಟಿ ಬೀಸುತ್ತಿದ್ದರು. ಗುರುಗಳಲ್ಲಿ ಅಪಾರ ಕ್ಷಮಾಗುಣ ಇತ್ತು ಎಂದರು.
ಪಂ. ಅಕ್ಷಯ ಆಚಾರ್ಯ ಉಡುಪಾ, ಗೋಪಾಲ ಕುಲಕರ್ಣಿ ಮಾತನಾಡಿದರು. ವಿಶ್ವಗುರು ಪ್ರತಿಷ್ಠಾನಮ್ ಟ್ರಸ್ಟ್ ನ ಪ್ರಲ್ಹಾದ ಆಚಾರ್ಯ ಕಾತೋಟಿ, ವಾದಿರಾಜ ಭಟ್, ಗೋಪಾಲ ಆಚಾರ್ಯ ಕಾತೋಟಿ, ಸೊರಟೂರ್ ಆಚಾರ್ಯ, ಶ್ರೀನಿವಾಸ ಆಚಾರ್ಯ, ಗೋವಿಂದ ಮೈಸೂರ, ಗುರುರಾಜ ಬಾಗಲಕೋಟ, ಇತರರು ಇದ್ದರು.