ಜಿಲ್ಲೆ

ಶಿಡ್ಲಾಪುರ ಗ್ರಾಮದಲ್ಲಿ ಹಾಡಹಗಲೇ ಮಾಂಗಲ್ಯ ಸರ ಕಳ್ಳತನಕ್ಕೆ ಯತ್ನ

ಬಂಕಾಪುರ: ಹಾಡಹಗಲೇ ಮಹಿಳೆಯ ಮಾಂಗಲ್ಯ ಸರ ಕಿತ್ತುಕೊಳ್ಳಲು ಯತ್ನಿಸಿದ ಘಟನೆ ತಾಲೂಕಿನ ಶಿಡ್ಲಾಪುರ ಗ್ರಾಮದಲ್ಲಿ ಬುಧವಾರ ನಡೆದಿದೆ.

ಗ್ರಾಮದ ವಿದ್ಯಾ ಶರಣಪ್ಪ ಕಲಕಟ್ಟಿ ತನ್ನ ಆರು ತಿಂಗಳ ಮಗುವಿನ ಜತೆ ಮನೆಯಲ್ಲಿ ಇದ್ದಾಗ ಅಪರಿಚಿತ ಮುಸುಕುಧಾರಿ ವ್ಯಕ್ತಿ ಹಿಂದಿನಿಂದ ಬಂದು ಮಹಿಳೆಯ ಕುತ್ತಿಗೆಗೆ ಕೈ ಹಾಕಿ ಮಾಂಗಲ್ಯ ಸರ ಕಿತ್ತುಕೊಂಡಿದ್ದಾನೆ. ಮಗುವಿನ ಕಿವಿಯಲ್ಲಿನ ಓಲೆ ಕಿತ್ತುಕೊಳ್ಳಲು ಯತ್ನಿಸಿದಾಗ ಮಹಿಳೆ ಮನೆಯಿಂದ ಹೊರಬಂದು ಕಳ್ಳನಿಗೆ ಕಲ್ಲಿನಿಂದ ಹಲ್ಲೆ ಮಾಡಿ, ಅಕ್ಕಪಕ್ಕದವರನ್ನು ಕರೆದಿದ್ದಾಳೆ. ಇದರಿಂದ ಗಾಬರಿಗೊಂಡ ಕಳ್ಳ ಮಾಂಗಲ್ಯ ಸರವನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದಾನೆ ಎಂದು ಮಹಿಳೆ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಶಿಗ್ಗಾಂವಿ ಡಿವೈಎಸ್​ಪಿ ಗುರುಶಾಂತಪ್ಪ, ಸಿಪಿಐ ಆಂಜನೇಯ ಎಚ್., ಪಿಎಸ್​ಐ ನಿಂಗರಾಜ ಕೆ.ವೈ. ಹಾಗೂ ಸಿಬ್ಬಂದಿ ಕಳ್ಳನಿಗಾಗಿ ಶೋಧ ನಡೆಸಿದ್ದಾರೆ. ಈ ಕುರಿತು ಬಂಕಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ.

ಕೆಲ ದಿನಗಳಿಂದ ತಾಲೂಕಿನಲ್ಲಿ ಕಳ್ಳತನ ಪ್ರಕರಣಗಳು ಕಂಡು ಬಂದಿದ್ದರಿಂದ ರಾತ್ರಿ ಪೊಲೀಸ್ ಗಸ್ತು ಹೆಚ್ಚಿಸಲಾಗಿದೆ. ಬೈಕ್ ಮತ್ತು ಜಾನುವಾರು ಕಳ್ಳರನ್ನು ಪತ್ತೆ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಗ್ರಾಮಸ್ಥರು ಗ್ರಾಮಕ್ಕೆ ಬರುವ ಅಪರಿಚಿತ ವ್ಯಕ್ತಿಗಳನ್ನು ವಿಚಾರಿಸಬೇಕು. ಸಂಶಯ ಬಂದಲ್ಲಿ ಪೊಲೀಸರಿಗೆ ಮಾಹಿತಿ ನೀಡಬೇಕು. ಗ್ರಾಮ ಪಂಚಾಯಿತಿ ವತಿಯಿಂದ ಪ್ರಮುಖ ರಸ್ತೆಯಲ್ಲಿ ಸಿಸಿ ಕ್ಯಾಮರಗಳನ್ನು ಅಳವಡಿಸಬೇಕು. ಇದರಿಂದ ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತದೆ.  | ಗುರುಶಾಂತಪ್ಪ, ಡಿವೈಎಸ್​ಪಿ