ಜಿಲ್ಲೆ

ಮನೆಗಳ ಬೀಗ ಮುರಿದು ಕಳ್ಳತನಕ್ಕೆ ಯತ್ನ

ಬಂಟ್ವಾಳ: ಮನೆಯಲ್ಲಿ ಯಾರೂ ಇಲ್ಲದ ವೇಳೆ ಎರಡು ಮನೆಯ ಬೀಗ ಮುರಿದು ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ ಘಟನೆ ಬಿ.ಮೂಡ ಗ್ರಾಮದ ಅಲೆತ್ತೂರಿನಲ್ಲಿ ಮಂಗಳವಾರ ರಾತ್ರಿ ನಡೆದಿದೆ.

ಇಲ್ಲಿನ ವಾಸುದೇವ ಹಾಗೂ ಅಲೆತ್ತೂರು ಸಾಲ್ಯಾನ್ ಕುಟುಂಬಿಕರ ಮನೆಯಲ್ಲಿ ಘಟನೆ ನಡೆದಿದ್ದು, ಕಪಾಟನ್ನು ಜಾಲಾಡಿ ಯಾವುದೇ ಸ್ವತ್ತು ಕೊಂಡೊಯ್ಯಲು ಸಾಧ್ಯವಾಗದೆ ಕಳ್ಳರು ಬರಿಗೈಯಲ್ಲಿ ವಾಪಸು ಹೋಗಿದ್ದಾರೆ.

ಕಳೆದ ಒಂದು ವಾರದಿಂದ ಅನಾರೋಗ್ಯದ ನಿಮಿತ್ತ ವಾಸುದೇವ ಅವರು ಆಸ್ಪತ್ರೆಯಲ್ಲಿದ್ದು ಅವರನ್ನು ನೋಡಿಕೊಳ್ಳಲು ಪತ್ನಿಯೂ ಆಸ್ಪತ್ರೆಯಲ್ಲಿದ್ದಾರೆ. ಮಕ್ಕಳಿಬ್ಬರು ಸೋದರ ಸಂಬಂಧಿಯ ಮನೆಯಲ್ಲಿ ಉಳಿದುಕೊಂಡಿದ್ದು, ಮನೆಯಲ್ಲಿ ಯಾರೂ ಇರಲಿಲ್ಲ. ರಾತ್ರಿ ಮುಂಭಾಗದ ಬಾಗಿಲಿನ ಬೀಗ ಮುರಿದು ಕಳ್ಳರು ಒಳ ಪ್ರವೇಶಿಸಿದ್ದಾರೆ. ಬೆಡ್‌ರೂಮಿನಲ್ಲಿದ್ದ ಒಂದು ಕಪಾಟನ್ನು ಸಂಪೂರ್ಣವಾಗಿ ಜಾಲಾಡಿದ್ದು ಇನ್ನೊಂದು ಕಪಾಟನ್ನು ಮುರಿಯಲು ವಿಫಲ ಯತ್ನ ನಡೆಸಿದ್ದಾರೆ. ಆದರೆ ನಗದು ಹಾಗೂ ಚಿನ್ನ್ನಾಭರಣ ದೋಚಲು ಸಾಧ್ಯವಾಗದೆ ವಾಪಸಾಗಿದ್ದಾರೆ.

ಬಳಿಕ ಪಕ್ಕದ ಅಂಗಳದಲ್ಲಿರುವ ಅಲೆತ್ತೂರು ಸಾಲ್ಯಾನ್ ಕುಟುಂಬಿಕರ ಮನೆಯ ಮುಂಭಾಗದ ಬೀಗ ಮುರಿದು ಒಳಪ್ರವೇಶಿಸಿ ಕಪಾಟನ್ನು ಜಾಲಾಡಿದ್ದಾರೆ. ಅಲ್ಲಿಯೂ ಕಳ್ಳರಿಗೆ ಯಾವುದೇ ಸ್ವತ್ತುಗಳು ಸಿಗದೆ ಬರಿಗೈಯಲ್ಲಿ ವಾಪಸಾಗಿದ್ದಾರೆ. ಘಟನಾ ಸ್ಥಳಕ್ಕೆ ಬಂಟ್ವಾಳ ನಗಠ ಠಾಣೆಯ ಅಪರಾಧ ವಿಭಾಗದ ಎಸ್‌ಐ ಕಲೈಮಾರ್, ಎಎಸೈ ನವೀನ್, ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿದ್ದಾರೆ.