ಜಿಲ್ಲೆ

ಹೊಳೆಆಲೂರ ಅಂಚೆ ಕಚೇರಿಯಲ್ಲಿ ಕಳ್ಳತನಕ್ಕೆ ಯತ್ನ

ಹೊಳೆಆಲೂರ: ಇಲ್ಲಿನ ಹೃದಯಭಾಗದ ಅಂಚೆ ಕಚೇರಿಯಲ್ಲಿ ಭಾನುವಾರ ರಾತ್ರಿ ಕಳ್ಳತನಕ್ಕೆ ಯತ್ನಿಸಲಾಗಿದ್ದು, ಸರ್ಕಾರಿ ಕಚೇರಿಗೇ ಠಕ್ಕರು ನುಗ್ಗಿರುವುದನ್ನು ಕೇಳಿ ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ. ಅಂಚೆ ಕಚೇರಿ ಮಾತ್ರವಲ್ಲ ಬಸವ ನಗರದ ಮನೆಯೊಂದರಲ್ಲಿ ನಗ-ನಗದು ದೋಚಲಾಗಿದೆ. ಅಂಚೆ ಕಚೇರಿಯ ಬಾಗಿಲ ಎರಡು ಕಡೆ ಹಾಕಿದ್ದ ಬೀಗ ಒಡೆದು ನುಗ್ಗಿರುವ ಕಳ್ಳರು ಭದ್ರತಾ ಪೆಟ್ಟಿಗೆ (ಟ್ರಜರಿ)ಯ ಬೀಗ ಮುರಿಯಲು ಶತಪ್ರಯತ್ನ ಮಾಡಿದ್ದಾರೆ. ಕಳ್ಳರಿಂದ ಅದು ಸಾಧ್ಯವಾಗಿಲ್ಲ. ಕೂಡಲೇ ಅಲ್ಲಿಂದ ಕಾಲ್ಕಿತಿದ್ದಾರೆ.

ಇದೇ ವೇಳೆ ಗ್ರಾಮದ ದೇವೇಂದ್ರಪ್ಪ ಎಂಬುವರ ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿ ಹೊಂಚು ಹಾಕಿದ್ದಾರೆ. 50 ಗ್ರಾಂ ತಾಳಿಸರ, 10 ಗ್ರಾಂ ನೆಕ್ಲೇಸ್, 15 ಗ್ರಾಂ ತೂಕದ 4 ಉಂಗುರ, 10 ಗ್ರಾಂ ಚೈನ್, 5 ಗ್ರಾಂ ಸರ, ಕಿವಿಯೂಲೆ, ಕೈಕಟ್ಟು ಸೇರಿ 150 ಗ್ರಾಂ. ಬಂಗಾರ ಹಾಗೂ 20 ಸಾವಿರ ರೂ. ನಗದು ಕಳವು ಮಾಡಿದ್ದಾರೆ. ಸ್ಥಳಕ್ಕೆ ಎಎಸ್‌ಪಿ. ಎಸ್.ಬಿ. ಸಂಕದ, ಡಿವೈಎಸ್‌ಪಿ ಪ್ರಭುಗೌಡ ಡಿ.ಕೆ., ಸಿಪಿಐ ಎಸ್.ಎಸ್. ಬೀಳಗಿ, ಪಿಎಸ್‌ಐ ಪ್ರಶಾಂತ ಬಣಕಾರ, ಭೇಟಿ ನೀಡಿ ಪರಿಶೀಲಿಸಿದರು. ಅಂಚೆ ಕಚೇರಿ ಹಾಗೂ ಮನೆಗೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಬಂದು ಪರಿಶೀಲಿಸಿದರು. ಪ್ರಕರಣ ದಾಖಲಿಸಿಕೊಂಡಿರುವ ಪೋಲಿಸರು ತನಿಖೆ ಮುಂದುವರಿಸಿದ್ದಾರೆ. ಗ್ರಾಮದಲ್ಲಿ ಹಲವು ದಿನಗಳಿಂದ ಪದೇಪದೆ ಕಳ್ಳತನದ ಪ್ರಕರಣಗಳು ನಡೆಯುತ್ತಿವೆ. ಪಾನ್, ಚಿಕನ್ ಅಂಗಡಿ, ಅಟೋಮೊಬೈಲ್ ಸೆಂಟರ್ ಸೇರಿ ಹಲವು ಕಡೆ ಹಣ- ಒಡವೆ ಕಳ್ಳತನ ಮಾಡಲಾಗಿದೆ. ಆದರೂ ಪೋಲಿಸ್ ಇಲಾಖೆಯರು ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.