ಜಿಲ್ಲೆ

ಪೊಲೀಸ್ ಠಾಣೆಯಲ್ಲೇ ಕತ್ತು ಕೊಯ್ದುಕೊಂಡು ಆತ್ಮ ಹತ್ಯೆಗೆ ಯತ್ನ !

ವಿಜಯಪುರ: ಪೊಲೀಸರು ವಶಕ್ಕೆ ಪಡೆದ ಬೈಕ್ ವಾಪಸ್ ಕೊಡದ ಹಿನ್ನೆಲೆ ವ್ಯಕ್ತಿಯೋರ್ವ ಪೇದೆಗೆ ಜೀವ ಬೆದರಿಕೆ ಹಾಕಿದ್ದಲ್ಲದೇ ಠಾಣೆಯಲ್ಲಿಯೇ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.

ಇಲ್ಲಿನ ಗಾಂಧಿ ಚೌಕ್ ಪೊಲೀಸ್ ಠಾಣೆಯಲ್ಲಿ ಜೂ. 12 ರಂದೇ ಈ ಘಟನೆ ನಡೆದಿದೆ. ಸ್ಥಳೀಯ ನಿಸಾರಮಡ್ಡಿಯ ನಿವಾಸಿ ಇರ್ಫಾನ್ ಬಂದಗಿಸಾಬ ಬಾಗವಾನ ಎಂಬಾತನೇ ಈ ಕೃತ್ಯ ಎಸಗಿದ್ದು, ಈತನ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ.

ಜೂ.11 ರಂದು ರಾತ್ರಿ ಡಬ್ಲೂಎಚ್‌ಸಿ ವಿ.ಎಸ್. ಬಸರಿಗಿಡದ ಅವರು ರಾತ್ರಿ ಪಹರೆಯಲ್ಲಿದ್ದಾಗ ಇರ್ಫಾನ್ ಬೈಕ್ ಮೇಲೆ ತೆರಳುತ್ತಿದ್ದನು. ನಿಯಮ ಉಲ್ಲಂಘಿಸಿದ ಆರೋಪದ ಮೇರೆಗೆ ಇರ್ಫಾನ್‌ನ ಬೈಕ್ ವಶಕ್ಕೆ ಪಡೆದ ಪೇದೆ ಅದನ್ನು ಗಾಂಧಿಚೌಕ್ ಠಾಣೆಯಲ್ಲಿರಿಸಿದ್ದನು. ಮರುದಿನ ಠಾಣೆಗೆ ಬಂದ ಇರ್ಫಾನ್ ಬೈಕ್ ಕೊಡದೇ ಹೋದರೆ ಪರಿಣಾಮ ನೆಟ್ಟಗಿರಲ್ಲವೆಂದು ಬೆದರಿಕೆ ಹಾಕಿದ್ದಾನೆ. ಆಗ ಪೇದೆ ನ್ಯಾಯಾಲಯಕ್ಕೆ ಹೋಗಿ ದಂಡ ಕಟ್ಟಿ ಬಂದರೆ ಬೈಕ್ ಬಿಡುವುದಾಗಿ ಹೇಳಿದಾಗ, ಇರ್ಫಾನ್ ಬ್ಲೇಡ್‌ನಿಂದ ಕತ್ತುಕೊಯ್ದುಕೊಳ್ಳಲು ಯತ್ನಿಸಿದ್ದಾನೆ. ಕೂಡಲೇ ಆತನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.