ಮೂವರು ಅಪರಿಚಿತರು ಕ್ಲೋರೋಫಾರ್ಮ್ ಬಳಸಿ ದರೋಡೆಗೆ ಯತ್ನಿಸಿ ಪರಾರಿಯಾಗಿದ್ದಾರೆ 
ಜಿಲ್ಲೆ

ಕ್ಲೋರೋಫಾರ್ಮ್ ಬಳಸಿ ದರೋಡೆ ಯತ್ನ

ಇಂದಿರಾ ಎನ್ ಕೆ

ಕಿನ್ನಿಗೋಳಿ: ಬಜ್ಪೆ ಮಾರುಕಟ್ಟೆ ಸಮೀಪದ ಖಾಸಗಿ ಫೈನಾನ್ಸ್‌ಗೆ ಗುರುವಾರ ಸಂಜೆ ನುಗ್ಗಿದ ಮೂವರು ಅಪರಿಚಿತರು ಕ್ಲೋರೋಫಾರ್ಮ್ ಬಳಸಿ ದರೋಡೆಗೆ ಯತ್ನಿಸಿ ಪರಾರಿಯಾಗಿದ್ದಾರೆ. ಸಂಜೆ 4.30ರ ವೇಳೆಗೆ ದ್ವಿಚಕ್ರ ವಾಹನದಲ್ಲಿ ಬಜ್ಪೆ ಮಸೀದಿ ಕಡೆಯಿಂದ ಆಗಮಿಸಿದ ಮೂವರು ಫೈನಾನ್ಸ್‌ನ ಒಳಗೆ ನುಗ್ಗಿ ಕ್ಲೋರೋಫಾರ್ಮ್ ತುಂಬಿದ ಡಬ್ಬದ ಮುಚ್ಚಳ ತೆಗೆದು ಟೇಬಲ್ ಮೇಲಿಟ್ಟು ಹಣ ತೆಗೆಯಲು ಕೈ ಹಾಕಿದ್ದಾರೆ. ಈ ವೇಳೆ ತಡೆಯಲು ಯತ್ನಿಸಿದ ಫೈನಾನ್ಸ್‌ನ ಇಬ್ಬರು ಸಿಬ್ಬಂದಿಯನ್ನು ದೂಡಿ ಹಾಕಿದಾಗ ಸಿಬ್ಬಂದಿ ಜೋರಾಗಿ ಕಿರುಚಿದ ಕಾರಣ ಆರೋಪಿಗಳು ಪರಾರಿಯಾಗಿದ್ದಾರೆ. ಫಾರೆನ್ಸಿಕ್, ಬೆರಳಚ್ಚು ತಜ್ಞರ ತಂಡ ಹಾಗೂ ಬಜ್ಪೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.

ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಮೂವರು ಆರೋಪಿಗಳ ಪೈಕಿ ಓರ್ವ ಹೆಲ್ಮೆಟ್‌ಧಾರಿ ಸ್ಕೂಟರನ್ನು ಸ್ಟಾರ್ಟಿಂಗ್‌ನಲ್ಲಿಯೇ ಇಟ್ಟು ಕಾಯುತ್ತಿದ್ದು, ಮತ್ತೋರ್ವ ಓರ್ವ ಬುರ್ಕಾ ಧರಿಸಿ ಸವಾರನ ಹಿಂಬದಿ ಕುಳಿತಿದ್ದನು. ಸಿಸಿ ಕ್ಯಾಮರಾದ ದೃಶ್ಯ ಗಮನಿಸಿ ಬುರ್ಖಾಧಾರಿ ಮಹಿಳೆಯಲ್ಲ, ಪುರುಷ ಎಂದು ಶಂಕಿಸಲಾಗಿದೆ. ಫೈನಾನ್ಸ್‌ಗೆ ನುಗ್ಗಿದ ಇಬ್ಬರಲ್ಲಿ ಓರ್ವ ಹೆಲ್ಮೆಟ್ ಹಾಗೂ ರೈನ್‌ಕೋಟ್ ಧರಿಸಿದ್ದ ಎನ್ನಲಾಗಿದೆ. ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.