ಚಂದ್ರಗುತ್ತಿ ದೇವಸ್ಥಾನದಲ್ಲಿ ಕಳ್ಳತನ ಯತ್ನ ನಡೆಸಿದ ಬಂಧಿತ ಆರೋಪಿಗಳು. 
ಜಿಲ್ಲೆ

ಚಂದ್ರಗುತ್ತಿ ರೇಣುಕಾಂಬ ದೇವಸ್ಥಾನದಲ್ಲಿ ಕಳ್ಳತನಕ್ಕೆ ಯತ್ನ: ಮೂವರ ಬಂಧನ

ನವೀನ ಬಿ.ಎಂ

ಶಿವಮೊಗ್ಗ: ಸೊರಬ ತಾಲೂಕಿನ ಚಂದ್ರಗುತ್ತಿ ರೇಣುಕಾಂಬ ದೇವಸ್ಥಾನದ ಕಮಿಟಿಯಲ್ಲಿ ಸ್ಥಾನ ಸಿಗದೇ ಇರುವುದಕ್ಕೆ ಅಸಮಾಧಾನಗೊಂಡು ಅಧ್ಯಕ್ಷರ ಹೆಸರಿಗೆ ಕಳಂಕ ತಂದು ಅವರನ್ನು ಹುದ್ದೆಯಿಂದ ಕೆಳಗಿಳಿಸಲು ಸಂಚು ರೂಪಿಸಿ ಕಳ್ಳತನದ ಯತ್ನ ನಡೆದಿದೆ ಎಂದು ಬಿಂಬಿಸಿದ್ದ ವ್ಯಕ್ತಿ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಚಂದ್ರಗುತ್ತಿ ಭೋವಿ ಕಾಲನಿಯ ಪ್ರವೀಣ್ (33), ದೇವರಾಜು (50) ಮತ್ತು ಭೀಮಪ್ಪ (35) ಬಂಧಿತರು. ದೇವರಾಜು ದೇವಸ್ಥಾನದ ಕಮಿಟಿಗೆ ಸೇರಲು ಅರ್ಜಿ ಸಲ್ಲಿಸಿದ್ದ. ಆದರೆ ಈತನ ಅರ್ಜಿಯನ್ನು ತಿರಿಸ್ಕರಿಸಲಾಗಿತ್ತು. ಅರ್ಜಿ ತಿರಸ್ಕೃತಗೊಳ್ಳಲು ದೇವಸ್ಥಾನದ ಕಮಿಟಿಯ ಹಾಲಿ ಅಧ್ಯಕ್ಷರೇ ಕಾರಣ ಎಂದು ದೇವರಾಜು ಭಾವಿಸಿದ್ದ. ಕಳಂಕ ಬಂದರೆ ಅಧ್ಯಕ್ಷ ಸ್ಥಾನದಿಂದ ಅವರನ್ನು ಕೆಳಗಿಸಬಹುದು ಎಂದು ಆಲೋಚನೆ ಮಾಡಿದ್ದ. ಹಾಗಾಗಿ ಪ್ರವೀಣ್ ಮತ್ತು ಭೀಮಪ್ಪ ಜತೆ ಸೇರಿಕೊಂಡು ದ್ವೇಷದಿಂದ ಅಧ್ಯಕ್ಷರ ಹೆಸರಿಗೆ ಕಳಂಕ ತರಲು ನಿರ್ಧರಿಸಿದ್ದ. ಮೂವರು ಸೇರಿಕೊಂಡು ಚಂದ್ರಗುತ್ತಿ ರೇಣುಕಾಂಬಾ ದೇವಸ್ಥಾನದಲ್ಲಿ ಕಳ್ಳತನಕ್ಕೆ ಯತ್ನಿಸಿದಂತೆ ನಾಟಕವಾಡಿದ್ದರು.
ದೇವಸ್ಥಾನದಲ್ಲಿ ಕಳ್ಳತನಕ್ಕೆ ಯತ್ನಿಸಲಾಗಿದೆ ಎಂದು ದೇವಸ್ಥಾನದ ಪ್ರಭಾರ ಕಾರ್ಯನಿವಣಾಧಿಕಾರಿ ಶಿವಪ್ರಸಾದ್ ಅವರು ಕಳೆದ ಆ.3ರಂದು ನೀಡಿದ ದೂರಿನ ಮೇರೆಗೆ ಸೊರಬ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳ ಪತ್ತೆಗೆ ಶಿಕಾರಿಪುರ ಉಪ ವಿಭಾಗದ ಡಿವೈಎಸ್ಪಿ ಶಿವಾನಂದ ಮದರಖಂಡಿ ಮತ್ತು ಸೊರಬ ಸಿಪಿಐ ರಾಜಶೇಖರ್ ಮೇಲ್ವಿಚಾರಣೆಯಲ್ಲಿ ಸೊರಬ ಠಾಣೆ ಪಿಎಸ್‌ಐಗಳಾದ ನಾಗರಾಜ್ ಮತ್ತು ಮಾಳಪ್ಪ ವೈ ಚಿಪ್ಪಲಕಟ್ಟಿ ನೇತೃತ್ವದಲ್ಲಿ ಸಿಬ್ಬಂದಿಗಳಾದ ರಾಘವೇಂದ್ರ, ವಿನಯ್, ಸಂದೀಪ್ ಅವರನ್ನೊಳಗೊಂಡ ತಂಡ ರಚಿಸಲಾಗಿತ್ತು.
ಸಿಸಿ ಟಿವಿಯಲ್ಲಿ ಸೆರೆ ಸಿಕ್ಕ ಆರೋಪಿಗಳ ಚಲನವಲನಗಳ ಬಗ್ಗೆ ಅನುಮಾನಗೊಂಡ ಪೊಲೀಸರು ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೃತ್ಯ ಬೆಳಕಿಗೆ ಬಂದಿದೆ. ಅಧ್ಯಕ್ಷರನ್ನು ಕಮಿಟಿಯಿಂದ ತೆಗೆಸುವ ಸಲುವಾಗಿ ದೇವಸ್ಥಾನ ಕಳ್ಳತನವಾಗಿರುವಂತೆ ಬಿಂಬಿಸಿ ದೇವಸ್ಥಾನದ ಪಾವಿತ್ರತೆ ಹಾಗೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿರುವುದು ವಿಚಾರಣೆಯಿಂದ ಕಂಡುಬಂದಿದ್ದು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.