ಮೈಸೂರು: ಈಗಾಗಲೇ ಮದುವೆ ಆಗಿದ್ದರೂ ಮದುವೆಯಾಗುವುದಾಗಿ ವಂಚಿಸಿದ್ದಲ್ಲದೆ ಮಹಡಿಯಿಂದ ತಳ್ಳಿ ಕೊಲೆಗೆ ಯತ್ನಿಸಲಾಗಿದೆ ಎಂದು ನೊಂದ ಯುವತಿ ಪೊಲೀಸರಿಗೆ ದೂರು ನೀಡಿದ್ದಾರೆ.
ಪ್ರಿಯಕರ ಆಲ್ಬರ್ಟ್ ರೆಕ್ಸಾ ಜೇಮ್ಸ್, ಆತನ ತಮ್ಮ ಗೋಕುಲ್, ಆಲ್ಬರ್ಟ್ ಪತ್ನಿ ಸುಭಿತಾ ಕಾರಣ ಎಂದು ವಿಜಯನಗರದ ವಿದ್ಯಾಶ್ರೀ ಕುವೆಂಪುನಗರ ಪೊಲೀಸರಿಗೆ ದೂರು ನೀಡಿದ್ದಾರೆ. ಎರಡನೇ ಮಹಡಿಯಿಂದ ಬಿದ್ದಿರುವ ವಿದ್ಯಾಶ್ರೀ ಅವರಿಗೆ ಕೈ, ಕಾಲು, ಬೆನ್ನು ಪೆಟ್ಟಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಂಗಳೂರಿನಲ್ಲಿ ಕಾರು ಶೋ ರೂಂನಲ್ಲಿ ಕೆಲಸ ಮಾಡುತ್ತಿದ್ದಾಗ ಆಲ್ಬರ್ಟ್ ಹಾಗೂ ವಿದ್ಯಾಶ್ರೀ ನಡುವೆ ಸ್ನೇಹ ಬೆಳೆದಿದ್ದು, ಅದಾಗಲೇ ಮದುವೆ ಆಗಿದ್ದರೂ ಅದನ್ನು ಮುಚ್ಚಿಟ್ಟು ಮದುವೆ ಆಗುವುದಾಗಿ ಆಲ್ಬರ್ಟ್ ನಂಬಿಸಿದ್ದನೆನ್ನಲಾಗಿದೆ.
ಕೆಲ ದಿನಗಳ ಬಳಿಕ ಬೆಂಗಳೂರಿನಿಂದ ಮೈಸೂರಿಗೆ ಕರೆತಂದು ಮನೆ ಮಾಡಿ ಇರಿಸಿದ್ದು, ಈ ವೇಳೆ ಆತನಿಗೆ ಈಗಾಗಲೇ ಮದುವೆ ಆಗಿರುವ ಸಂಗತಿ ತಿಳಿದಾಗ ಇಬ್ಬರ ನಡುವೆ ಗಲಾಟೆ ನಡೆದಿದೆ. ಅಲ್ಲದೆ ಪೊಲೀಸ್ ಠಾಣೆಯಲ್ಲಿ ಸಂಧಾನ ನಡೆದಿದೆ. ಮೊದಲ ಪತ್ನಿ ಸುಭಿತಾಳಿಗೆ ವಿಚ್ಛೇದನ ನೀಡಿ ಮದುವೆ ಆಗುತ್ತೇನೆ ಎಂದ ಆಲ್ಬರ್ಟ್, ವಿದ್ಯಾಶ್ರೀ ಅನ್ನು ನಿರ್ಲಕ್ಷೃ ಮಾಡಿದ್ದನೆನ್ನಲಾಗಿದೆ. ಇದರಿಂದ ಆಕೆ ದಟ್ಟಗಳ್ಳಿ ಬಳಿ ಇರುವ ಆಲ್ಬರ್ಟ್ ಮನೆಗೆ ಹೋದಾಗ, ಗೋಕುಲ್ ಆಕೆಯನ್ನು ಮಹಡಿಯಿಂದ ತಳ್ಳಿ ಕೊಲೆಗೆ ಯತ್ನಿಸಿದ್ದಾನೆ. ಇದಕ್ಕೆ ಆಲ್ಬರ್ಟ್, ಸುಭಿತಾ ಕುಮ್ಮಕ್ಕು ನೀಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.