ಬೆಂಗಳೂರು: ಬಿಬಿಎಂಪಿಯಲ್ಲಿ ಚುನಾಯಿತ ಸರ್ಕಾರ ಸ್ಥಾಪನೆಗೆ ಅವಕಾಶ ಮಾಡಿಕೊಡದೆ ವಿಭಜನೆ ನೆಪವೊಡ್ಡಿ ಚುನಾವಣೆಯನ್ನು ಮುಂದೂಡುವ ಯತ್ನಕ್ಕೆ ಕಾಂಗ್ರೆಸ್‌ನಲ್ಲೇ ಭಿನ್ನರಾಗ ಎದ್ದಿದೆ. ಕಾರ್ಪೊರೇಟರ್‌ಗಳಿಲ್ಲದ ಪಾಲಿಕೆ ಗ್ರಾಪಂಗಿಂತಲೂ ಕಡೆಯಾಗಿದೆ ಎಂಬ ಭಾವನೆ ಮಾಜಿ ಮೇಯರ್ ಆದಿಯಾಗಿ ಕಾಂಗ್ರೆಸ್‌ನ ವಿವಿಧ ಹಂತಗಳ ಮುಖಂಡರು ಅಸಮಾಧಾನ ಹೊರಹಾಕಿದ್ದಾರೆ.
ಲೋಕಸಭೆ ಚುನಾವಣೆ ಬಳಿಕ ಬಿಬಿಎಂಪಿಗೆ ಚುನಾವಣೆ ನಡೆಸುವ ಪ್ರಕ್ರಿಯೆ ಕೈಗೊಳ್ಳುವ ಭರವಸೆಯನ್ನು ಕಾರ್ಯಕರ್ತರು ಹಾಗೂ ಮುಖಂಡರಿಗೆ ನೀಡಲಾಗಿತ್ತು. ಆದರೀಗ ಫಲಿತಾಂಶ ಹೊರಬಿದ್ದ ಬಳಿಕ ಪಾಲಿಕೆ ಚುನಾವಣೆ ನಡೆಸುವ ಹೇಳಿಕೆಗೆ ಅಂಟಿಕೊಳ್ಳದೆ ವಿಭಜನೆ ಮಂತ್ರ ಜಪಿಸುತ್ತಿರುವ ನಾಯಕರ ನಿಲುವಿಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ವಿಭಜನೆಗೆ ಒಪ್ಪಿದರೆ ಎಲ್ಲ ಪ್ರಕ್ರಿಯೆಗಳನ್ನು ಹೊಸದಾಗಿ ಆರಂಭಿಸಬೇಕು. ಅಧಿಕಾರಿಗಳ ಮಟ್ಟದಲ್ಲಿ ಕೈಗೊಳ್ಳುವ ತೀರ್ಮಾನಗಳು ಜನಪರವಾಗಿರದೆ ಮತ್ತೊಂದು ಬಿಬಿಎಂಪಿಯದ್ದೇ ಪ್ರತಿರೂಪದಂತೆ ಆಡಳಿತ ವ್ಯವಸ್ಥೆಯನ್ನು ರೂಪಿಸುತ್ತಾರಷ್ಟೇ. ಈ ಪ್ರಹಸನಕ್ಕಾಗಿ ಈಗಾಗಲೇ ಕಳೆದಹೋಗಿರುವ ಮೂರೂಮುಕ್ಕಾಲು ವರ್ಷದ ಜತೆಗೆ ಮತ್ತೊಂದು ವರ್ಷದವರೆಗೆ ಚುನಾವಣೆಗೆ ಕಾಯಬೇಕಾಗುತ್ತದೆ. ಅಲ್ಲಿಯವರೆಗೆ ಕಾದುಕುಳಿತರೆ ಪ್ರತಿಪಕ್ಷದ ಕೈಗೆ ನಾವೇ ಹೋರಾಟದ ಅಸ್ತ್ರ ಕೊಟ್ಟಂತೆ ಆಗುತ್ತದೆ. ಮತದಾರರನ್ನು ಪಕ್ಷದತ್ತ ಸೆಳೆಯಲು ಏನೆಲ್ಲ ಕೆಲಸ ಮಾಡಬೇಕೋ ಅದನ್ನು ಮಾಡಿ ಚುನಾವಣೆಗೆ ಹೋಗುವುದೇ ಕ್ಷೇಮ ಎಂಬ ಸಲಹೆಯನ್ನು ಕೆಲ ಶಾಸಕರು, ಮಾಜಿ ಮೇಯರ್/ಆಡಳಿತ ಪಕ್ಷದ ನಾಯಕರು ಪಕ್ಷದ ಹಿರಿಯರಿಗೆ ರವಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬಿಜೆಪಿ ಬಲ ಕುಗ್ಗಿಸುವ ತಂತ್ರಕ್ಕೆ ಚಿಂತನೆ?:
ರಾಜಧಾನಿಯಲ್ಲಿ ಬಿಜೆಪಿ ತನ್ನದೇಯಾದ ಹಿಡಿತ ಹೊಂದಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದೆಲ್ಲೆಡೆ ಪಕ್ಷದ ಅಲೆ ಇದ್ದರೂ, ಬೆಂಗಳೂರಿನಲ್ಲಿ ಬಿಜೆಪಿಯನ್ನು ಹಿಂದಿಕ್ಕಲು ಸಾಧ್ಯವಾಗಿಲ್ಲ. ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ತನ್ನ ಬಲವರ್ಧನೆ ಮಾಡಿಕೊಂಡಿದೆ. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ತನ್ನದೇಯಾದ ಕಾರ್ಯಕ್ರಮಗಳ ಮೂಲಕ ಬಿಜೆಪಿಯನ್ನು ಮಣಿಸಲು ವಿಶೇಷ ಕಾರ್ಯತಂತ್ರ ರೂಪಿಸಬೇಕು. ಇದರ ಆಧಾರದ ಮೇಲೆ ಬಿಬಿಎಂಪಿ ಚುನಾವಣೆ ನಡೆಸಿ ಅಧಿಕಾರವನ್ನು ಕೈವಶ ಮಾಡಿಕೊಳ್ಳಬೇಕು ಎಂದು ಕಾಂಗ್ರೆಸ್‌ನ ಮುಖಂಡರು ಪಕ್ಷದ ಹಿರಿಯರಿಗೆ ಮಾಹಿತಿ ಒದಗಿಸಿದ್ದಾರೆ ಎಂದು ತಿಳಿದುಬಂದಿದೆ.
ಇದರ ಜತೆಗೆ ಸ್ಥಳೀಯ ಸಂಸ್ಥೆಗಳಿಗೆ ಹೆಚ್ಚಿನ ಅಧಿಕಾರ ನೀಡುವ ಸಂವಿಧಾನಸ 74ನೇ ತಿದ್ದುಪಡಿ ಮಾಡಿ ಜಾರಿಗೊಳಿಸುವಲ್ಲಿ ಮಾಜಿ ಪ್ರಧಾನಿ ರಾಜೀವ್‌ಗಾಂಧಿ ಯಶಸ್ವಿಯಾಗಿದ್ದರು. ಇದರನ್ವಯ ಹೆಚ್ಚು ಕಾಲ ಚುನಾವಣೆ ನಡೆಸದೆ ಸ್ಥಳೀಯ ಸಂಸ್ಥೆಯನ್ನು ಹಾಗೆಯೇ ಬಿಡಲಾಗದು. ಜತೆಗೆ ಈ ಶ್ರೇಯಸ್ಸನ್ನು ಪಕ್ಷದ ಪರವಾದ ವಾತಾವರಣ ಮೂಡಿಸಲು ಸಾಧ್ಯವಾಗಿಲ್ಲ. ಈ ಕೆಲಸವನ್ನು ಮಾಡದೆ ಚುನಾವಣೆ ಮುಂದೂಡುವತ್ತಲೇ ದೃಷ್ಟಿಹರಿಸಿದರೆ ಪಕ್ಷದ ವರ್ಚಸ್ಸಿಗೆ ಹಿನ್ನಡೆಯಾಗುವ ಸಾಧ್ಯತೆ ಇದೆ ಎಂಬ ಸಂದೇಶವನ್ನು ಕೆಲ ಕಾಂಗ್ರೆಸಿಗರು ಸಿಎಂ ಬಳಿ ವಾಸ್ತವ ಸ್ಥಿತಿ ಬಗ್ಗೆ ಚರ್ಚಿಸಿದ್ದಾರೆ.
ವಿಭಜಿಸಿದರೆ ನಿರ್ವಹಣೆ ಕಷ್ಟ:
ಬಿಬಿಎಂಪಿಯನ್ನು ವಿಭಜಿಸದೆ ಹಾಲಿಯಿರುವ ವ್ಯವಸ್ಥೆಯನ್ನು ಇನ್ನಷ್ಟು ಸುಧಾರಣೆ ತರಲು ಸಾಧ್ಯವಿದೆ. ಅಗತ್ಯವಿದ್ದಲ್ಲಿ ವಲಯಗಳ ಸಂಖ್ಯೆ ಹೆಚ್ಚಿಸಿ ಹಿರಿಯ ಅಧಿಕಾರಿಗಳಿಗೆ ಹೆಚ್ಚಿನ ಅಧಿಕಾರ, ಹೊಣೆ ನೀಡಲಿ. ಮೇಯರ್ ಇನ್ ಕೌನ್ಸಿಲ್ ಮಾದರಿಯಲ್ಲಿ ಆಡಳಿತ ನಡೆಸಿದರೆ ಮಹಾಪೌರ ಅವಧಿ ಹೆಚ್ಚಳಗೊಂಡು ಉತ್ತಮ ಕೆಲಸವನ್ನು ಮಾಡಲು ಸಾಧ್ಯವಿದೆ. ಇದಕ್ಕಾಗಿ ಸರ್ಕಾರ ಬಿಬಿಎಂಪಿ ಮೇಯರ್ ಹಾಗೂ ಆಯುಕ್ತರಿಗೆ ಹೆಚ್ಚಿನ ಅಧಿಕಾರವನ್ನು ನೀಡಬೇಕು ಎಂದು ಮಾಜಿ ಮೇಯರ್ ಎಸ್.ಕೆ.ನಟರಾಜ್ ಆಗ್ರಹಿಸಿದ್ದಾರೆ.
ಒಂದು ವೇಳೆ ಸರ್ಕಾರ ಹಠ ಹಿಡಿದು ವಿಭಜಿಸಿದರೆ ಪ್ರಮುಖ ಮೂಲಸೌಕರ್ಯ ಜಾರಿಗೆ ತೊಂದರೆ ಎದುರಾಗಲಿದೆ. ಒಂದು ಪಾಲಿಕೆಯಲ್ಲಿ ಕೈಗೆತ್ತಿಕೊಳ್ಳುವ ಮಳೆನೀರುಗಾಲುವೆ ಕಾಮಗಾರಿ ಇನ್ನೊಂದು ಪಾಲಿಕೆಯಲ್ಲಿ ಹಾದುಹೋಗುತ್ತದೆ. ಆಗ ಮುಂದುವರಿದ ಕೆಲಸವನ್ನು ಯಾರು ಮಾಡಬೇಕೆಂಬ ಜಿಜ್ಞಾಸೆ ಮೂಡುತ್ತದೆ. ಇದೇ ರೀತಿ ಪ್ರಮುಖ ರಸ್ತೆಗಳು, ಮೇಲ್ಸೇತುವೆಗಳು ಹಾಗೂ ಬೃಹತ್ ಕಾಮಗಾರಿಗಳನ್ನು ನಿರ್ವಹಿಸಲು ಗಡಿ ಸಮಸ್ಯೆ ಎದುರಾಗುತ್ತದೆ. ಇಂಥ ಸಮಸ್ಯೆ ಈಗಾಗಲೇ ದೆಹಲಿ, ಮುಂಬೈನಲ್ಲಿ ಉದ್ಭವಿಸಿದೆ. ಹಾಗಾಗಿ ಚುನಾವಣೆ ಮುಂದೂಡಲು ವಿಭಜನೆ ತಂತ್ರಕ್ಕೆ ಮೊರೆ ಹೋಗದೆ ಏಕ ಪಾಲಿಕೆ ವ್ಯವಸ್ಥೆಯನ್ನು ಸಶಕ್ತಗೊಳಿಸಬೇಕು ಎಂದು ಎಸ್.ಕೆ.ನಟರಾಜ್ ಪ್ರತಿಪಾದಿಸಿದ್ದಾರೆ.
ಮೇಯರ್‌ಗೆ ಹೆಚ್ಚಿನ ಅಧಿಕಾರ ಇರಬೇಕು:
ಬಿಬಿಎಂಪಿಯಲ್ಲಿ ಪ್ರಸ್ತುತ ಹೇಳಿಕೊಳ್ಳುವಂತಹ ಕೆಲಸಗಳು ನಡೆಯುತ್ತಿಲ್ಲ. ಮೂರೂಮುಕ್ಕಾಲು ವರ್ಷ ಸಂದರೂ ಚುನಾವಣೆ ನಡೆಸದಿರುವುದು ಸರಿಯಲ್ಲ. ಯಾವುದೇ ಪಕ್ಷ ಸರ್ಕಾರ ನಡೆಸಿದರೂ ಪಾಲಿಕೆ ಆಡಳಿತ ಬಿಗಿ ಮಾಡಬೇಕು. ಬೇರೆ ಮೆಟ್ರೋಪಾಲಿಟನ್ ಸಿಟಿಗಳಲ್ಲಿ ಇರುವಂತೆ ಮೇಯರ್ ಅಧಿಕಾರವಧಿ 5 ವರ್ಷ ಇರಬೇಕು. ಇದರಿಂದ ಮಹಾಪೌರರು ಗಟ್ಟಿ ನಿರ್ಧಾರ ಕೈಗೊಂಡು ಯೋಜನೆಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಬಹುದು. ಸರ್ಕಾರ 3 ಪಾಲಿಕೆ ರಚಿಸಿದರೂ, ಮೇಯರ್‌ಗಳಿಗೆ ಹೆಚ್ಚಿನ ಅಧಿಕಾರ ನೀಡಿದರಷ್ಟೇ ಅಭಿವೃದ್ಧಿ ಸಾಧ್ಯವಾಗುತ್ತದೆ.
- ಎಂ.ರಾಮಚಂದ್ರಪ್ಪ, ಮಾಜಿ ಮೇಯರ್
ಬೆಂಗಳೂರಿನ ಜನಸಂಖ್ಯೆ 1.3 ಕೋಟಿ ದಾಟಿದ್ದು, ಭವಿಷ್ಯದಲ್ಲಿ ಇನ್ನಷ್ಟು ಬೆಳವಣಿಗೆ ಹೊಂದಲಿದೆ. ಹಾಲಿ ವ್ಯವಸ್ಥೆಯಲ್ಲಿ ಬಿಬಿಎಂಪಿ ಜನರಿಗೆ ಉತ್ತಮ ಆಡಳಿತ ನೀಡಲು ವಿಲವಾಗಿದೆ. ಸರ್ಕಾರಕ್ಕೂ ಪಾಲಿಕೆ ಮೇಲೆ ಸರಿಯಾದ ನಿಯಂತ್ರಣ ಇಲ್ಲವಾಗಿದೆ. ಅಧಿಕಾರಿ ವರ್ಗವೂ ಸಮರ್ಪಕವಾಗಿ ಕೆಲಸ ಮಾಡದಿರುವುದು ನಗರದ ಜನರ ಆಶಯ ಈಡೇರಿಸಲು ಸಾಧ್ಯವಾಗಿಲ್ಲ. ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಬಿಬಿಎಂಪಿ ಆಡಳಿತವನ್ನು ಮೇಲ್ದರ್ಜೆಗೇರಿಸುವ ಅಗತ್ಯ ಇದೆ. ದೇಶ ಹಾಗೂ ವಿಶ್ವದ ಭರವಸೆದಾಯಕ ಮಹಾನಗರವಾಗಿರುವ ಬೆಂಗಳೂರಿಗೆ ಪ್ರತ್ಯೇಕ ಕಾಯ್ದೆ, ಹೆಚ್ಚಿನ ಅಧಿಕಾರಿ ಹಾಗೂ ಸುವ್ಯವಸ್ಥಿತ ಆಡಳಿತ ವ್ಯವಸ್ಥೆಯನ್ನು ಪುನರ್‌ರೂಪಿಸುವ ಜರೂರತು ಇದೆ. ಇದಕ್ಕೆ ಸರ್ಕಾರ ಸ್ಪಂದಿಸಲಿ.
- ಪಿ.ಆರ್.ರಮೇಶ್, ಮಾಜಿ ಮೇಯರ್
ಚುನಾವಣೆ ಬೇಗ ನಡೆಯಲಿ:
ಸ್ಥಳೀಯ ಸಂಸ್ಥೆಗಳಲ್ಲಿ ಜನಪ್ರತಿನಿಧಿಗಳಿದ್ದರೆ ಜನರ ಯಾವುದೇ ಸಮಸ್ಯೆಗಳಿಗೆ ಬೇಗನೇ ಪರಿಹಾರ ದೊರೆಯುತ್ತದೆ. ರಾಜ್ಯದ ಅತಿ ದೊಡ್ಡ ಸ್ಥಳೀಯಾಡಳಿತ ಸಂಸ್ಥೆಯಾದ ಬಿಬಿಎಂಪಿಗೆ ವಿವಿಧ ಕಾರಣಗಳಿಂದಾಗಿ ಚುನಾವಣೆ ನಡೆಯದೆ ಮೂರೂವರೆ ವರ್ಷವಾಗುತ್ತಿದೆ. ಇದರಿಂದಾಗಿ ಎಲ್ಲ ವಾರ್ಡ್‌ಗಳು ಅಭಿವೃದ್ಧಿಯಿಂದ ವಂಚಿತವಾಗಿವೆ. ಜನರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಪರದಾಡುತ್ತಿದ್ದಾರೆ. ವಿಭಜನೆಯಿಂದ ಅಭಿವೃದ್ಧಿ ಕೆಲಸಗಳು ಹೆಚ್ಚಾಗಿ ನಡೆಯಲಿವೆ. ಪ್ರತಿ ವರ್ಷವೂ ಸರ್ಕಾರದ ಅನುದಾನ ಸದ್ಬಳಕೆ ಮಾಡಿಕೊಂಡು ವಾರ್ಡ್‌ಗಳಲ್ಲಿ ಮೂಲಸೌಕರ್ಯ ಕಲ್ಪಿಸುವುದಕ್ಕೆ ವೇಗ ಸಿಗಲಿದೆ.
- ಎಂ.ಶಿವರಾಜು, ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ