ಡಿ.ಎಸ್.ಅರುಣ್, ವಿಧಾನ ಪರಿಷತ್ ಸದಸ್ಯ.  
ಜಿಲ್ಲೆ

ರಾಜ್ಯ ಸರ್ಕಾರವನ್ನು ರಕ್ಷಿಸುವ ಪ್ರಯತ್ನ: ಅರುಣ್ ಆರೋಪ

ಶಿವಮೊಗ್ಗ: ಆರ್‌ಸಿಬಿ ಸಂಭ್ರಮಾಚರಣೆ ಸಂದರ್ಭದಲ್ಲಿ ಉಂಟಾಗಿದ್ದ ಕಾಲ್ತುಳಿತದಲ್ಲಿ 11 ಮಂದಿ ಬಲಿಯಾದ ಘಟನೆಗೆ ಸಂಬಂಧಿಸಿದ ತನಿಖಾ ವರದಿಯಲ್ಲಿ ಸಂಪೂರ್ಣವಾಗಿ ರಾಜ್ಯ ಸರ್ಕಾರವನ್ನು ರಕ್ಷಿಸುವ ಪ್ರಯತ್ನ ನಡೆದಿದೆ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ದೂರಿದ್ದಾರೆ.

ಕೆಎಸ್‌ಸಿಎ, ಆರ್‌ಸಿಬಿ ಮತ್ತು ಡಿಎನ್‌ಎ ಮೇಲೆ ಈ ವರದಿಯಲ್ಲಿ ತಪ್ಪು ಹೊರಿಸಲಾಗಿದೆ. ಆದರೆ ವಾಸ್ತವ ಸ್ಥಿತಿ ಬೇರೆಯೇ ಇದೆ. ಕೆಎಸ್‌ಸಿಎಯಲ್ಲಿ ಯಾವುದೇ ಕ್ರಿಕೆಟ್ ಪಂದ್ಯ ನಡೆದರೂ ಅದರ ಭದ್ರತಾ ಹೊಣೆ ಸರ್ಕಾರದ್ದೇ ಆಗಿರುತ್ತದೆ ಎಂದು ಅಭಿಪ್ರಾಯಪಟ್ಟರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೆಚ್ಚು ಜನ ಸೇರುವುದರಿಂದ ಭದ್ರತೆ ಒದಗಿಸುವುದು ಕಷ್ಟ ಎಂದು ಪೊಲೀಸ್ ಇಲಾಖೆ ಸರ್ಕಾರಕ್ಕೆ ತಿಳಿಸಿತ್ತು. ಆದರೂ ವಿಧಾನಸೌಧದ ಮೆಟ್ಟಿಲು ಮೇಲೆ ಕಾರ್ಯಕ್ರಮ ಆಯೋಜಿಸಲಾಯಿತು. ಸಿಎಂ ಹಾಗೂ ಡಿಸಿಎಂ ಆಟಗಾರರ ಜತೆ ನಿಂತು ಹೆಲಿಪ್ಯಾಡ್‌ನಲ್ಲೇ ಫೋಟೋ ಕ್ಲಿಕ್ಕಿಸಿಕೊಂಡಿದ್ದರು. ಈಗ ಸರ್ಕಾರ ತನ್ನ ಮೇಲಿನ ಆರೋಪದಿಂದ ಹೊರಬರಲು ಪ್ರಯತ್ನ ಮಾಡುತ್ತಿದೆ ಎಂದರು.

ವಿಧಾನಸೌಧದ ಮೆಟ್ಟಿಲಿನ ಮೇಲೆ ಸಾಮಾನ್ಯವಾಗಿ ಯಾವುದೇ ಕಾರ್ಯಕ್ರಮ ಮಾಡಬೇಕಾದರೂ ಒಂದು ವಾರವಾದರೂ ಅನುಮತಿಗೆ ಓಡಾಡಬೇಕಾಗುತ್ತದೆ. ಆದರೆ ಏಕಾಏಕಿ ಅಲ್ಲಿ ಕಾರ್ಯಕ್ರಮ ಮಾಡಿ, ತಮ್ಮ ಕುಟುಂಬದವರೊಂದಿಗೆ ಸ್ಪರ್ಧೆಯಲ್ಲಿ ಫೋಟೋ ತೆಗೆಸಿಕೊಂಡ ಸರ್ಕಾರದ ಮಂತ್ರಿಗಳು ಅನಾಹುತದ ಹೊಣೆಗಾರಿಕೆಯನ್ನು ಆರ್‌ಸಿಬಿ ತಂಡ, ಕೆಎಸ್‌ಸಿಎ ಹಾಗೂ ಡಿಎನ್‌ಎ ಮೇಲೆ ಹಾಕುತ್ತಿರುವುದು ಸರಿಯಲ್ಲ ಎಂದು ಕಿಡಿಕಾರಿದರು.

ಕೆಎಸ್‌ಸಿಎಗೂ ಸರ್ಕಾರಕ್ಕೂ ಸಂಬಂಧವೇ ಇಲ್ಲವಾದಲ್ಲಿ ಅಲ್ಲಿ ಕಾರ್ಯಕ್ರಮಕ್ಕೆ ಅನುಮತಿ ಕೊಟ್ಟವರು ಯಾರು? ಸಿಎಂ ಹಾಗೂ ಡಿಸಿಎಂ ಇದಕ್ಕೆ ನೇರ ಹೊಣೆ. ಈ ಪ್ರಕರಣದ ಎ1 ಆಗಿ ಕಾಂಗ್ರೆಸ್ ಸರ್ಕಾರವೇ ಹೊಣೆ ಹೊರಬೇಕು. ಈಗ ಸಲ್ಲಿಕೆಯಾಗಿರುವ ವರದಿಯಲ್ಲಿ ಸರ್ಕಾರ ತೆಗೆದುಕೊಂಡ ನಿರ್ಧಾರ ಮತ್ತು ಗುಪ್ತಚರ ಇಲಾಖೆ ವೈಫಲ್ಯದ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ದೂರಿದರು.