ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ನಿಲ್ಲಿಸಬೇಕೆಂದು ಒತ್ತಾಯಿಸಿ ಕೆಆರ್‌ಎಸ್ ಅಣೆಕಟ್ಟೆಗೆ ಮುತ್ತಿಗೆ ಹಾಕಲು ಯತ್ನಿಸಿದ ಮಂಡ್ಯ ಜಿಲ್ಲಾ ರೈತ ಮೋರ್ಚಾ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು. ಜೋಗಿಗೌಡ, ಸಿದ್ದರಾಜು, ಶಂಕರ್, ಡಿ.ಮಂಜುನಾಥ್, ಕಾಂತರಾಜು, ಶಿವಲಿಂಗೇಗೌಡ, ಹೊಸಕನ್ನಂಬಾಡಿ ಸುರೇಶ್, ಶಿವಕುಮಾರ್ ಆರಾಧ್ಯ ಇದ್ದರು.  
ಜಿಲ್ಲೆ

ಕೆ.ಆರ್.ಸಾಗರ ಅಣೆಕಟ್ಟೆಗೆ ಮುತ್ತಿಗೆ ಯತ್ನ

ರವಿಕುಮಾರ್ ಪಿ. ಕೆ

ಕೆ.ಆರ್.ಸಾಗರ: ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ನಿಲ್ಲಿಸಬೇಕೆಂದು ಒತ್ತಾಯಿಸಿ ರಾಜ್ಯ ಬಿಜೆಪಿ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಡಾ.ನವೀನ್‌ಕುಮಾರ್ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಮಂಗಳವಾರ ಕೆ.ಆರ್.ಸಾಗರ ಅಣೆಕಟ್ಟೆಗೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಪೊಲೀಸರು ಅವರನ್ನು ಬಂಧಿಸಿದರು.

ಇದಕ್ಕೂ ಮೊದಲು ಅಣೆಕಟ್ಟೆ ಮುಖ್ಯದ್ವಾರದ ಮುಂದೆ ಪ್ರತಿಭಟನೆ ನಡೆಸಿದ ಮಂಡ್ಯ ಜಿಲ್ಲಾ ರೈತ ಮೋರ್ಚಾ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಡಾ.ನವೀನ್ ಕುಮಾರ್ ಮಾತನಾಡಿ, ಸೋನಿಯಾ ಗಾಂಧಿ ಮೆಚ್ಚಿಸಲು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವರು ರಾಜ್ಯ ರೈತರ ಹಿತವನ್ನು ಬಲಿಕೊಟ್ಟು ತಮಿಳುನಾಡಿಗೆ ನೀರು ಹರಿಸುತ್ತಿದ್ದಾರೆ. ತಮಿಳುನಾಡಿನ ಜತೆ ಒಳಒಪ್ಪಂದ ಮಾಡಿಕೊಂಡಿದ್ದಾರೆ. ಈಗಿನ ಸರ್ಕಾರ, ನೀರು ಬಿಡಲು ಕಾವೇರಿ ನಿರ್ವಹಣಾ ಪ್ರಾಧಿಕಾರ ಆದೇಶ ನೀಡುವ ತನಕ ಇದ್ದು ತ.ನಾಡು ಅರ್ಜಿ ಸಲ್ಲಿಸದ ಮೇಲೆ ಈಗಿನ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸುತ್ತದೆ. ಸುಪ್ರೀಂ ಕೋರ್ಟ್ ಆದೇಶ ನೀಡಿದ ನಂತರ ಪ್ರಧಾನಿ ಮಧ್ಯಸ್ಥಿಕೆ ವಹಿಸಬೇಕೆಂದು ಕೋರುವ ಈಗಿನ ಮುಖ್ಯಮಂತ್ರಿ ಒಬ್ಬರು ವಕೀಲರಾಗಿದ್ದು, ಕಾನೂನು ಅರಿವಿಲ್ಲದಂತೆ ಮಾತನಾಡುವುದು ಎಷ್ಟು ಸರಿ, ಕರ್ನಾಟಕದ ಜನತೆಗೆ ಮೋಸ ಮಾಡಿದ ಮುಖ್ಯಮಂತ್ರಿ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.

ಪೊಲೀಸ್ ವಾಹನಕ್ಕೆ ಅಡ್ಡಲಾಗಿ ಮಲಗಿದರು: ಅಣೆಕಟ್ಟೆ ಮುತ್ತಿಗೆ ಹಾಕಿದ ಸಂದರ್ಭ ಬಿಜೆಪಿ ರೈತ ಮೋರ್ಚಾ ಕಾರ್ಯಕರ್ತರನ್ನು ಬಂಧಿಸಿ ಪೊಲೀಸ್ ವ್ಯಾನಿಗೆ ಕರೆದೊಯ್ಯುತ್ತಿರುವುದನ್ನು ವಿರೋಧಿಸಿ ಕೆಲವು ಕಾರ್ಯಕರ್ತರು ಪೊಲೀಸ್ ವಾಹನದ ಮುಂದೆ ಮಲಗಿ ವಾಹನ ಮುಂದೆ ಹೋಗದಂತೆ ತಡೆದರು. ಈ ಸಂದರ್ಭದಲ್ಲಿ ಪೊಲೀಸರು ಅವರನ್ನು ಎತ್ತಿಕೊಂಡು ಹೋದ ಪ್ರಸಂಗ ನಡೆಯಿತು.

ಮಂಡ್ಯ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಜೋಗಿಗೌಡ, ಮುಖಂಡರಾದ ಸಿದ್ದರಾಜು, ಶಂಕರ್, ಡಿ.ಮಂಜುನಾಥ್, ಕಾಂತರಾಜು, ಶಿವಲಿಂಗೇಗೌಡ, ಹೊಸಕನ್ನಂಬಾಡಿ ಸುರೇಶ್, ಶಿವಕುಮಾರ್ ಆರಾಧ್ಯ ಇತರರು ಇದ್ದರು.

.