ಬೆಳಗಾವಿ: ಮುಖ್ಯಮಂತ್ರಿ ಪದವಿ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಸಿದ್ದರಾಮಯ್ಯ ಜಾತಿ ಜನಗಣತಿ ವರದಿ ಜಾರಿಗೆ ತರುವ ಒತ್ತಡಕ್ಕೆ ಸಿಲುಕಿದ್ದಾರೆ. ಮುಸ್ಲಿಂ ಜನಸಂಖ್ಯೆ ಹೆಚ್ಚಿಗೆ ತೋರಿಸಲು ಕೆಲಸ ಮಾಡಿದ್ದಾರೆ. ಜನರ ಮೇಲೆ ಅವೈಜ್ಞಾನಿಕ ಜಾತಿ ಜನಗಣತಿ ವರದಿ ಹೇರಲು ಮುಂದಾಗಿದ್ದಾರೆ ಎಂದು ಸಂಸದ ಜಗದೀಶ ಶೆಟ್ಟರ್ ವಾಗ್ದಾಳಿ ನಡೆಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಕ್ಕಲಿಗ, ಲಿಂಗಾಯತರ ಅಂಕಿ&ಅಂಶಗಳು ಸಂಪೂರ್ಣ ಗೊಂದಲದಿಂದ ಕೂಡಿವೆ. ಅವತ್ತು ಜಾತಿ ಜನಗಣತಿ ವರದಿ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಡಿ.ಕೆ.ಶಿವಕುಮಾರ ಇವತ್ತು ಮೌನ ವಹಿಸಿರುವುದು ನಾನಾ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ ಎಂದು ತಿಳಿಸಿದರು.
ಸಚಿವ ಸಂಪುಟದಲ್ಲಿ ಮಂಡನೆಯಾಗಿರುವ ಜಾತಿ ಜನಗಣತಿ ವರದಿ ಬಗ್ಗೆ ಕಾಂಗ್ರೆಸ್ನಲ್ಲಿಯೇ ತೀವ್ರ ಗೊಂದಲ ಸೃಷ್ಟಿಯಾಗಿದೆ. ಅಲ್ಲದೆ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಸೇರಿ ಯಾವುದೇ ಸಚಿವರು ತಮ್ಮ ಅಭಿಪ್ರಾಯ ತಿಳಿಸಲು ಹಿಂದೇಟು ಹಾಕಿದ್ದಾರೆ ಎಂದರು.
ಈಗಾಗಲೇ ಜಾತಿ ಜನಗಣತಿ ವರದಿ ಬಗ್ಗೆ ಸಚಿವ ಸಂಪುಟದಲ್ಲಿ ಒಪ್ಪಿಗೆ ಕೊಡುವ ಕೆಲಸ ಮಾಡಿದ್ದಾರೆ. ಮತ್ತೊಂದೆಡೆ ಏ.17ರಂದು ಚರ್ಚೆ ಮಾಡೋದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಅಲ್ಲದೆ, ವರದಿ ಮಂಡನೆ ಆದರೂ ಬಹಿರಂಗ ಪಡಿಸುತ್ತಿಲ್ಲ ಏಕೆ? ಕಾಂಗ್ರೆಸ್ನಲ್ಲಿಯೇ ಜಾತಿ ಜನಗಣತಿ ವರದಿ ಅಲ್ಲೋಲ ಕಲ್ಲೋಲ ಸೃಷ್ಟಿಸಲಿದೆ ಎಂದು ಹೇಳಿದರು.