ಮೈಸೂರು: ಮನುಸ್ಮೃತಿ ಸುಟ್ಟು ಡಾ.ಬಿ.ಆರ್.ಅಂಬೇಡ್ಕರ್ ದೇಶಕ್ಕೆ ಸಂವಿಧಾನ ಕೊಟ್ಟರು. ಆದರೆ ಈಗ ಮನುಸ್ಮತಿಯನ್ನು ತಂದು ಬಹುಸಂಖ್ಯಾತ ಸಮುದಾಯಗಳ ಅವಕಾಶಗಳನ್ನು ಕಿತ್ತುಕೊಳ್ಳುವ ಹುನ್ನಾರ ನಡೆಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಆದಿಕರ್ನಾಟಕ, ಛಲವಾದಿ ಮಹಾಸಂಸ್ಥಾನ ಗುರುಪೀಠದಿಂದ ಮಾನಸಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರ ಸಾಧಕರಿಗೆ ಡಾ. ಬಿ.ಆರ್.ಅಂಬೇಡ್ಕರ್ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ಅಂಬೇಡ್ಕರ್ ಸಂವಿಧಾನ ಕೊಡದಿದ್ದರೆ, ಇನ್ನೂ ಮನುಷ್ಯ ವಿರೋಧಿ ಮನುಸ್ಮೃತಿ ಆಡಳಿತವೇ ದೇಶದಲ್ಲಿ ಇರುತ್ತಿತ್ತು. ಅದಕ್ಕಾಗಿಯೇ ಅಂಬೇಡ್ಕರ್ ಅವರು ಮನುಸ್ಮೃತಿ ಸುಟ್ಟು ದೇಶಕ್ಕೆ ಸಂವಿಧಾನ ಕೊಟ್ಟರು. ಆದರೆ ಇಂದಿನ ಪರಿಸ್ಥಿತಿಯಲ್ಲಿ ಮತ್ತೆ ಮನುಸ್ಮತಿಯನ್ನು ತಂದು ಬಹುಸಂಖ್ಯಾತರ ಅವಕಾಶ ಕಿತ್ತುಕೊಳ್ಳುವ ಸಂಚು ನಡೆಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಬಸವಣ್ಣ ಮತ್ತು ಅಂಬೇಡ್ಕರ್ ಅವರ ಉದ್ದೇಶ-ಗುರಿ-ಮೌಲ್ಯಗಳು ಒಂದೇ ಆಗಿವೆ. ವಿಚಾರಗಳಲ್ಲಿ ಸ್ವಲ್ಪ ವ್ಯತ್ಯಾಸಗಳಿದ್ದರೂ ಮೌಲ್ಯಗಳು ಮತ್ತು ಆಶಯಗಳೆಲ್ಲ ಒಂದೇ ಎಂದರು.
ಅಂಬೇಡ್ಕರ್ ಅವರು ನಾವು ಎಳೆದ ಸಾಮಾಜಿಕ ನ್ಯಾಯದ ರಥವನ್ನು ಮತ್ತಷ್ಟು ಮುಂದಕ್ಕೆ ಎಳೆದುಕೊಂಡು ಹೋಗಿ, ಸಾಧ್ಯವಾಗದಿದ್ದರೆ ಅಲ್ಲೇ ಬಿಟ್ಟುಬಿಡಿ. ಆದರೆ ಹಿಂದಕ್ಕೆ ತಳ್ಳಬೇಡಿ ಎಂದಿದ್ದರು. ಹೀಗಾಗಿ ಮೌಢ್ಯ, ಕಂದಾಚಾರಗಳಲ್ಲಿ ಮುಳುಗಿ ಅಂಬೇಡ್ಕರ್, ಬಸವಣ್ಣ ಅವರ ವಿಚಾರಗಳಿಗೆ ದ್ರೋಹ ಎಸಗಬಾರದು ಎಂದರು.
ಅಂಬೇಡ್ಕರ್ ಅವರು ಓದಿದ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಮಾದರಿಯಲ್ಲಿ ರಾಜ್ಯದಲ್ಲಿ ನಾವು ಅಂಬೇಡ್ಕರ್ ಸ್ಕೂಲ್ ಆಫ್ ಎಕಾನಮಿಕ್ಸ್ ಆರಂಭಿಸಿದ್ದೇವೆ ಎಂದು ಹೇಳಿದರು.
ಜ್ಞಾನ ಪ್ರತಿಯೊಬ್ಬರ ಸ್ವತ್ತು. ಅವಕಾಶಗಳು ಸಿಕ್ಕಾಗ ಜ್ಞಾನ ಹೊರಗೆ ಬರುತ್ತದೆ ಎನ್ನುವುದಕ್ಕೆ ವ್ಯಾಸ ಮಹಾಭಾರತ ಬರೆದರೆ, ವಾಲ್ಮೀಕಿ ರಾಮಾಯಣ ಬರೆದರು. ಹಾಗಾಗಿ ಅವಕಾಶಗಳು ಮುಖ್ಯ. ಆದ್ದರಿಂದ ನಮ್ಮ ಅವಕಾಶಗಳನ್ನು ಕಿತ್ತುಕೊಳ್ಳುವ ಉದ್ದೇಶದಿಂದಲೇ ಪಟ್ಟಭದ್ರ ಹಿತಾಸಕ್ತಿಗಳು ಸಂವಿಧಾನವನ್ನೇ ಬದಲಾಯಿಸಲು ಹೊರಟಿದ್ದಾರೆ ಎಂದು ವಿವರಿಸಿದರು.
ಸಂವಿಧಾನದ ಮೌಲ್ಯಗಳ ಬಗ್ಗೆ ಗೌರವ ಇಲ್ಲದವರ ಕೈಯಲ್ಲಿ, ದುಷ್ಟರ ಕೈಲಿ ಸಂವಿಧಾನ ಉಳಿಯುವುದಿಲ್ಲ. ಆದ್ದರಿಂದ ನಾವು ದುಷ್ಟರ ಹುನ್ನಾರಗಳಿಂದ ಸಂವಿಧಾನ ಉಳಿವಿಗೆ ಬಹಳ ಬದ್ಧತೆಯಿಂದ ಎದ್ದು ನಿಲ್ಲಬೇಕು ಎಂದರು.
ಪ್ರಾಧ್ಯಾಪಕ ಹುದ್ದೆ ತೊರೆದು ದೀಕ್ಷೆ ಪಡೆದಿರುವ ಆದಿ ಕರ್ನಾಟಕ ಮಹಾಸಂಸ್ಥಾನ ಗುರುಪೀಠದ ಪ್ರೊ.ಜ್ಞಾನ ಸ್ವರೂಪಾನಂದ ಸ್ವಾಮೀಜಿ ಸಮಾಜಕ್ಕೆ ನಿಜವಾದ ಗುರುವಾಗಲಿ. ಸಮಾಜವನ್ನು ಮಾನವೀಯತೆಯ ಹಾದಿಯಲ್ಲಿ ಮುನ್ನಡೆಸಲಿ ಎಂದು ಹಾರೈಸಿದರು.
ಆದಿಕರ್ನಾಟಕ, ಛಲವಾದಿ ಮಹಾಸಂಸ್ಥಾನದ ಪ್ರೊ.ಜ್ಞಾನಸ್ವರೂಪಾನಂದ ಸ್ವಾಮಿ ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ವಿ.ಶ್ರೀನಿವಾಸಪ್ರಸಾದ್ ವೇದಿಕೆ ಅಧ್ಯಕ್ಷೆ ಭಾಗ್ಯಲಕ್ಷ್ಮಿ ವಿ.ಶ್ರೀನಿವಾಸಪ್ರಸಾದ್, ಮಾಜಿ ಮೇಯರ್ ಪುರುಷೋತ್ತಮ, ಮಾಜಿ ಉಪಮೇಯರ್ ಸಿದ್ದರಾಜು, ಮುಖಂಡರಾದ ವಾಸು, ರಂಗಸ್ವಾಮಿ ಇತರರು ಇದ್ದರು.