ರೈತ ಸಂಘದ ಪದಾಧಿಕಾರಿಗಳಿ ಸಾಗರ ಎಸಿ ಕಚೇರಿ ಸಿಬ್ಬಂದಿಗೆ ಮನವಿ ಸಲ್ಲಿಸಿದರು. ಶಿವಾನಂದ ಕುಗ್ವೆ, ಎಂ.ಬಿ.ಮಂಜಪ್ಪ, ಎನ್.ಸಿ.ಗಂಗಾಧರ ಇತರರಿದ್ದರು. 
ಜಿಲ್ಲೆ

ಶರಾವತಿ ಸಂತ್ರಸ್ತರ ಭೂಮಿ ಕಬಳಿಸಲು ಯತ್ನ; ರೈತ ಸಂಘದ ನೇತೃತ್ವದಲ್ಲಿ ಹೋರಾಟ

ಸಾಗರ: ತಾಲೂಕಿನ ಮಲಂದೂರು ಗ್ರಾಮದ ಸರ್ವೇ ನಂ.157ರಲ್ಲಿ ಏಳು ಜನ ಶರಾವತಿ ಮುಳುಗಡೆ ಸಂತ್ರಸ್ತರಿಗೆ ನೀಡಲಾಗಿದ್ದ ಸರ್ಕಾರಿ ಭೂಮಿಯನ್ನು ನಕಲಿ ದಾಖಲೆ ಸೃಷ್ಟಿಸಿ ಕಬಳಿಸುವ ಯತ್ನ ನಡೆಸುತ್ತಿದ್ದಾರೆ. ಅವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಗುರುವಾರ ಪ್ರತಿಭಟನೆ ನಡೆಸಿ, ಉಪವಿಭಾಗಾಧಿಕಾರಿಗಳ ಕಚೇರಿಗೆ ಮನವಿ ಸಲ್ಲಿಸಿದರು.

ರಾಜ್ಯ ರೈತಸಂಘದ ಉಪಾಧ್ಯಕ್ಷ ಶಿವಾನಂದ ಕುಗ್ವೆ ಮಾತನಾಡಿ, ನಾಡಿಗೆ ಬೆಳಕು ನೀಡಲು ತಮ್ಮ ಸರ್ವಸ್ವವನ್ನು ಕಳೆದುಕೊಂಡ ಶರಾವತಿ ಮುಳುಗಡೆ ಸಂತ್ರಸ್ತರಿಗೆ ಸರ್ಕಾರ ನೀಡಿದ ಭೂಮಿಯನ್ನು ಕಿತ್ತುಕೊಳ್ಳುವ ಪ್ರಯತ್ನ ನಡೆಸುತ್ತಿರುವುದು ಅಮಾನವೀಯ. ಷಣ್ಮುಖಪ್ಪ ಎಂಬುವರು ಸ್ಥಳೀಯ ಅರಣ್ಯಹಕ್ಕು ಸಮಿತಿ ಅಧ್ಯಕ್ಷರಾಗಿದ್ದರು. ಅಂತಹವರೇ ಶರಾವತಿ ಮುಳುಗಡೆ ಸಂತ್ರಸ್ತರಿಗೆ ಮಂಜೂರಾಗಿದ್ದ ಜಮೀನು ಕಬಳಿಸುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಈಗಾಗಲೇ ಶರಾವತಿ ಮುಳುಗಡೆ ಕುಟುಂಬದ 7 ಜನರಿಗೆ ಜಮೀನು ಸೇರಿದ್ದು ಎನ್ನುವುದಕ್ಕೆ ಕಾನೂನು ಹೋರಾಟದಲ್ಲಿ ಜಯಸಿಕ್ಕಿದೆ. ಅರಣ್ಯಹಕ್ಕು ಕಾಯ್ದೆಯಲ್ಲಿ ಸಹ ಜಮೀನು ಸಂತ್ರಸ್ತರದ್ದು ಎನ್ನುವ ಪುರಾವೆಗಳಿವೆ. ಆದರೆ ನಕಲಿ ದಾಖಲೆ ಸೃಷ್ಟಿಸಿ ಬಡಜನರಿಗೆ ಅನ್ಯಾಯ ಮಾಡಲಾಗುತ್ತಿದೆ. ತಕ್ಷಣ ಅಧಿಕಾರಿಗಳು ಪ್ರಕರಣದ ತನಿಖೆಯನ್ನು ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನುಕ್ರಮ ಜರುಗಿಸಬೇಕು. ಶರಾವತಿ ಸಂತ್ರಸ್ತ ಕುಟುಂಬಕ್ಕೆ ಮೀಸಲಿಟ್ಟ 36 ಎಕರೆ ಜಮೀನು ಅವರಿಗೆ ಸಿಗುವಂತೆ ಪ್ರಾಮಾಣಿಕ ಪ್ರಯತ್ನ ನಡೆಸಬೇಕು ಎಂದು ಪ್ರತಿಭಟನಾನಿತರರು ಒತ್ತಾಯಿಸಿದರು.
ರೈತ ಸಂಘದ ತಾಲೂಕು ಅಧ್ಯಕ್ಷ ಎಂ.ಬಿ.ಮಂಜಪ್ಪ ಹಿರೇನೆಲ್ಲೂರು, ಮುರಳೀಧರ, ಎನ್.ಸಿ.ಗಂಗಾಧರ, ಲಕ್ಷ್ಮಣಪ್ಪ, ಎಂ.ಗಣಪತಿ, ಪ್ರೇಮಕುಮಾರ್, ಸಂದೀಪ್, ನವೀನ್, ಲಲಿತಮ್ಮ, ತೀರ್ಥಪ್ಪ, ಅನಿಲ್, ಚನ್ನಪ್ಪ ಇತರರಿದ್ದರು.