ಚಿಮ್ಮಡ: ಭೂಮಿ ಬೆಲೆ ಗಗನಕ್ಕೇರಿ ದೊಡ್ಡ ನಗರಗಳಲ್ಲಿ ಭೂಮಾಫಿಯಾ ಸಾಮಾನ್ಯವಾಗಿದೆ. ಈಗ ಗ್ರಾಮೀಣ ಭಾಗದಲ್ಲಿಯೂ ಮಾಫಿಯಾ ನಡೆಯುತ್ತಿರುವುದು ನಮ್ಮಲ್ಲಿ ಆತಂಕ ಮೂಡಿಸಿದ್ದು, ಕೂಡಲೇ ಮಟ್ಟ ಹಾಕುವಂತೆ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಹಾಗೂ ತಹಸೀಲ್ದಾರರಿಗೆ ಚಿಮ್ಮಡ ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಗ್ರಾಮದ ಘಟಪ್ರಭಾ ಎಡದಂಡೆ ಕಾಲುವೆಯ ಜಮಖಂಡಿ ಹಂಚುಗಾಲುವೆಗೆ ಹೊಂದಿಕೊಂಡಿರುವ ಸರ್ವೇ ನಂ. 59/1 ರಲ್ಲಿನ ಅಂದಾಜು 19 ಎಕರೆ 23 ಗುಂಟೆ ಜಮೀನನ್ನು ಸರ್ಕಾರ ಜಾನುವಾರು ಮೇಯಿಸಲು (ಗೋಮಾಳ) ಮೀಸಲಿರಿಸಿದೆ. ಅದಕ್ಕೆ ದಾಖಲೆಗಳಲ್ಲಿ ಗುರುಚರಣ (ಸರ್ಕಾರಿ ಜಮೀನು) ಅಂತ ಇದೆ. ಈ ಭಾಗದಲ್ಲಿ ಬಹುತೇಕ ಗೋಮಾಳ ಜಾಗವನ್ನು ಗುರುಚರಣ ಎಂದೇ ದಾಖಲಿಸಲಾಗಿದೆ. ಇದನ್ನೇ ದುರುಪಯೋಗ ಮಾಡಿಕೊಂಡು ಶಿವಮೊಗ್ಗದ ಗುರುಚರಣ ಬಿನ್ ಮುರುಳಪ್ಪ ಎನ್ನುವವರು ಶಿವಮೊಗ್ಗದ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಆಗಸ್ಟ್ 14 ರಂದು ತಮ್ಮ ಹೆಸರಿಗೆ ಮುಕ್ತಿಯಾರ ಪತ್ರ (ಜಿಪಿಎ) ಮಾಡಿಕೊಂಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು.
ಮುಕ್ತಿಯಾರ ಪತ್ರದನ್ವಯ ಮುಧೋಳ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಆಗಸ್ಟ್ 26 ರಂದು ಮುಧೋಳ ತಾಲೂಕಿನ ಮುಗಳಖೋಡದ ಶ್ರೀಶೈಲ ದುಂಡಪ್ಪ ಪಶ್ಚಾಪುರ ಅವರಿಗೆ 1, 82,43, 500 ರೂ.ಗಳಿಗೆ ಖರೀದಿ ನೋಂದಣಿ ಮಾಡಿಸಿ ಕೊಟ್ಟಿದ್ದಾರೆ. ಈ ಮಾಹಿತಿ ಪಡೆದ ಚಿಮ್ಮಡ ಗ್ರಾಮದ ಆಡಳಿತಾಧಿಕಾರಿ ಮಂಜುನಾಥ ನೀಲನ್ನವರ ತಮ್ಮ ಇಲಾಖೆಯಲ್ಲಿ ದೂರು ದಾಖಲಿಸಿ ಪಹಣಿ ತಯಾರಿಕೆಯನ್ನು ತಡೆದಿದ್ದಾರೆ.
ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ಗ್ರಾಮದ ಪ್ರಮುಖರು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಶನಿವಾರ ಸಭೆ ಸೇರಿ ಗ್ರಾಮದ ಸರ್ಕಾರಿ ಜಮೀನು ಖಾಸಗಿ ವ್ಯಕ್ತಿಗಳು ಕಬಳಿಸುತ್ತಿರುವ ಕುರಿತು ಆಕ್ರೋಶ ವ್ಯಕ್ತಪಡಿಸಿದರು. ಸದರಿ ಜಮೀನನ್ನು ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡಿದ ಪ್ರಕರಣ ಬಗ್ಗೆ ಸೂಕ್ತ ತನಿಖೆ ಕೈಗೊಳ್ಳಬೇಕು. ಈ ಪ್ರಕರಣದಲ್ಲಿ ಭಾಗಿಯಾಗಿರುವ ಉಪನೋಂದಣಾಧಿಕಾರಿ, ದಸ್ತು ಬರಹಗಾರ ಮತ್ತು ಇಂತಹ ಕೃತ್ಯಕ್ಕೆ ಸಹಾಯ ಮಾಡಿದ ಪ್ರತಿಯೊಬ್ಬರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಶನಿವಾರ ಗ್ರಾಮಕ್ಕೆ ಆಗಮಿಸಿದ ರಬಕವಿ-ಬನಹಟ್ಟಿ ತಹಸೀಲ್ದಾರ್ ಗಿರೀಶ ಸ್ವಾದಿ ಮನವಿ ಸ್ವೀಕರಿಸಿ ಮಾತನಾಡಿ, ಸರ್ಕಾರಿ ಜಮೀನು ಯಾವುದೇ ಕಾರಣಕ್ಕೂ ಪರಭಾರೆಯಾಗಲು ಅವಕಾಶ ನೀಡುವುದಿಲ್ಲ. ಈಗಾಗಲೇ ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಉಪ ವಿಭಾಗಾಧಿಕಾರಿಗಳು ಹಾಗೂ ಡಿವೈಎಸ್‌ಪಿ ಅವರಿಗೆ ಮಾಹಿತಿ ನೀಡಲಾಗಿದೆ. ನೋಂದಣಿ ರದ್ದುಪಡಿಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಮೂಲಕ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು.
ಸಭೆಯಲ್ಲಿ ಗ್ರಾಮದ ಪ್ರಮುಖರಾದ ರಾಮಣ್ಣ ಮುಗಳಖೋಡ, ಆರ್.ಎಂ. ಬಗನಾಳ, ಅಣ್ಣಪ್ಪಗೌಡ ಪಾಟೀಲ, ರಾಚಯ್ಯ ಮಠಪತಿ ಗ್ರಾ.ಪಂ. ಮಾಜಿ ಅಧ್ಯಕ್ಷ ಶಂಕರ ಬಟಕುರ್ಕಿ, ಪರಪ್ಪ ಪಾಲಭಾವಿ, ಬೀರಪ್ಪ ಹಳೆಮನಿ, ಅಶೋಕ ಧಡೂತಿ, ಬಸವರಾಜ ಕುಂಚನೂರ, ಮಲ್ಲಿಕಾರ್ಜುನ ಬಳಗಾರ, ಮಹಾಂತೇಶ ಜಾಲಿಕಟ್ಟಿ, ವಿಜಯಕುಮಾರ ಪೂಜಾರಿ, ಗ್ರಾ.ಪಂ. ಸದಸ್ಯರಾದ ಪ್ರಕಾಶ ಪಾಟೀಲ, ಮನೋಜ ಹಟ್ಟಿ, ಆನಂದ ಕವಟಿ, ಬಾಳಪ್ಪ ಗಡೆಪ್ಪನವರ, ನಾಗಪ್ಪ ಆಲಕನೂರ, ಬಾಳೇಶ ಬ್ಯಾಕೋಡ, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಶಿವಾನಂದ ಬಿರಾದಾರ, ಗ್ರಾಮ ಆಡಳಿತ ಅಧಿಕಾರಿ ಮಂಜುನಾಥ ನೀಲನ್ನವರ ಉಪಸ್ಥಿತರಿದ್ದರು.