ರೇಷ್ಮೆ ಪ್ರವಾಸೋದ್ಯಮಕ್ಕೆ ಬೇಡಿಕೆ
* ಸಂಸತ್‌ನಲ್ಲಿ ಸಿ.ಎನ್.ಮಂಜುನಾಥ್ ಮನವಿ
* ರೇಷ್ಮೆ ವಸ್ತು ಸಂಗ್ರಹಾಲಯಕ್ಕೆ ಮುನ್ನಡಿ
ರಾಮನಗರ
ರೇಷ್ಮೆಯ ಮೂಲಕವೇ ಸಿಲ್ಕ್ ಸಿಟಿ ಎಂದು ಹೆಸರು ಪಡೆದುಕೊಂಡಿರುವ ರಾಮನಗರದ ಹಿರಿಮೆಯನ್ನು ಹೆಚ್ಚಿಸುವ ಪ್ರಯತ್ನಕ್ಕೆ ಸಂಸದ ಡಾ.ಸಿ.ಎನ್.ಮಂಜುನಾಥ್ ಮುಂದಾಗಿದ್ದು, ಜಿಲ್ಲೆಯಲ್ಲಿ ರೇಷ್ಮೆ ವಸ್ತು ಸಂಗ್ರಹಾಲಯ ಹಾಗೂ ರೇಷ್ಮೆ ಪ್ರವಾಸೋದ್ಯಮ ಸ್ಥಾಪಿಸುವಂತೆ ಸಂಸತ್‌ನಲ್ಲಿ ಬೇಡಿಕೆ ಸಲ್ಲಿಸಿದ್ದಾರೆ.
ರಾಜ್ಯದಲ್ಲಿ ಹಲವು ಜಿಲ್ಲೆಗಳಲ್ಲಿ ರೇಷ್ಮೆ ಬೆಳೆಯುತ್ತಿದ್ದರೂ ರಾಮನಗರ ಇದಕ್ಕೆ ಪ್ರಸಿದ್ಧಿ ಪಡೆದುಕೊಂಡಿದೆ.
ರಾಜ್ಯದಲ್ಲಿಯೇ ಅತಿಹೆಚ್ಚು ರೇಷ್ಮೆ ಗೂಡು ಉತ್ಪಾದನೆಯಾಗುವುದು ಜಿಲ್ಲೆಯಲ್ಲಿಯೇ. ಆದರೆ, ಭವಿಷ್ಯದ ದೃಷ್ಟಿಯಿಂದ ಯುವ ಪೀಳಿಗೆಯನ್ನು ಈ ಕ್ಷೇತ್ರದತ್ತ ಆಕರ್ಷಿಸಲು ಅನುಕೂಲವಾಗುವಂತೆ ರೇಷ್ಮೆ ಉತ್ಪಾದನೆ, ಉದ್ಯಮ, ಉಪ ಉತ್ಪನ್ನಗಳ ಬಗ್ಗೆ ಜಾಗೃತಿ ಮೂಡಿಸಲು ರೇಷ್ಮೆ ವಸ್ತು ಸಂಗ್ರಹಾಲಯ ಹಾಗೂ ರೇಷ್ಮೆ ಪ್ರವಾಸೋದ್ಯಮ ಆರಂಭಿಸಬೇಕು ಎನ್ನುವುದು ಹಿಂದಿನ ಬೇಡಿಕೆ. ಈ ಬೇಡಿಕೆಗೆ ಜೀವ ತುಂಬುವ ಕೆಲಸವನ್ನು ಸಂಸದರು ಮಾಡಿದ್ದಾರೆ.
ಸಿಲ್ಕ್ ಟೂರಿಸಂ ಮಾಡುವ ಸಂಬಂಧ ಹಿಂದೆ ರಾಜ್ಯ ಸರ್ಕಾರವೂ ಕಾಳಜಿ ವಹಿಸಿತ್ತು. ಆದರೆ, ಇದು ಕೇವಲ ಕಾಗದದ ಶಿಶುವಾದ ಕಾರಣ, ಈ ಕಾಳಜಿ ಕಾರ್ಯರೂಪಕ್ಕೆ ಬರಲೇ ಇಲ್ಲ. ಮಣ್ಣಿನಿಂದ ಸೀರೆವರೆಗೆ ರೇಷ್ಮೆ ಬೆಳೆ ಮತ್ತು ಬೆಳವಣಿಗೆ ಸಂಬಂಧ ಪ್ರವಾಸೋದ್ಯಮದ ಮೂಲಕ ಜನರಿಗೆ ಅರಿವು ಮೂಡಿಸುವ ಕೆಲಸ ಆಗಬೇಕಿದೆ. ಜತೆಗೆ, ಇತರ ಭಾಗಗಳಿಗೆ ರೇಷ್ಮೆ ಪರಿಚಯಿಸಲು ಇದು ಸಾಧ್ಯ ಮಾಡಿಕೊಡಲಿದೆ. ರೇಷ್ಮೆ ಬೆಳೆಯಲು ಅಗತ್ಯವಾಗಿ ಬೇಕಾಗಿರುವ ಹಿಪ್ಪು ನೇರಳೆ ಕುರಿತು ನಗರ ಪ್ರದೇಶದವರಿಗೆ ಪರಿಚಯಿಸಲು ಇದು ಸಾಧ್ಯ.
ಜಿಲ್ಲಾ ಕೇಂದ್ರದಲ್ಲಿ ರೇಷ್ಮೆ ವಸ್ತು ಸಂಗ್ರಹಾಲಯ ತೆರೆಯುವುದರಿಂದ ಸಾಕಷ್ಟು ಅನುಕೂಲಗಳಿವೆ. ರೇಷ್ಮೆ ತಯಾರಿಕೆ ಘಟಕ, ನೂಲು ಬಿಚ್ಚಣಿಕೆ, ಚಾಕಿ ಕೇಂದ್ರಗಳು, ರೇಷ್ಮೆ ಮೊಟ್ಟೆ ಸೇರಿ ರೇಷ್ಮೆ ಉದ್ಯಮ ಆರಂಭ ಪ್ರಗತಿ ಹಾಗೂ ಆಧುನಿಕ ಸಲಕರಣೆಗಳು, ಉಪ ಉತ್ಪನ್ನಗಳ ತಯಾರಿ ಸೇರಿ ಇತರೆ ವಸ್ತುಗಳ ಈ ಸಂಗ್ರಹಾಲಯದಲ್ಲಿ ನೋಡಲು ಲಭಿಸಲಿದೆ. ರಾಮನಗರದಲ್ಲಿ ಜಾನಪದ ಲೋಕದಲ್ಲಿ ಜಾನಪದ ಸಲಕರಣಿಗಳು ಸಂಗ್ರಹಾಲಯ ಇದ್ದು, ಇದೇ ಮಾದರಿಯಲ್ಲಿ ರೇಷ್ಮೆ ವಸ್ತು ಸಂಗ್ರಹಾಲಯ ಕೆಲಸ ನಿರ್ವಹಿಸಲಿದೆ.
ರಾಮನಗರ ರೇಷ್ಮೆ ಮಾರುಕಟ್ಟೆಗೆ ಈಗಾಗಲೇ ರಾಜ್ಯ ಹಾಗೂ ದೇಶದಿಂದಲೂ ಪ್ರವಾಸಿಗರು ಆಗಮಿಸಿ ಇಲ್ಲಿನ ಮಾರುಕಟ್ಟೆ ವ್ಯವಸ್ಥೆಯನ್ನು ಪರಿಶೀಲನೆ ನಡೆಸಿದ್ದಾರೆ. ಅದರಲ್ಲ್ಲೂ ಉತ್ತರ ಭಾರತೀಯ ಮೂಲದವರು ಸಾಕಷ್ಟು ಬಾರಿ ಭೇಟಿ ನೀಡಿದ್ದಾರೆ. ಇವರ ಜತೆಗೆ, ವಿದೇಶಿಗರು ರಾಮನಗರ ರೇಷ್ಮೆ ಮಾರುಕಟ್ಟೆಗೆ ಭೇಟಿ ನೀಡಿ ಇಲ್ಲಿನ ವ್ಯವಸ್ಥೆಯನ್ನು ಅಧ್ಯಯನ ಮಾಡಿ ತೆರಳಿದ್ದಾರೆ.
ಬೆಳೆ :
ರಾಮನಗರ ಜಿಲ್ಲೆಯಲ್ಲಿ ಒಟ್ಟು 21534.81 ಹೆಕ್ಟೇರ್ ಪ್ರದೇಶದಲ್ಲಿ ರೇಷ್ಮೆ ಬೆಳೆ ಬೆಳೆಯಲಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟು 28,434 ಮಂದಿ ರೇಷ್ಮೆ ಬೆಳೆಗಾರರಿದ್ದಾರೆ. ಜಿಲ್ಲೆಯಲ್ಲಿ ಮಿಶ್ರ ತಳಿ ಹಾಗೂ ದ್ವಿ ತಳಿ ಸೇರಿ ಒಟ್ಟು 20897.320 ಮೆಟ್ರಿಕ್ ಟನ್ ಗೂಡು ಉತ್ಪಾದನೆ ಗುರಿ ಹೊಂದಾಗಿದೆ.
ಸಂಸದರ ಆಸಕ್ತಿಚನ್ನಪಟ್ಟಣದ ಆಟಿಕೆಗೆ ಮಾರುಕಟ್ಟೆ ಕಲ್ಪಿಸುವ ಸಲುವಾಗಿ ಬೆಂಗಳೂರು - ಮೈಸೂರು ದಶಪಥ ಹೆದ್ದಾರಿಯಲ್ಲಿ ಪಾರ್ಕ್ ನಿರ್ಮಾಣಕ್ಕೆ ಮನವಿ ಮಾಡಿದ್ದ ಸಂಸದರು, ನಂತರ ಜಿಲ್ಲೆಯಲ್ಲಿ ರೇಷ್ಮೆ ಪ್ರವಾಸೋದ್ಯ ಹಾಗೂ ರೇಷ್ಮೆ ವಸ್ತು ಸಂಗ್ರಹಾಲಯದ ಆರಂಭಕ್ಕೆ ಒತ್ತಾಸೆಯಾಗಿ ನಿಂತಿದ್ದಾರೆ. ಈ ಬಗ್ಗೆ ಸಂಸತ್‌ನಲ್ಲಿ ಚರ್ಚಿಸುವ ಮೂಲಕ ಬೇಡಿಕೆಗೆ ಮರು ಜೀವನ ನೀಡುವ ಪ್ರಯತ್ನ ಮಾಡಿದ್ದಾರೆ. ಒಂದೊಮ್ಮೆ ಈ ಯೋಜನೆಗೆ ಸರ್ಕಾರದ ಸಹಕಾರ ದೊರೆತರೆ ಜಿಲ್ಲೆಯಲ್ಲಿ ವಸ್ತು ಸಂಗ್ರಹಾಲಯ ಸ್ಥಾಪನೆಯಾಗಲಿದೆ. ಜತೆಗೆ, ರೇಷ್ಮೆ ಪ್ರವಾಸಿ ತಾಣವಾಗಿ ಅಭಿವೃದ್ಧಿಯಾಗಲಿದೆ.ದೇಶದಲ್ಲಿಯೇ ಕರ್ನಾಟಕ ರೇಷ್ಮೆ ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿದ್ದು, ಇದಕ್ಕೆ ರಾಮನಗರದ ಕೊಡುಗೆ ಹಿರಿದು. ಇಲ್ಲಿ ರೇಷ್ಮೆ ವಸ್ತು ಸಂಗ್ರಹಾಲಯ ಮತ್ತು ರೇಷ್ಮೆ ಪ್ರವಾಸೋದ್ಯಮ ಆರಂಭಿಸಬೇಕು ಎನ್ನುವ ಬೇಡಿಕೆಯನ್ನು ಕೇಂದ್ರದ ಮುಂದೆ ಇಡಲಾಗಿದೆ. ಇದರಿಂದ ಖಂಡಿತವಾಗಿ ಈ ಭಾಗದ ಜನರಿಗೆ ಅನುಕೂಲ ಕಲ್ಪಿಸಿಕೊಡುವ ಜತೆಗೆ ಉದ್ದಿಮೆ ಬೆಳವಣಿಗೆಗೆ ಸಹಕಾರಿ ಆಗಲಿದೆ. ಡಾ.ಸಿ.ಎನ್.ಮಂಜುನಾಥ್,ಸಂಸದ, ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರ.