ಜಿಲ್ಲೆ

ತಪ್ಪಿಸಿಕೊಳ್ಳಲು ಯತ್ನ-ಇಬ್ಬರ ಕಾಲಿಗೆ ಗುಂಡೇಟು

ವೀರೇಶ ಸೌದ್ರಿ

ಹಳಿಯಾಳ: ಮೂವರು ಡಕಾಯಿತರನ್ನು ಬೆಳಗಾವಿಯಲ್ಲಿ ಬಂಧಿಸಿ ಅಂಕೋಲಾಕ್ಕೆ ಕರೆದೊಯುತ್ತಿದ್ದಾಗ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದು, ಆತ್ಮರಕ್ಷಣೆಗಾಗಿ ಪೊಲೀಸರು ಇಬ್ಬರು ಆರೋಪಿಗಳ ಕಾಲಿಗೆ ಗುಂಡು ಹಾರಿಸಿದ ಘಟನೆ ತಾಲೂಕಿನ ಭಾಗವತಿ ಸಮೀಪ ಗುರುವಾರ ನಡೆದಿದೆ.

ಅನೇಕ ಕ್ರಿಮಿನಲ್ ಪ್ರಕರಣದಲ್ಲಿ ಭಾಗಿಯಾಗಿರುವ ಮಂಗಳೂರು ಮೂಲದ ತಲ್ಲತ, ನವಫಾಲ್ ಮತ್ತು ಸಾಹೀಲ್ ಎಂಬುವವರು ಬಂಧಿತರು.

ಬೆಳಗಾವಿಯಿಂದ ಹಳಿಯಾಳ ಮಾರ್ಗವಾಗಿ ಹಾದು ಹೋಗುವಾಗ ಮೂತ್ರ ವಿಸರ್ಜನೆಗೆಂದು ಅರಣ್ಯ ಪ್ರದೇಶದಲ್ಲಿ ವಾಹನ ನಿಲ್ಲಿಸಲಾಗಿತ್ತು. ಆರೋಪಿಗಳಾದ ತಲ್ಲತ ಹಾಗೂ ನವಫಾಲ್ ಪೊಲೀಸರ ಮೇಲೆ ಕಲ್ಲು ತೂರಿ ಪರಾರಿಯಾಗಲು ಯತ್ನಿಸಿದ್ದಾರೆ. ಮುಂಡಗೋಡ ಪಿಎಸ್‌ಐ ಪರಶುರಾಮ ಮಿರಜಗಿ, ಅಂಕೋಲಾ ಪಿಎಸ್‌ಐ ಉದ್ದಪ್ಪ ದೇರಪ್ಪನವರ ಆತ್ಮರಕ್ಷಣೆಗಾಗಿ ಇಬ್ಬರ ಕಾಲಿಗೆ ಗುಂಡು ಹಾರಿಸಿದ್ದಾರೆ. ಇನ್ನೊಬ್ಬ ಆರೋಪಿ ಸಾಹೀಲ್ ವಾಹನದಲ್ಲೇ ಕುಳಿತುಕೊಂಡಿದ್ದ. ಘಟನೆಯಲ್ಲಿ ಪೊಲೀಸರಿಗೂ ಗಾಯಗಳಾಗಿದ್ದು, ಎಲ್ಲರಿಗೂ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ವಿಷಯ ತಿಳಿಯುತ್ತಿದ್ದಂತೆ ಪೊಲೀಸ್ ವರಿಷ್ಠಾಧಿಕಾರಿ ಎಂ. ನಾರಾಯಣ ಹಾಗೂ ಸ್ಥಳೀಯ ಪೊಲೀಸ್ ಅಧಿಕಾರಿಗಳು ತಾಲೂಕಾಸ್ಪತ್ರೆಗೆ ಭೇಟಿ ನೀಡಿ ಘಟನೆ ಕುರಿತು ಮಾಹಿತಿ ಪಡೆದರು.

ಈ ಕುರಿತು ಪ್ರತಿಕ್ರಿಯಿಸಿದ ಎಸ್ಪಿ, ‘ಜ.28ರಂದು ರಾಮನಗುಳಿ ಬಳಿಯ ಅರಣ್ಯದಂಚಿನಲ್ಲಿ ಕಾರೊಂದರಲ್ಲಿ ದಾಖಲೆ ಇಲ್ಲದ 1.15 ಕೋಟಿ ರೂ. ಪತ್ತೆಯಾಗಿತ್ತು. ಈ ಕುರಿತು ಅಂಕೋಲಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿ 15 ಆರೋಪಿಗಳು ಭಾಗಿಯಾಗಿರುವ ಮಾಹಿತಿ ಇದೆ. ಅಲ್ಲದೆ, ಆರೋಪಿಗಳು ಕುಟುಂಬ ಸಮೇತರಾಗಿ ಪರಾರಿಯಾಗಿದ್ದರು. ಖಚಿತ ಮಾಹಿತಿ ಮೇರೆಗೆ ಬೆಳಗಾವಿಯಲ್ಲಿ ಮೂವರನ್ನು ಬಂಧಿಸಿ ಕರೆತರುತ್ತಿದ್ದಾಗ ಈ ಘಟನೆ ನಡೆದಿದೆ. ಸಿಬ್ಬಂದಿ ಹಾಗೂ ಆರೋಪಿಗಳಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಪ್ರಕರಣದಲ್ಲಿ 5 ಜನರನ್ನು ಬಂಧಿಸಲಾಗಿದೆ’ ಎಂದರು.