ಕೊಳ್ಳೇಗಾಲ: ಪಟ್ಟಣದಲ್ಲಿ ನನೆಗುದಿಗೆ ಬಿದ್ದಿರುವ ಅಂಬೇಡ್ಕರ್ ಭವನ ಕಾಮಗಾರಿಯನ್ನು ಪೂರ್ಣಗೊಳಿಸಲು ಸರ್ಕಾರ ಮಟ್ಟದಲ್ಲಿ ಪ್ರಾಮಾಣಿಕವಾಗಿ ಯತ್ನಿಸಲಾಗುವುದು ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಹೇಳಿದರು.
ಪಟ್ಟಣದ ಭೀಮನಗರದ ಸಾವಿತ್ರಿಬಾಯಿಫುಲೆ ವೇದಿಕೆಯಲ್ಲಿ ಸೋಮವಾರ ಆಯೋಜಿಸಿದ್ದ ಶಾಸಕ ಎ.ಆರ್. ಕೃಷ್ಣಮೂರ್ತಿ ಅವರ ಗೌರವ ಸನ್ಮಾನ ಸಮಾರಂಭ, ದಿ.ಮಹದೇವಮ್ಮ ಮತ್ತು ದಿ. ಶಾಂತರಾಜು ಸ್ಮರಣಾರ್ಥ ಚಿರಶಾಂತಿ ವಾಹನ ಸಮರ್ಪಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಭೀಮನಗರ ದಲಿತ ಸಮುದಾಯದ ಶಕ್ತಿ ಕೇಂದ್ರ. ಇಲ್ಲಿನ ನಿವಾಸಿಗಳು ಕೆಲವು ಬೇಡಿಕೆಗಳನ್ನು ನೀಡಿದ್ದು, ಅದನ್ನು ಪೂರೈಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗುವುದು. ಎಇಇ ಆನಂದಮೂರ್ತಿ ಅವರು ಚಿರಶಾಂತಿ ವಾಹನವನ್ನು ಭೀಮನಗರದ ಉಪಯೋಗಕ್ಕೆ ನೀಡಿರುವುದು ನಿಜಕ್ಕೂ ಉತ್ತಮ ಕೆಲಸ ಎಂದರು.
ಚಿರಶಾಂತಿ ವಾಹನ ಹಸ್ತಾಂತರಿಸಿ ಮಾತನಾಡಿದ ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆಯ ಕೊಳ್ಳೇಗಾಲ ವಿಭಾಗದ ಪಂಚಾಯತ್‌ರಾಜ್ ಇಲಾಖೆಯ ಎಇಇ ಆನಂದಮೂರ್ತಿ, ಭೀಮನಗರ ನಿವಾಸಿಗಳ ಅನುಕೂಲಕ್ಕೆ ಚಿರಶಾಂತಿ ವಾಹನ ನೀಡಲಾಗಿದ್ದು, ಸದ್ಬಳಕ್ಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಬೆಂಗಳೂರು ರಸ್ತೆಯಲ್ಲಿ ಭೀಮನಗರ ಸಮುದಾಯಕ್ಕೆ ಸೇರಿದ 1.80 ಎಕರೆ ಜಾಗವಿದ್ದು ನಗರಸಭೆಯಿಂದ ಖಾತೆ ಮಾಡಿಸಿಕೊಡಬೇಕೆಂದು ಜನಾಂಗದ ಪರವಾಗಿ ಮನವಿ ಮಾಡಿದ್ದರಲ್ಲದೆ, ಭೀಮನಗರ ನಿವಾಸಿಗಳ ನಿವೇಶನ ಹಾಗೂ ಮನೆಗಳಿಗೆ ಇ-ಸ್ವತ್ತು ನೀಡುವ ಮೂಲಕ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಅವಕಾಶ ಮಾಡಿಕೊಡಿ ಎಂದು ಶಾಸಕರ ಬಳಿ ನಿವೇದಿಸಿಕೊಂಡರು.
ಮಡಕೇರಿ ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್.ಸುಂದರ್‌ರಾಜ್ ಮಾತನಾಡಿ, ಹಿಂದೆ ಕೊಳ್ಳೇಗಾಲವನ್ನೇ ಜಿಲ್ಲೆ ಮಾಡುವ ಒತ್ತಾಯವಿತ್ತು. ಎಲ್ಲ ಸಾಮರ್ಥ್ಯವಿದ್ದರೂ ಕಾರಣಾಂತರಗಳಿಂದ ಆಗಲಿಲ್ಲ. ಇಲ್ಲಿಗೆ ಚಿರಶಾಂತಿ ವಾಹನ ನೀಡಿರುವುದು ಉತ್ತಮ ಕೆಲಸ. ಇಲ್ಲಿನ ಮಕ್ಕಳು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.
ಶಾಸಕ ಎ.ಆರ್.ಕೃಷ್ಣಮೂರ್ತಿ, ಮಾಜಿ ಶಾಸಕ ಎಸ್.ಜಯಣ್ಣ, ಜಿ.ಎನ್. ನಂಜುಂಡಸ್ವಾಮಿ ಅವರನ್ನು ಭೀಮನಗರದ ಯಜಮಾನರು ಹಾಗೂ ಮುಖಂಡರು ಸನ್ಮಾನಿಸಿದರು.
ನಗರಸಭೆ ಮಾಜಿ ಅಧ್ಯಕ್ಷೆ ರೇಖಾ ರಮೇಶ್, ಎಸ್.ರಮೇಶ್, ಡಾ.ಎಚ್.ಶ್ರೀಧರ್, ಸೋಮಶೇಖರ್, ಮಂಜುನಾಥ್, ಶಾಂತರಾಜು, ಅಕ್ಮಲ್ ಪಾಷ, ಮುಖಂಡರು ಹಾಗೂ ಭೀಮನಗರದ ಯಜಮಾನರು ಇದ್ದರು.