ಜಿಲ್ಲೆ

ಶ್ರೇಣೀಕೃತ ಜಾತಿ ವ್ಯವಸ್ಥೆ ಬಲಪಡಿಸಲು ಸಂಪ್ರದಾಯವಾದಿಗಳ ಯತ್ನ : ಮಾಜಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಕಿಡಿ

ಮೈಸೂರು: ದೇಶದಲ್ಲಿ ಶ್ರೇಣೀಕೃತ ಜಾತಿ ವ್ಯವಸ್ಥೆ ಬಲಪಡಿಸಿ ಬಹುಸಂಖ್ಯಾತರನ್ನು ಮತ್ತೆ ಶೋಷಣೆಗೆ ಗುರಿಪಡಿಸಿ ಎಲ್ಲ ಸೌಲಭ್ಯಗಳನ್ನು ಪಡೆಯಬೇಕು ಎಂದು ಸಂಪ್ರದಾಯವಾದಿಗಳು ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ. ಆದರೆ, ಇದಕ್ಕೆ ಅಡ್ಡವಾಗಿರುವುದು ಸಂವಿಧಾನ. ಹೀಗಾಗಿ ಸಂವಿಧಾನ ಬದಲಾಯಿಸುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿದೆ ಎಂದು ಮಾಜಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಕಳವಳ ವ್ಯಕ್ತಪಡಿಸಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ವತಿಯಿಂದ ನಗರದ ಮಹಾರಾಜ ಕಾಲೇಜಿನ ಶತಮಾನೋತ್ಸವ ಸಭಾಂಗಣದಲ್ಲಿ ಮಂಗಳವಾರ ಸಂವಿಧಾನ ರಕ್ಷಣೆಗಾಗಿ-ಪ್ರಜಾಪ್ರಭುತ್ವ ಉಳಿವಿಗಾಗಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಜಾಗೃತ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ನಮ್ಮ ಸಂವಿಧಾನ ಶ್ರೇಣೀಕೃತ ವ್ಯವಸ್ಥೆ ತೊಡೆದು ಹಾಕಿ ಎಲ್ಲರಿಗೂ ಸಮಾನವಾದ ಅವಕಾಶ ನೀಡಿತು. ಆದರೆ, ಸಂಪ್ರದಾಯವಾದಿ ಗಳು ಮತ್ತೆ ಶ್ರೇಣಿಕೃತ ವ್ಯವಸ್ಥೆ ಸ್ಥಾಪಿಸಲು ಪ್ರಯತ್ನ ಮಾಡುತ್ತಲೇ ಇದ್ದಾರೆ. ಸಂವಿಧಾವನ್ನು ತೆಗೆದು ಹಾಕಲು ಸಾಧ್ಯವಿಲ್ಲ ಎಂಬುದು ಅವರಿಗೆ ಮನವರಿಕೆಯಾದ ನಂತರ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದ್ದುಕೊಂಡೇ ಪ್ರಜಾಪ್ರಭುತ್ವವನ್ನು ಹಾಳುಮಾಡುವ ಹಾಗೂ ಸಂವಿಧಾನವನ್ನು ಬದಲಾಯಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅವರು ನೇರವಾಗಿ ರಾಜಕೀಯಕಕ್ಕೆ ಬಾರದೆ ಇದ್ದರೂ ತಮ್ಮದೇ ಆದ ಬಿಜೆಪಿ ಪಕ್ಷ ರಚಿಸಿ ಅಧಿಕಾರಕ್ಕೆ ಬಂದಿದ್ದಾರೆ. ಅವರ ಮೂಲ ಉದ್ದೇಶವೇ ಸಂವಿಧಾನ ಬದಲಾವಣೆ. ಆ ಮೂಲಕ ಪ್ರಜಾಪ್ರಭುತ್ವದ ಅಡಿಪಾಯ ಅಲ್ಲಾಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಜರ್ಮನಿಯಲ್ಲಿ ಹಿಟ್ಲರ್ ಅಧಿಕಾರಕ್ಕೆ ಬಂದಿದ್ದು ಸಂವಿಧಾನದ ಮೂಲಕ. ಆದರೆ, ನಂತರ ಸಂವಿಧಾನವನ್ನೇ ಹಾಳು ಮಾಡಿದ. ಅದೇ ರೀತಿ ಸಂಪ್ರದಾಯವಾದಿಗಳು ದೇಶದಲ್ಲಿ ಸಂವಿಧಾನವನ್ನು ದುರ್ಬಲಗೊಳಿಸುವ ಪ್ರಯತ್ನ ಮಾಡುತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಾಹಿತಿ ಪ್ರೊ.ಅರವಿಂದ ಮಾಲಗತ್ತಿ ಮಾತನಾಡಿ, ಸಂವಿಧಾನ ರಕ್ಷಣೆ ಹಾಗೂ ಪ್ರಜಾಪ್ರಭುತ್ವ ಉಳಿವು ಕೇವಲ ಒಬ್ಬರಿಂದ ಮಾತ್ರ ಸಾಧ್ಯವಿಲ್ಲ. ಇದಕ್ಕೆ ಸಾಮೂಹಿಕ ಪ್ರಯತ್ನ ಅವಶ್ಯಕ. ಸಂವಿಧಾನ ನಮಗೆ ಸಮಾನವಾದ ಅವಕಾಶಗಳನ್ನು ನೀಡಿದೆ. ರಕ್ತಪಾತವಿಲ್ಲದೆ, ಯುದ್ಧವಿಲ್ಲದೆ ಸಮಾನತೆಯ ಬದುಕನ್ನು ಪ್ರತಿಯೊಬ್ಬರಿಗು ಸಂವಿಧಾನದ ಮೂಲಕ ತಂದುಕೊಟ್ಟವರು ಅಂಬೇಡ್ಕರ್ ಎಂದು ಹೇಳಿದರು.

ಸಂಸ ಜಿಲ್ಲಾ ಪ್ರಧಾನ ಸಂಚಾಲಕ ಮೆಲ್ಲಹಳ್ಳಿ ನಾರಾಯಣ, ಸಂವಿಧಾನ ಆಶಯ ಜಾರಿಗೆ ತರಲು ಸರ್ಕಾರಗಳು ವಿಫಲವಾಗಿವೆ. ಬಿಜೆಪಿ ಹಾಗೂ ಸಂಘ ಪರಿವಾರ ಸಂವಿಧಾನವನ್ನು ಬುಡಮೇಲು ಮಾಡಲು ಹೊರಟಿದೆ. ಅದಕೋಸ್ಕರ ದಸಂಸದಿಂದ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ವೇದಿಕೆಯಲ್ಲಿ ದಸಂಸ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್, ದಸಂಸ ಪದಾಧಿಕಾರಿಗಳಾದ ನಾಗಣ್ಣ ಬಡಿಗೇರ್, ವಾಟಾಳ್ ನಾಗರಾಜು, ಬಸವರಾಜು ದೇವರಸನಹಳ್ಳಿ, ದೊಡ್ಡಸಿದ್ದು ಹಾದನೂರು, ಗೋವಿಂದರಾಜು, ನಾರಾಯಣ ಗೋಣಹಳ್ಳಿ, ಬನ್ನಹಳ್ಳಿ ಬಸವರಾಜ್, ಸಣ್ಣಕುಮಾರ್ ಕಟ್ಟೆಮನುಗನಹಳ್ಳಿ ಹಾಗೂ ಇತರರು ಇದ್ದರು.