ಶಿಡ್ಲಘಟ್ಟ: ನದಿ, ನಾಲೆಯ ನೀರನ್ನು ಕಾಣದ ತಾಲೂಕಿನ ಜನರು ಮಳೆಯನ್ನು ನಂಬಿದವರು. ಹಾಗಾಗಿ "ವಾನರಾಯ"(ಮಳೆರಾಯ)ನನ್ನು ವಿವಿಧ ರೀತಿಯಲ್ಲಿ ಪೂಜಿಸುವುದು ವಾಡಿಕೆ.
ಅಂತೆಯೇ, ತಾಲೂಕಿನ ದೇವರಮಳ್ಳೂರು ಗ್ರಾಮದಲ್ಲಿ ಮಳೆರಾಯನ ಕೃಪೆಗಾಗಿ "ಅತ್ತೆಮ್ಮನ ಅಂಗಳ ಪೂಜೆ'ಯನ್ನು ಗ್ರಾಮಸ್ಥರೆಲ್ಲ ಸೇರಿ ಶುಕ್ರವಾರ ಆಚರಿಸಿದರು.
"ಮಳೆ ಬೆಳೆ ಚೆನ್ನಾಗಿ ಆಗಿ ಜನ, ಜಾನುವಾರಗಳಿಗೆ ಯಾವುದೇ ರೀತಿಯ ರೋಗ ರುಜಿನಗಳು ಬಾರದಿರಲೆಂದು ಹಲವಾರು ಸಂಪ್ರದಾಯಗಳನ್ನು ಹಳ್ಳಿಗಳಲ್ಲಿ ಹಿಂದಿನಿಂದಲೂ ಆಚರಿಸಿಕೊಂಡು ಬಂದಿದ್ದಾರೆ. ಅಂತಹ ಹಲವು ಸಂಪ್ರದಾಯಗಳಲ್ಲಿ ಅತ್ತೆಮ್ಮನ ಅಂಗಳ ಪೂಜೆಯೂ ಒಂದು. ಹದಿನೈದು ದಿನಕ್ಕೊಮ್ಮೆಯಂತೆ ಮಳೆ ಹೆಸರು ಬದಲಾಗುತ್ತದೆ. ರೇವತಿಯಿಂದ ಪ್ರಾರಂಭವಾಗಿ ಜ್ಯೇಷ್ಠ ಮಳೆಗೆ ಕೊನೆಯಾಗುತ್ತದೆ. ಪಿತೃಪಕ್ಷದಲ್ಲಿ ಬರುವ ಮಳೆಯೇ ಅತ್ತೆ ಮಳೆ. ಈ ಮಳೆಯು ಪ್ರಾರಂಭವಾದ ದಿನದಿಂದ ಕೊನೆಯಾಗುವ ವೇಳೆಗೆ ಯಾವುದಾದರೂ ಒಂದು ಶುಕ್ರವಾರ ಅಥವಾ ಮಂಗಳವಾರ ದಿನ ಅತ್ತೆಮ್ಮನ ಅಂಗಳ ಪೂಜೆ ಮಾಡುವುದು ಇಲ್ಲಿನ ವಾಡಿಕೆ.
ಕುಂಬಾರರ ಮನೆಯಿಂದ ಒಲೆ ಬೂದಿಯನ್ನು ತಂದು ಊರು ಬಾಗಿಲ ಬಳಿ ಅತ್ತೆಮ್ಮನ ಚಿತ್ರ ಬಿಡಿಸಿ ಪೂಜೆ ಮಾಡಿ ಕುರಿ ಬಲಿ ನೀಡಿದ ನಂತರ ಕತ್ತರಿಸಿದ ಹಸಿರು ರಾಗಿ ಹುಲ್ಲು, ಅವರೆ ಸೊಪ್ಪು, ಜೋಳದ ರೆಕ್ಕೆಗಳನ್ನು ಊರಿನ ಸುತ್ತಲೂ ಹಾಕಲಾಯಿತು.
ಪೂಜೆ ನಂತರ ಬೂದಿಯನ್ನು ಗ್ರಾಮದ ಪ್ರತಿಯೊಬ್ಬರೂ ತೆಗೆದುಕೊಂಡು ಹೋಗಿ ಜಮೀನುಗಳ ಬಳಿ ಅತ್ತೆಮ್ಮನ ಚಿತ್ರ ಬಿಡಿಸಿ ಬಂದರು. ಇದರಿಂದ ಮಳೆ ಚೆನ್ನಾಗಿ ಬಿದ್ದು ಸಮೃದ್ಧವಾದ ಬೆಳೆಯಾಗಿ, ಜನ, ಜಾನುವಾರಗಳು ರೋಗ ರುಜಿನಗಳಿಲ್ಲದಂತೆ ನಾಡು ಸುಭಿಕ್ಷವಾಗುತ್ತದೆ ಎಂಬ ನಂಬಿಕೆಯಿದೆ.
ಗ್ರಾಮಸ್ಥರಾದ ಅಕ್ಕಲಪ್ಪ, ಬಚ್ಚಪ್ಪ, ಮುನಿರೆಡ್ಡಿ, ಈರಪ್ಪ, ಚಂದ್ರಪ್ಪ, ನಂಜುಂಡಪ್ಪ, ವೆಂಕಟೇಶ್, ಮಂಜುನಾಥ್, ಚಮದ್ರಪ್ಪ, ಶ್ರೀರಾಮ, ವೆಂಕಟೇಶ್ ಮತ್ತಿತರರು ಇದ್ದರು.