ಜಿಲ್ಲೆ

ವೇದ-ಧರ್ಮದಿಂದ ಪಾರಮಾರ್ಥ ಪ್ರಾಪ್ತಿ

ಗೋಕರ್ಣ: ವಿಶ್ವದ ಸರ್ವ ಶ್ರೇಷ್ಠ ಸಾಹಿತ್ಯ ಪರಂಪರೆಗಳಲ್ಲಿ ಅತ್ಯಂತ ಪ್ರಧಾನ ಗೌರವಕ್ಕೆ ಪಾತ್ರವಾಗಿರುವ ವೇದಗಳು ಮತ್ತು ಸನಾತನ ಧರ್ಮ ಸಂಪನ್ನತೆಯಿಂದ ಜೀವನಕ್ಕೆ ಪಾರಮಾರ್ಥ ಪ್ರಾಪ್ತಿಯಾಗುತ್ತದೆ. ಆದ್ದರಿಂದ ಸಮಸ್ತ ಸಮಾಜ ಇವುಗಳ ಸಂರಕ್ಷಣೆಗೆ ಬದ್ಧವಾಗಬೇಕು ಎಂದು ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಸಂದೇಶ ದಯಪಾಲಿಸಿದರು.

ಶುಕ್ರವಾರ ಶ್ರೀಶಿವ ಗುರುಕುಲ ವಿದ್ಯಾರ್ಥಿಗಳ ದೀಕ್ಷಾ ಸಂದೇಶ ಸಮಾರಂಭ(ಘಟಿಕೋತ್ಸವ)ದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ವೇದಗಳು ಯಾವತ್ತೂ ಅವಿನಾಶಿಯಾಗಿವೆ. ಅವುಗಳು ಸದಾ ಮೊಳಗುತ್ತಲೇ ಇರುತ್ತವೆ. ಆದರೆ, ಅವುಗಳನ್ನು ಆಸ್ಥಾಭಾವದಿಂದ ಆಲಿಸುವ ಕಿವಿಗಳು ಬೇಕು. ರೇಡಿಯೋ ತರಂಗಗಳು ವಾತಾವರಣದ ಎಲ್ಲೆಡೆ ಕಂಪನ ಬೀರುತ್ತಿರುತ್ತವೆ. ಹೇಗೆ ಇವುಗಳನ್ನು ಧ್ವನಿ ಸಂದೇಶವಾಗಿ ಪರಿವರ್ತಿಸಲು ವಿಶೇಷ ಸಾಧನಗಳು ಬೇಕೋ ಹಾಗೆ ವೇದಗಳ ಪರಿಗ್ರಹಣಕ್ಕೆ ವಿಶೇಷ ಪರಿಶ್ರಮದ ಅಗತ್ಯವಿದೆ ಎಂದರು.

ಸಕಲ ವೇದಗಳು ಉಳಿದು, ಬೆಳೆದು, ಮನು ಕುಲವನ್ನು ಬೆಳಗಬೇಕು ಮತ್ತು ಭವಿಷ್ಯದ ಪೀಳಿಗೆಗಳಿಗೆ ಲಭ್ಯವಾಗುವಂತಾಗಬೇಕು ಎನ್ನುವುದು ಆದಿಶಂಕರ ಭಗವತ್ಪಾದರ ಆಶಯವಾಗಿತ್ತು. ಇದನ್ನು ಅನುಸರಿಸಿ ಸರ್ವ ವೇದಗಳ, ಸರ್ವ ಶಾಖೆಗಳನ್ನು ಸಂರಕ್ಷಿಸುವ ಮಹತ್ ಪ್ರಯತ್ನವೇ ಶ್ರೀ ಶಿವ ಗುರುಕುಲದ್ದಾಗಿದೆ. ಮುಂದಿನ ದಿನಗಳಲ್ಲಿ ವೇದವಿದ್ಯೆಗಳ ಶೋಧನಾ ಕಾರ್ಯವೂ ಇಲ್ಲಿ ನಡೆಯಲಿದೆ. ಆದಿ ಮತ್ತು ಅಂತ್ಯ ಎರಡೂ ಇಲ್ಲದ ವೇದಗಳ ಅಧ್ಯಯನ ಮುಗಿಯಿತು ಎನ್ನುವಂತಿಲ್ಲ. ಸಮಗ್ರ ಸೃಷ್ಟಿ ಮತ್ತು ಸೃಷ್ಟೀಶನ ಬಗ್ಗೆ ಸಮಸ್ತವಾದ ಸವಿವರವುಳ್ಳ ಈ ಅಪೂರ್ವ ನಿಧಿಯನ್ನು ಕಾಪಿಡುವ ಸತ್ಕಾರ್ಯ ನಡೆಯಬೇಕು ಎಂದರು.

ಮುಖ್ಯ ಅತಿಥಿ ವಿದ್ವಾನ್ ಸನತ್ಕುಮಾರ ಶರ್ಮಾ ಸೋಮಯಾಜಿ ಮಾತನಾಡಿ, ಪ್ರತಿಯೊಬ್ಬರೂ ಜನ್ಮದಲ್ಲಿಯೇ ದೇವ, ಪಿತೃ ಮತ್ತು ಋಷಿ ಋಣಗಳನ್ನು ಹೊಂದಿರುತ್ತಾರೆ. ವೇದಾಧ್ಯಯನ ಮತ್ತು ಧಾರ್ಮಿಕ ಕರ್ತವ್ಯಗಳಿಂದ ಈ ಋಣಗಳನ್ನು ಪರಿಹರಿಸಿಕೊಳ್ಳಬೇಕು. ಆದರೆ, ಇಂದಿನ ಜನಾಂಗ ಈ ಸನಾತನ ವಿದ್ಯೆಯ ಅಧ್ಯಯನಕ್ಕೇ ಹಿಂಜರಿಯುವ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ವೇದಾಧ್ಯಯನಗಳನ್ನು ಪ್ರೇರೇಪಿಸಿ ಧರ್ಮವನ್ನು ಎತ್ತಿ ಹಿಡಿಯಲು ಇಂತಹ ಗುರುಕುಲಗಳ ಅಗತ್ಯ ಅಧಿಕವಾಗಿದೆ ಎಂದರು.

ಹಿರಿಯ ವೇದ ವಿದ್ವಾಂಸ ಉಮಾಕಾಂತ ಭಟ್ಟ ಕೆರೆಕೈ ಮಾತನಾಡಿ, ವೇದಗಳ 1132 ಶಾಖೆಗಳಲ್ಲಿ ಕೇವಲ ಆರೇಳು ಶಾಖೆಗಳು ಮಾತ್ರ ಉಳಿದುಕೊಂಡಿವೆ. ಕಳೆದುಕೊಂಡಿದ್ದನ್ನು ಹುಡುಕುವ ಕೆಲಸವಾಗಿ, ಶಿಥಿಲವಾಗಿರುವ ಧರ್ಮಶ್ರದ್ಧೆ ಮತ್ತೆ ನಮ್ಮೆಲ್ಲರಲ್ಲಿ ಆವಿರ್ಭವಿಸುವಂತಾಗಲಿ ಎಂದು ಹಾರೈಸಿದರು.

ವರಿಷ್ಠಾಚಾರ್ಯ ವಿದ್ವಾನ್ ಸತ್ಯನಾರಾಯಣ ಶರ್ಮಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಗುರುಕುಲ ಪ್ರಾಚಾರ್ಯ ಮಂಜುನಾಥ ಘನಪಾಠಿಗಳು ಸಭಾಪೂಜೆ ನೆರವೇರಿಸಿದರು. ವಿವಿವಿ ಗೌರವಾಧ್ಯಕ್ಷ ದೇವಶ್ರವ ಶರ್ಮಾ, ಸಂಚಾಲಕಿ ಅಶ್ವಿನಿ ಉಡುಚೆ, ಆಡಳಿತಾಧಿಕಾರಿ ಪ್ರಸನ್ನಕುಮಾರ ಟಿ.ಜಿ., ಸುಬ್ರಾಯ ಭಟ್ಟ ಮತ್ತಿತರರಿದ್ದರು. ಶ್ರೀಮಠದ ಆಚಾರ-ವಿಚಾರ ಮುಖ್ಯಸ್ಥ ವೇ.ಗಜಾನನ ಭಟ್ಟ, ಪರಂಪರಾ ಗುರುಕುಲ ಪ್ರಾಚಾರ್ಯ ವಿದ್ವಾನ್ ನೃಸಿಂಹ ಭಟ್ಟ ನಿರ್ವಹಿಸಿದರು.