ಜಿಲ್ಲೆ

ಹಿಂದುಗಳ ಮೇಲಿನ ಆಕ್ರಮಣ ಸಹಿಸಲ್ಲ

ಉತ್ತರ ಕನ್ನಡ ಡೆಸ್ಕ್

ಹಾನಗಲ್ಲ: ಹಿಂದುಗಳಿಗೆ ಅಪಮಾನ ಮಾಡಿದ ಯಾವ ಸರ್ಕಾರಗಳೂ ಉಳಿದಿಲ್ಲ. ಹಿಂದುತ್ವದ ಮೇಲೆ ಆಕ್ರಮಣವೂ ಹೊಸದಲ್ಲ. ಷಡ್ಯಂತ್ರಗಳಿಗೆ ಬಗ್ಗುವುದಿಲ್ಲ, ಹಿಂದು ಪಲಾಯನವಾದಿಯೂ ಅಲ್ಲ ಎಂದು ವಿಶ್ವ ಹಿಂದು ಪರಿಷತ್ ರಾಷ್ಟ್ರೀಯ ಕಾರ್ಯದರ್ಶಿ ಗೋಪಾಲಜಿ ನಾಗರಕಟ್ಟೆ ಹೇಳಿದರು.

ಇಲ್ಲಿನ ವಿರಾಟ ಹಿಂದು ಮಹಾಗಣಪತಿ ಸಮಿತಿ ವತಿಯಿಂದ ಬುಧವಾರ ಆಯೋಜಿಸಿದ್ದ ಧರ್ಮಸಭೆಯಲ್ಲಿ ಅವರು ಮಾತನಾಡಿದರು.

ಹಿಂದು ಸಂಸ್ಕೃತಿಯ ಮೇಲೆ ಆಕ್ರಮಣ ನಡೆದಾಗೆಲ್ಲ ಹಿಂದುಗಳು ಕೈಕಟ್ಟಿ ಕುಳಿತಿಲ್ಲ. ನಾವು ಹೇಡಿಗಳಲ್ಲ. ಧರ್ಮಸ್ಥಳ ಶ್ರದ್ಧಾ ಕೇಂದ್ರ ಗುರಿಯಾಗಿಸಿಕೊಂಡು ನಡೆಸಿದ ಎಲ್ಲ ತಂತ್ರಗಳು ಷಡ್ಯಂತ್ರಗಳೇ ಆಗಿವೆ. ಧರ್ಮಸ್ಥಳ ಡಾ.ವೀರೇಂದ್ರ ಹೆಗ್ಗಡೆಯವರು ರಾಜ್ಯಕ್ಕೆ ನೀಡಿದ ಕೊಡುಗೆ ಅಭಿನಂದನೀಯವಾದುದು. ಇದು ಕೇವಲ ಧರ್ಮಸ್ಥಳದ ಮೇಲಿನ ಆಕ್ರಮಣ ಅಲ್ಲ. ಇಡೀ ಹಿಂದುತ್ವದ ಮೇಲಿನ ಆಕ್ರಮಣ. ಬುರುಡೆ ಬಿಟ್ಟವರೆಲ್ಲ ತಕ್ಕ ಶಾಸ್ತಿ ಅನುಭವಿಸಬೇಕು ಎಂದರು.

ರಾಷ್ಟ್ರ ಧರ್ಮ ಸಂಸ್ಕಾರವೇ ಆರ್​ಎಸ್​ಎಸ್ ಉದ್ದೇಶ. ಸ್ವದೇಶಿ ಭಾವ ಅರಳಿ ಸ್ವಾಭಿಮಾನಿಗಳಾಗಿ ಪ್ರೇರಣಾದಾಯಕ ಸತ್ಸಮಾಜಕ್ಕಾಗಿ ಶ್ರಮಿಸುವುದೇ ಸಂಘದ ಆಶಯ. ಉತ್ತರ ಕರ್ನಾಟಕದಲ್ಲಿ ಮಠಗಳು ಮಾಡಿದ ಶೈಕ್ಷಣಿಕ ಸೇವೆ ಸದಾಕಾಲಕ್ಕೂ ಸ್ಮರಣೀಯವಾದುದು ಎಂದರು.

ಹೂವಿನಹಡಗಲಿಯ ಗವಿಸಿದ್ಧೇಶ್ವರ ಶಾಖಾ ಮಠದ ಡಾ.ಶಾಂತವೀರ ಸ್ವಾಮೀಜಿ ಮಾತನಾಡಿ, ಹಾನಗಲ್ಲ ಲಿಂ. ಕುಮಾರಶಿವಯೋಗಿಗಳವರು ಪಂ.ಪಂಚಾಕ್ಷರಿ ಗವಾಯಿಗಳಿಗೆ ನೀಡಿದ ಸಂಸ್ಕಾರ ಕಾರಣದಿಂದಾಗಿ ಸಂಗೀತದ ಮೂಲಕ ಅಂಧ, ಅನಾಥ, ದುರ್ಬಲರಿಗೆ ಅಕ್ಷಯ ಪಾತ್ರೆ ನೀಡಿದಂತಾಯಿತು. ದೇಶದ ಹಿತಕ್ಕಾಗಿ ಯುವಕರು ಮುನ್ನಡಿ ಇಡಬೇಕು. ಮಹಾತ್ಮರ ಆದರ್ಶಗಳ ಪಾಠ ನಮಗೆ ಬೇಕಾಗಿದೆ ಎಂದರು.

ರವಿಚಂದ್ರ ಪುರೋಹಿತ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಲ್ಲಣ್ಣ ಬಂಕಾಪೂರ ಅಧ್ಯಕ್ಷತೆ ವಹಿಸಿದ್ದರು. ಅಗಡಿ ಅಕ್ಕಿಮಠದ ಶ್ರೀ ಗುರುಲಿಂಗ ಸ್ವಾಮೀಜಿ ಸಮ್ಮುಖ ವಹಿಸಿದ್ದರು. ಸಿದ್ದಲಿಂಗಣ್ಣ ಕಮಡೊಳ್ಳಿ, ಬಿ.ಎಸ್. ಕುಲಕರ್ಣಿ, ಗಾಯಕಿ ಸಂಧ್ಯಾ ಗಿರೀಶ, ಇತರರಿದ್ದರು. ಪ್ರಭಾಕರ ಕರಗುದರಿ ವಂದೇ ಮಾತರಂ ಗೀತೆ ಹಾಡಿದರು. ತುಳಜೇಶ ಮೂಲಿಮನಿ ಸ್ವಾಗತಿಸಿದರು. ಚೇತನ ಬೆಂಡಿಗೇರಿ ಪರಿಚಯಿಸಿದರು. ಗಿರೀಶ ದೇಶಪಾಂಡೆ ನಿರೂಪಿಸಿದರು. ರವಿ ಪುರದ ವಂದಿಸಿದರು.