ಜಿಲ್ಲೆ

ಬಜರಂಗದಳ ಕಾರ್ಯಕರ್ತಗೆ ಹಲ್ಲೆ

ಸೌಮ್ಯ ಆರ್

ಉಳ್ಳಾಲ: ಚುನಾವಣಾ ಫಲಿತಾಂಶದಂದು ಪಟಾಕಿ ಸಿಡಿಸಿದ ವಿಚಾರಕ್ಕೆ ಉಂಟಾಗಿದ್ದ ವೈಮನಸ್ಸು ಹಿನ್ನೆಲೆಯಲ್ಲಿ ಬಜರಂಗದಳ ಕಾರ್ಯಕರ್ತನಿಗೆ ಕುಂಪಲದಲ್ಲಿ ಬುಧವಾರ ಹಲ್ಲೆ ನಡೆಸಲಾಗಿದೆ.

ಕುಂಪಲ ನಿವಾಸಿ, ಬಜರಂಗದಳ ಕಾರ್ಯಕರ್ತ ಪ್ರವೀಣ್ ಪೂಜಾರಿ ಯಾನೆ ಪಿಟ್ಟಿ(39) ಹಲ್ಲೆಗೊಳಗಾಗಿದ್ದು, ಸ್ಥಳೀಯ ಸಂಘಟನೆ ಕೇಸರಿ ಮಿತ್ರ ವೃಂದದ ಗೌತಮ್ ಎಂಬಾತ ಆರೋಪಿ. ಜೂನ್ 4ರಂದು ಚುನಾವಣಾ ಫಲಿತಾಂಶ ಪ್ರಕಟವಾದ ಸಂದರ್ಭ ಬಿಜೆಪಿ ಅಭ್ಯರ್ಥಿ ಗೆಲುವಿನ ಖುಷಿಯಲ್ಲಿ ಪಟಾಕಿ ಸಿಡಿಸಿದ ವಿಚಾರದಲ್ಲಿ ಬಜರಂಗದಳ ಹಾಗೂ ಕೇಸರಿ ಮಿತ್ರ ವೃಂದದ ಸದಸ್ಯರ ನಡುವೆ ವಾಗ್ವಾದ ನಡೆದಿತ್ತು.

ಇದೇ ವಿಚಾರದಲ್ಲಿ ಬುಧವಾರ ಕೆಲಸದಿಂದ ಮನೆಗೆ ಹಿಂದಿರುಗುತ್ತಿದ್ದ ಪ್ರವೀಣ್ ಅವರನ್ನು ಅಡ್ಡಗಟ್ಟಿದ ಗೌತಮ್ ಹಲ್ಲೆ ನಡೆಸಿ ದೂಡಿದ್ದಾನೆ. ಪರಿಣಾಮ ಚರಂಡಿಗೆ ಬಿದ್ದ ಪ್ರವೀಣ್ ತಲೆಗೆ ಗಾಯವಾಗಿದೆ. ಗಾಯಾಳುವನ್ನು ತೊಕ್ಕೊಟ್ಟು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.