ರಾಮನಗರದ ಜೆಡಿಎಸ್ ಕಚೇರಿಯಲ್ಲಿ ಮಾಯಗಾನಹಳ್ಳಿ ಡೇರಿ ಸದಸ್ಯ ಯೋಗೇಶ್ ಮತ್ತು ಹಾಲು ಉತ್ಪಾದಕರು ಸುದ್ದಿಗೋಷ್ಠಿ ನಡೆಸಿದರು. ಯೋಗೇಶ್, ರಾಮಚಂದ್ರು, ಮುಖಂಡರಾದ ಸಬ್ಬಕೆರೆ ಶಿವಲಿಂಗಯ್ಯ, ಕೆಂಪಣ್ಣ, ಪಾಪಣ್ಣ, ಕುಮಾರ್, ಗೋಪಾಲ್, ಅಂಜನಾಪುರ ವಾಸು, ಸರಸ್ವತಮ್ಮ ಇದ್ದರು.  
ಜಿಲ್ಲೆ

ಡೇರಿಯಲ್ಲಿ ಮಾಹಿತಿ ಕೇಳಿದ್ದಕ್ಕೆ ಹಲ್ಲೆ !

ವಿಜಯವಾಣಿ ಸುದ್ದಿಜಾಲ ರಾಮನಗರ
ಮಾಯಗಾನಹಳ್ಳಿ ಡೇರಿ ಚುನಾವಣೆ ಸಂಬಂಧ ದಾಖಲೆ ಕೇಳಿದರೆ ಸಮರ್ಪಕ ಉತ್ತರ ನೀಡುವ ಬದಲು ಕೆಎಂಎಫ್‌ನ ಮಾಜಿ ಅಧ್ಯಕ್ಷ ಹಾಗೂ ಡೇರಿ ಅಧ್ಯಕ್ಷ ಪಿ. ನಾಗರಾಜು ಹಲ್ಲೆ ಮಾಡಿ ದಬ್ಬಾಳಿಕೆ ನಡೆಸುತ್ತಾರೆ ಎಂದು ಡೇರಿ ಸದಸ್ಯ ಮಾಯಾಗಾನಹಳ್ಳಿ ಯೋಗೇಶ್ ಆರೋಪಿಸಿದರು.


ರಾಮನಗರದ ಜೆಡಿಎಸ್ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 30 ವರ್ಷಗಳಿಂದ ಡೇರಿಗೆ ಚುನಾವಣೆ ನಡೆದಿಲ್ಲ. ಈ ಬಗ್ಗೆ ದಾಖಲೆ ಹಾಗೂ ಮಾಹಿತಿಯನ್ನು ಕಾರ್ಯದರ್ಶಿ ಅವರಲ್ಲಿ ಕೇಳಿದರೆ ಮಾಹಿತಿ ನೀಡುವುದಿಲ್ಲ. ಒಂದೂವರೆ ವರ್ಷದಿಂದ ಈ ಸಂಬಂಧ ಡೇರಿಗೆ ಅರ್ಜಿ ಸಲ್ಲಿಸಲಾಗುತ್ತಿದೆ. ಆದರೂ, ಸೂಕ್ತ ಉತ್ತರ ದೊರಕಿಲ್ಲ. ಹಾಗಾಗಿ ಸಹಕಾರ ಇಲಾಖೆ ಎಆರ್ ಹಾಗೂ ಡಿಆರ್‌ಗೆ ಅರ್ಜಿ ಸಲ್ಲಿಸಿದ್ದೇವು. ಅವರಿಂದಲೂ ಅರ್ಜಿಗೆ ಉತ್ತರ ನೀಡುವಂತೆ ನಿರ್ದೇಶನ ಬಂದಿದೆ. ಡೇರಿಯಲ್ಲಿ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ನಡೆದಿಲ್ಲ. 30 ವರ್ಷದಿಂದ ಚುನಾವಣೆ ನಡೆಸದೆ ಪಿ. ನಾಗರಾಜು ಅವರು ಅವಿರೋಧವಾಗಿ ಆಯ್ಕೆಯಾಗುತ್ತಲೇ ಬರುತ್ತಿದ್ದಾರೆ. ಚುನಾವಣಾ ಪ್ರಕ್ರಿಯೆ ಬಗ್ಗೆ ಸದಸ್ಯರಿಗೆ ಮಾಹಿತಿ ನೀಡದೆ ನಡೆಸಲಾಗುತ್ತಿದೆ. ಇಷ್ಟ ಬಂದವರನ್ನು ಡೇರಿ ನಿರ್ದೇಶಕರನ್ನಾಗಿ ಆಯ್ಕೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ನಮ್ಮ ತಂದೆಯನ್ನೂ ಇದೇ ಮಾದರಿಯಲ್ಲಿ ಡೇರಿ ನಿರ್ದೇಶಕರಾಗಿ ಆಯ್ಕೆ ಮಾಡಿದ್ದಾರೆ. ಈ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ನಮ್ಮ ಮೇಲೆ ಹಲ್ಲೆಗೆ ಮುಂದಾಗುತ್ತಿದ್ದಾರೆ. ಕಾರ್ಯದರ್ಶಿ ಸಮಪರ್ಕವಾಗಿ ಉತ್ತರ ನೀಡುತ್ತಿಲ್ಲ. ಕೆಎಂಎಫ್ ಮಾಜಿ ಅಧ್ಯಕ್ಷರು, ಇದು ನನ್ನ ಸ್ವಂತ ಡೇರಿ, ನೀವು ಏನೂ ಮಾಡಲು ಆಗುವುದಿಲ್ಲ ಎನ್ನುತ್ತಾರೆ ಎಂದು ದೂರಿದರು. ಡೇರಿ ಅಗತ್ಯ ಮಾಹಿತಿ ಬಗ್ಗೆ ಮಂಗಳವಾರ ಬೆಳಗ್ಗೆ ಕಾರ್ಯದರ್ಶಿ ಅವರ ಬಳಿ ಕೇಳಲು ಹೋದಾಗ ಸರಿಯಾಗಿ ಸ್ಪಂದಿಸದೆ ಸ್ಥಳಕ್ಕೆ ಅಧ್ಯಕ್ಷ ಪಿ.ನಾಗರಾಜು ಕರೆಸಿದರು. ಈ ವೇಳೆ ಪಿ. ನಾಗರಾಜು ನಮ್ಮ ಜತೆಯಲ್ಲಿದ್ದ ರಾಮಚಂದ್ರ ಅವರ ಮೇಲೆ ಹಲ್ಲೆ ಮಾಡಿದರು. ನಾನು ತಡೆದು ಹಲ್ಲೆ ಬಗ್ಗೆ ಪ್ರಶ್ನಿಸಿದ್ದಕ್ಕೆ ಕೇವಲವಾಗಿ ಮಾತನಾಡಿ, ನೀವು ಯಾರೇ ಕೇಂದ್ರ ಮಂತ್ರಿ ಕರೆದುಕೊಂಡು ಬಂದರೂ ನನ್ನನ್ನು ಏನೂ ಮಾಡಲು ಆಗುವುದಿಲ್ಲ ಎಂದರು ಎಂದು ದೂರಿದರು. ಹಲ್ಲೆ ಸಂಬಂಧ ರಾಮಗರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.


ಹಾಲು ಉತ್ಪಾದಕ ರಾಮಚಂದ್ರ ಮಾತನಾಡಿದರು. ಮುಖಂಡರಾದ ಮಂಜುನಾಥ್, ಜಿ.ಟಿ. ಕೃಷ್ಣ, ಅಂಜನಾಪುರ ವಾಸು, ಸರಸ್ವತಮ್ಮ, ವೆಂಕಟೇಶ್, ಜಯಕುಮಾರ್, ಕೆಂಪರಾಜು, ವೀರೇಶ್, ಎಂ.ಎಸ್. ರಾಜು, ಶಿವಸ್ವಾಮಿ, ಯೋಗೇಶ್, ನರಸಿಂಹಯ್ಯ ಇದ್ದರು.