ಜಿಲ್ಲೆ

ಯುವಕನ ಮೇಲೆ ತಲವಾರು ದಾಳಿ

Dakshina Kannada

ಉಳ್ಳಾಲ: ಕೋಟೆಕಾರ್ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಹಿದಾಯತ್ ನಗರ ಎಂಬಲ್ಲಿ ಗುರುವಾರ ರಾತ್ರಿ ಹೊಂಚುಹಾಕಿ ಕುಳಿತಿದ್ದ ಇಬ್ಬರು ದುಷ್ಕರ್ಮಿಗಳು ಯುವಕನ ಮೇಲೆ ತಲವಾರು ದಾಳಿ ನಡೆಸಿದ್ದಾರೆ.

ಹಿದಾಯತ್ ನಗರ ನಿವಾಸಿ ಇಕ್ಬಾಲ್(32) ದಾಳಿಗೊಳಗಾಗಿದ್ದು, ತೊಕ್ಕೊಟ್ಟಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಮ್ತಿಯಾಝ್ ಮತ್ತು ಶಫೀಕ್ ಆರೋಪಿಗಳೆಂದು ದೂರಿನಲ್ಲಿ ತಿಳಿಸಲಾಗಿದೆ. ಇಕ್ಬಾಲ್ ಎಸ್‌ಡಿಪಿಐ ಕಾರ್ಯಕರ್ತರಾಗಿದ್ದು, ಮುಳ್ಳುಗುಡ್ಡೆ ಎಂಬಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬಕ್ಕೆ ಪಕ್ಷದ ವತಿಯಿಂದ ಮನೆ ನಿರ್ಮಾಣ ಕೆಲಸ ಪ್ರಗತಿಯಲ್ಲಿದ್ದು, ಗುರುವಾರ ಶ್ರಮದಾನದಲ್ಲಿ ಭಾಗವಹಿಸಿದ್ದ ಇಕ್ಬಾಲ್ ರಾತ್ರಿ ಏಳು ಗಂಟೆ ಹೊತ್ತಿಗೆ ತನ್ನ ಸ್ಕೂಟರ್‌ನಲ್ಲಿ ಮನೆಗೆ ಹೋಗುತ್ತಿದ್ದರು. ಹಿದಾಯತ್ ನಗರ ತಲುಪಿದಾಗ ಅಡ್ಡಗಟ್ಟಿದ ದುಷ್ಕರ್ಮಿಗಳ ಗುಂಪು ತಲವಾರಿನಿಂದ ದಾಳಿ ನಡೆಸಿ ಕೊಲೆಗೆ ಯತ್ನಿಸಿದೆ. ಘಟನೆಯಲ್ಲಿ ಇಕ್ಬಾಲ್ ಅವರ ಎರಡೂ ಕೈ, ಕಾಲು ಹಾಗೂ ಹೊಟ್ಟೆಗೆ ಗಾಯವಾಗಿದೆ. ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.