ಮುಧೋಳದ ಹೋರಾಟಗಾರ ಯಲ್ಲಪ್ಪ ಹೆಗಡೆ ಅವರನ್ನು ಅಮಾನವೀಯವಾಗಿ ಹಲ್ಲೆ ಮಾಡಿದ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿ ಭೀಮ ಆರ್ಮಿ ಭಾರತ ಏಕತಾ ಮಿಷನ್ ಸಂಘಟನೆ ಹಾಗೂ ವಿವಿಧ ಸಂಘಟಗಳ ಆಶ್ರಯದಲ್ಲಿ ಪ್ರತಿಭಟನೆ ನಡೆಸಿ, ಉಪತಹಸೀಲ್ದಾರ ಶ್ರೀಶೈಲ್ ಘಾಟನಿ ಅವರಿಗೆ ಮುಖಂಡರಾದ ಶಿವಾನಂದ ಮ್ಯಾಗೇರಿ, ಸದಾಶಿವ ತಳಗೇ ಮನವಿ ಸಲ್ಲಸಿದರು. ಕಾರ್ಮಿಕ ಮುಖಂಡ ಈರಣಗೌಡ ಪಾಟೀಲ್, ಪ್ರಕಾಶ ಕಬ್ಬೂರ, ಕಲ್ಲಪ್ಪ ಮಾದರ ಇತರರಿದ್ದರು. 
ಜಿಲ್ಲೆ

ಯಲ್ಲಪ್ಪ ಹೆಗಡೆ ಮೇಲೆ ಹಲ್ಲೆ ಅಮಾನವೀಯ..!

ಮುಧೋಳ: ಸಾಮಾಜಿಕ ಹೋರಾಟಗಾರ ಯಲ್ಲಪ್ಪ ಹೆಗಡೆ ಅವರ ಮೇಲೆ ಅಮಾನವೀಯವಾಗಿ ಹಲ್ಲೆ ಮಾಡಿದ ಆರೋಪಿಗಳನ್ನು ತಕ್ಷಣವೇ ಬಂಧಿಸಿ, ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿ ಮಂಗಳವಾರ ನಗರದ ವಿಜಯಪುರ-ಬೆಳಗಾಗಿ ರಾಜ್ಯ ಹೆದ್ದಾರಿಯ ಕವಿ ಚಕ್ರವರ್ತಿ ರನ್ನ ಸರ್ಕಲ್‌ನಲ್ಲಿ ಭೀಮ ಆರ್ಮಿ ಭಾರತ ಏಕತಾ ಮಿಷನ್ ಸಂಘಟನೆ ಹಾಗೂ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಪ್ರತಿಭಟನೆ ನಡೆಸಿ, ಉಪತಹಸೀಲ್ದಾರ್ ಶ್ರೀಶೈಲ ಘಾಟನಿ ಅವರಿಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು.

ಮುಧೋಳ ತಾಲೂಕು ಕುರುಬರ ಸಂಘದ ಅಧ್ಯಕ್ಷ ಮಲ್ಲಪ್ಪ ಮಂಟೂರ ಮಾತನಾಡಿ, ಸಂವಿಧಾನದಲ್ಲಿ ಎಲ್ಲರಿಗೂ ಸಮಾನ ಹಕ್ಕಿದೆ. ಅಂತಹ ಹಕ್ಕನ್ನು ಕಸಿದುಕೊಂಡು ಪ್ರಜಾಪ್ರಭುತ್ವ ವ್ಯವಸ್ಥೆಗೆ ಅನ್ಯಾಯ ಮಾಡುವ ದುಷ್ಕರ್ಮಿಗಳನ್ನು ಬಂಧಿಸಿ ಅವರಿಗೆ ಕಠಿಣ ಶಿಕ್ಷೆ ನೀಡಬೇಕು ಹಾಗೂ ಹೋರಾಟಗಾರರಿಗೆ ಸರ್ಕಾರ ಸೂಕ್ತ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿದರು.

ಭೀಮ ಆರ್ಮಿ ತಾಲೂಕು ಸಂಚಾಲಕ ಶಿವಾನಂದ ಮ್ಯಾಗೇರಿ ಮಾತನಾಡಿ, ಕಾರ್ಮಿಕರ ಪರ ಹೋರಾಟಗಳನ್ನು ಮಾಡುತ್ತಾ ಶೋಷಿತ ಸಮುದಾಯಗಳ ಹಾಗೂ ಎಲ್ಲ ವರ್ಗದ ಪರ ಧ್ವನಿ ಎತ್ತಿ ಹೋರಾಟವನ್ನೇ ಉಸಿರಾಗಿಸಿಕೊಂಡ ಸಾಮಾಜಿಕ ಹೋರಾಟಗಾರ ಯಲ್ಲಪ್ಪ ಹೆಗಡೆ ಮೇಲೆ ನಡೆದ ಹಲ್ಲೆ ಅಮಾನವೀಯವಾಗಿ ಹಲ್ಲೆ ನಡೆದಿರುವುದು ದುರದುಷ್ಟಕರ ಸಂಗತಿಯಾಗಿದೆ ಎಂದು ಹೇಳಿದರು.

ರೈತರ ಸಹಕಾರಿ ಸಕ್ಕರೆ ಕಾರ್ಖಾನೆ ಕಾರ್ಮಿಕ ಮುಖಂಡ ಈರಣಗೌಡ ಪಾಟೀಲ್, ಪ್ರಕಾಶ ಕಬ್ಬೂರ, ಕಲ್ಲಪ್ಪ ಮಾದರ, ಹಾಜಿಸಾಬ ನದಾಫ್, ಕಾಸಿಂ ನದ್ಾ, ಸದಾಶಿವ ತಳಗೇರಿ, ನೂರಾರು ಹೋರಾಟಗಾರರು ಉಪಸ್ಥಿತರಿದ್ದರು.
ಸಿಪಿಐ ಮಹದೇವ ಶಿರಹಟ್ಟಿ, ಜಮಖಂಡಿ ಸಿಪಿಐ ಮಲ್ಲಪ್ಪ ಮಡ್ಡಿ, ಪಿಎಸ್‌ಐ ಅಜೀತರಡ್ಡಿ ಹೊಸಮನಿ, ಪೊಲೀಸ್ ಸಿಬ್ಬಂದಿ ಸೂಕ್ತ ಬಂದೋಬಸ್ತ್ ಮಾಡಿದ್ದರು.

ಕೋರ್ಟ್ ಕಾರ್ಯಕಲಾಪ ಬಹಿಷ್ಕರಿಸಿ ವಕೀಲರ ಬೆಂಬಲ: ನ್ಯಾಯವಾದಿ ಮತ್ತು ಹೋರಾಟಗಾರ ಯಲ್ಲಪ್ಪ ಹೆಗಡೆ ಮೇಲೆ ಹಲ್ಲೆ ಖಂಡಿಸಿ ನಗರದ ವಕೀಲರ ಸಂಘದ ವತಿಯಿಂದ ವಕೀಲರ ಸಂಘದ ಅಧ್ಯಕ್ಷ ವಿ.ಡಿ. ಕತ್ತಿ, ಉಪಾಧ್ಯಕ್ಷ ಬಿ.ಪಿ. ದೊಡ್ಡಟ್ಟಿ, ಕಾಡು ಬೀಳಗಿ, ಐ.ಎಚ್. ಅಂಬಿ, ಬಿ.ಆರ್. ದೊಡ್ಡಟ್ಟಿ ಇತರ ವಕೀಲರ ನೇತತ್ವದಲ್ಲಿ ಕಾರ್ಯ ಕಲಾಪಗಳನ್ನು ಬಹಿಷ್ಕರಿಸಿ ಹೊರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.

ಪ್ರಯಾಣಿಕರಿಗೆ ಕಿರಿಕಿರಿಯಾದ ರಸ್ತೆ ತಡೆ: ಹೋರಾಟಗಾರ ಯಲ್ಲಪ್ಪ ಹೆಗಡೆ ಹಲ್ಲೆಯಿಂದ ಸೋಮವಾರ ಮಧ್ಯಾಹ್ನದಿಂದ ಸಂಜೆಯವರೆಗೆ ಮೂರು ಗಂಟೆ ರಸ್ತೆ ನಡೆದಿದ್ದು ಮಂಗಳವಾರವೂ ಸಹ ನಗರದಲ್ಲಿ ರಸ್ತೆ ತಡೆ ನಡೆದರಿಂದ ದೂರ ಪ್ರಯಾಣ ಮಾಡುವ ಪ್ರಯಾಣಿಕರಿಗೆ ತೊಂದರೆಯಾಯಿತು.