ವಿಜಯಪುರ ಜಿಲ್ಲಾಡಳಿತಕ್ಕೆ ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ಖುಕಾಸಿಂಗ್ ಜಾಧವ, ಸಿ.ಜಿ. ಪಾರೆ, ಸುರೇಶ ಶೇಡಶ್ಯಾಳ ಮತ್ತಿತರರಿದ್ದಾರೆ.  
ಜಿಲ್ಲೆ

ದೇವರನಿಂಬರಗಿಯಲ್ಲಿ ಪಿಡಿಒ ಮೇಲೆ ಹಲ್ಲೆ, ಗ್ರಾಪಂ ಸದಸ್ಯ ಝಾಕೀರ್ ಮೇಲೆ ಕಠಿಣ ಕ್ರಮಕ್ಕೆ ಆಗ್ರಹ

ವಿಜಯಪುರ: ಗ್ರಾಪಂ ಪಿಡಿಒ ಮೇಲೆ ಹಲ್ಲೆ ನಡೆಸಿದ ಸದಸ್ಯನ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ(ರಿ) ಬೆಂಗಳೂರು ಹಾಗೂ ಜಿಲ್ಲಾ ಘಟಕದ ಪದಾಧಿಕಾರಿಗಳು ಗುರುವಾರ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ರಾಜ್ಯ ಉಪಾಧ್ಯಕ್ಷ ಖುಕಾಸಿಂಗ್ ಜಾಧವ ಮಾತನಾಡಿ, ಚಡಚಣ ತಾಲೂಕಿನ ದೇವರನಿಂಬರಗಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿಶ್ವನಾಥ ರಾಠೋಡ ಮೇಲೆ ಸದಸ್ಯ ಝಾಕೀರ ಬಪೀರಸಾಬ ಮಣಿಯಾರ ಅ. 18 ರಂದು ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ. ಅಷ್ಟೇ ಅಲ್ಲ, ಜಾತಿ ನಿಂದನೆ ಕೂಡ ಮಾಡಿದ್ದಾರೆ. ಪಿಸ್ತೂಲ್ ತೋರಿಸಿ ಇನ್ಮುಂದೆ ಗ್ರಾಮ ಪಂಚಾಯಿತಿಗೆ ಬರಬೇಡ ಎಂದು ಬೆದರಿಕೆಯೊಡ್ಡಿದ್ದಾನೆ. ಪದೇ ಪದೇ ಕಿರುಕುಳ ನೀಡುತ್ತಿದ್ದು ಪಿಡಿಒ ಜೀವ ಭಯದಲ್ಲಿದ್ದಾರೆ. ಹೀಗಾಗಿ ಕೂಡಲೇ ಸದಸ್ಯನ ಮೇಲೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಗ್ರಾಮ ಪಂಚಾಯಿತಿಯ ಯಾವುದೇ ಕೆಲಸ ಮಾಡಿದರೂ ತನಗೆ ಹೇಳಬೇಕೆಂದು ಸದಸ್ಯ ಒತ್ತಾಯಿಸಿದ್ದಾನೆ. ಗಲಾಟೆ ಮಾಡಿದ್ದಾನೆ. ನರೇಗಾ ಯೋಜನೆ ಅನುಷ್ಟಾನಗೊಳಿಸಲು ಬಿಡುತ್ತಿಲ್ಲ. ಬೋಗಸ್ ಬಿಲ್ ಮಾಡಲು ಒತ್ತಡ ಹೇರುತ್ತಿದ್ದಾನೆ. ಲೋಕಾಯುಕ್ತ ದೂರು ನೀಡುವುದಾಗಿ ಹೆದರಿಸುತ್ತಿದ್ದಾನೆ. ಬ್ಲಾೃಕ್ ಮೇಲ್ ಮಾಡುತ್ತಾನೆ ಎಂದು ಪಿಡಿಒ ಅಲವತ್ತುಕೊಂಡಿದ್ದಾಗಿ ಜಾಧವ ತಿಳಿಸಿದರು.

ಜಿಲ್ಲಾಧ್ಯಕ್ಷರರಾದ ಸಿ.ಜಿ. ಪಾರೆ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ಪಿಡಿಒಗಳಿಗೆ ರಕ್ಷಣೆ ನೀಡಬೇಕು. ಗ್ರಾಮಾಭಿವೃದ್ಧಿಯಲ್ಲಿ ಪಿಡಿಒಗಳು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಜನರ ಆಶೋತ್ತರಗಳಿಗೆ ಸ್ಪಂದಿಸುತ್ತಿದ್ದಾರೆ. ಆದರೂ ಕೆಲವು ಸದಸ್ಯರು ವಿನಾಕಾರಣ ಕಿರುಕುಳ ನೀಡುತ್ತಿದ್ದಾರೆ. ಇಂಥವರ ಮೇಲೆ ಕ್ರಮ ಕೈಗೊಳ್ಳಬೇಕೆಂದರು.

ಗೌರವಾಧ್ಯಕ್ಷ ಎಸ್.ಆರ್. ಕಟ್ಟಿ, ಬಿ.ಎಂ. ಬಬಲಾದ, ಎಚ್.ಬಿ. ರಜಪೂತ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸುರೇಶ ಶೇಡಶ್ಯಾಳ ಮತ್ತಿತರರಿದ್ದರು.