ವಿಜಯವಾಣಿ ಸುದ್ದಿಜಾಲ ಧಾರವಾಡ
ಕನ್ನಡದಲ್ಲಿ ಮಾತನಾಡಿ ಎಂದಿದ್ದಕ್ಕೆ ಬೆಳಗಾವಿ ನಗರ ಸಾರಿಗೆ ಬಸ್ ಕಂಡಕ್ಟರ ಮೇಲೆ ಮರಾಠಿ ಯುವಕರು ಹಲ್ಲೆ ನಡೆಸಿದ ಘಟನೆಯನ್ನು ನಗರದ ಕರ್ನಾಟಕ ವಿದ್ಯಾವರ್ಧಕ ಸಂಘ ತೀವ್ರವಾಗಿ ಖಂಡಿಸಿದೆ.
ಕಾರ್ಯಾಧ್ಯಕ್ಷ ಬಸವಪ್ರಭು ಹೊಸಕೇರಿ ಅಧ್ಯಕ್ಷತೆಯಲ್ಲಿ ಶನಿವಾರ ಏರ್ಪಡಿಸಿದ್ದ ಕಾರ್ಯಕಾರಿ ಸಭೆ ನಡೆಸಿ, ಕಂಡಕ್ಟರ್ ಮೇಲೆ ಮರಾಠಿ ಭಾಷಾಂಧ ಪುಂಡರು ಹಲ್ಲೆ ಮಾಡಿದ್ದಲ್ಲದೆ ಪೋಕ್ಸೋ ಪ್ರಕರಣ ದಾಖಲಿಸಿರುವುದು ಕನ್ನಡಿಗರ ಮೇಲೆ ನಡೆಯುತ್ತಿರುವ ದಬ್ಬಾಳಿಕೆಯಾಗಿದೆ. ಮರಾಠಿ ಪುಂಡರ ದಬ್ಬಾಳಿಕೆ ಹತ್ತಿಕ್ಕಬೇಕು ಎಂದು ಆಗ್ರಹಿಸಿದ್ದಾರೆ.
ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮವಾಗಬೇಕು. ಕರ್ನಾಟಕದಲ್ಲಿ ಕನ್ನಡವೇ ತಾಯಿ ಭಾಷೆಯಾಗಿರುವಾಗ ಕರ್ನಾಟಕ ಬಸ್ಸಿನಲ್ಲಿ ಕನ್ನಡ ಮಾತನಾಡಿದ್ದಕ್ಕೆ ಕಂಡಕ್ಟರ್ ಮೇಲಿನ ಹಲ್ಲೆ ದುರದೃಷ್ಟಕರ. ಇಂತಹ ಘಟನೆಗಳು ಕನ್ನಡ-ಮರಾಠಿಗರ ಭಾಷಾ ಬಾಂಧವ್ಯಕ್ಕೆ ಧಕ್ಕೆ ತರುವಂತಹದ್ದಾಗಿದೆ. ಭಾಷಾ ಹೆಸರಿನಲ್ಲಿ ಸಾಮರಸ್ಯಕ್ಕೆ ಕುಂದು ಉಂಟು ಮಾಡುತ್ತಿರುವ ಶಕ್ತಿಗಳಿಗೆ ತಕ್ಕ ಪಾಠ ಆಗಬೇಕಿದೆ.
ಕನ್ನಡಿಗ ಬಸ್ ನಿರ್ವಾಹಕನ ಮೇಲೆ ಹಲ್ಲೆಯ ಬೆನ್ನಲ್ಲೇ ಸಂಚಿನಿಂದ ಪ್ರಕರಣ ದಾಖಲಿಸಿಕೊಂಡಿದ್ದರ ಕುರಿತು ಉನ್ನತ ಮಟ್ಟದ ತನಿಖೆ ಆಗಬೇಕು. ದಾಳಿ ನಡೆಸಿದ ಪುಂಡರ ಮೇಲೆ ಕರ್ನಾಟಕದ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ತುರ್ತಾಗಿ ಕಟ್ಟುನಿಟ್ಟಿನ ಕಾನೂನು ಕ್ರಮಕೈಕೊಳ್ಳಬೇಕು. ಹಲ್ಲೇಗಿಡಾದ ನಿರ್ವಾಹಕನಿಗೆ ರಕ್ಷಣೆ ಮತ್ತು ಸೂಕ್ತ ಪರಿಹಾರ ನೀಡಬೇಕು ಎಂದು ಸಭೆಯಲ್ಲಿ ಸರ್ಕಾರಕ್ಕೆ ಒತ್ತಾಯಿಸಲಾಗಿದೆ.
ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ಪದಾಧಿಕಾರಿಗಳಾದ ಪ್ರೊ. ಮಾಲತಿ ಪಟ್ಟಣಶೆಟ್ಟಿ, ಸತೀಶ ತುರಮರಿ, ಶಂಕರ ಕುಂಬಿ, ಡಾ. ಸಂಜೀವ ಕುಲಕರ್ಣಿ, ಡಾ. ಶೈಲಜಾ ಅಮರಶೆಟ್ಟಿ, ವೀರಣ್ಣ ಒಡ್ಡೀನ, ಡಾ. ಮಹೇಶ ಹೊರಕೇರಿ, ಡಾ. ಜಿನದತ್ತ ಹಡಗಲಿ, ಡಾ. ಧನವಂತ ಹಾಜವಗೋಳ, ಶಿವಾನಂದ ಭಾವಿಕಟ್ಟಿ, ಇತರರು ಇದ್ದರು.