ಚಳ್ಳಕೆರೆ: ಬೆಳಗಾವಿ ಜಿಲ್ಲೆಯಲ್ಲಿ ಪೌರಕಾರ್ಮಿಕರು ಸಂಬಳ ಕೇಳಿದ್ದಕ್ಕೆ ಅಲ್ಲಿನ ಮುಖ್ಯಾಧಿಕಾರಿ ಹಲ್ಲೆ ನಡೆಸಿರುವುದು ಖಂಡನೀಯ ಎಂದು ಸಿಐಟಿಯು ತಾಲೂಕು ಕಾರ್ಯದರ್ಶಿ ಟಿ.ತಿಪ್ಪೇಸ್ವಾಮಿ ಹೇಳಿದ್ದಾರೆ.
ಸಂಬಳ ಕೇಳಿದ ಪೌರಕಾರ್ಮಿಕರನ್ನು ನಿಂದಿಸಿ, ಹಲ್ಲೆ ಮಾಡಿರುವ ಖಾನಾಪುರ ಪುರಸಭೆಯ ಮುಖ್ಯಾಧಿಕಾರಿಯನ್ನು ಕೂಡಲೇ ವಜಾಗೊಳಿಸಬೇಕು. ಸ್ಥಳೀಯ ಸಂಸ್ಥೆಗಳಲ್ಲಿ ಕಡಿಮೆ ಸಂಬಳಕ್ಕೆ ಪೌರಕಾರ್ಮಿಕರು 8 ಗಂಟೆಗೂ ಅಧಿಕ ದುಡಿಯುತ್ತಾರೆ. 3-4 ತಿಂಗಳಾದರೂ ಸಕಾಲಕ್ಕೆ ಸರಿಯಾಗಿ ಸಂಬಳ ಸಿಗುವುದಿಲ್ಲ.
ಗುತ್ತಿಗೆ ಪದ್ಧತಿಯಡಿ ಸಂಸ್ಥೆಗಳು ಜೀತದಾಳಿನಂತೆ ನಡೆಸಿಕೊಳ್ಳುತ್ತಿವೆ. ವೃತ್ತಿ ಭದ್ರತೆ ಸೇರಿ ಯಾವುದೇ ಆರೋಗ್ಯ ಸೌಲಭ್ಯಗಳು ಸಮರ್ಪಕವಾಗಿ ನೀಡುವುದಿಲ್ಲ. ಪೌರಕಾರ್ಮಿಕರ ಆರೋಗ್ಯ ಮತ್ತು ಕುಟುಂಬ ಭದ್ರತೆಗಾಗಿ ಪ್ರತಿ ತಿಂಗಳು ಸಂಬಳ, ಆರೋಗ್ಯ ತಪಾಸಣೆ ಮತ್ತು ಸುರಕ್ಷತಾ ಧಿರಿಸುಗಳನ್ನು ನೀಡಲು ರಾಜ್ಯ ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.