ಮೈಸೂರು: ದಟ್ಟಗಳ್ಳಿ ಹೊರವರ್ತುಲ ರಸ್ತೆಯಲ್ಲಿ ಇತ್ತೀಚೆಗೆ ಜೀಪ್ ಮೇಲೆ ಕಲ್ಲು ತೂರಾಟ ನಡೆಸಿ ಸುಲಿಗೆಗೆ ಯತ್ನಿಸಲಾಗಿದೆ.
ಹೆಬ್ಬಾಳಿನ ಉದ್ಯಮಿಯೊಬ್ಬರು ತಮ್ಮ ಸ್ನೇಹಿತರೊಂದಿಗೆ ಜೀಪ್‌ನಲ್ಲಿ ಬರುತ್ತಿದ್ದಾಗ ಈ ಘಟನೆ ನಡೆದಿದೆ. ಈ ಕುರಿತು ದೂರು ನೀಡಿಲ್ಲ. ಮೇ 16ರಂದು ರಾತ್ರಿ 12ರ ಸುಮಾರಿಗೆ ಇವರು ಶ್ರೀರಾಂಪುರ ರಿಂಗ್ ರಸ್ತೆ ಜಂಕ್ಷನ್‌ನಿಂದ ದಟ್ಟಗಳ್ಳಿ ಕಡೆ ಬರುತ್ತಿದ್ದರು.
ಮಾರಮ್ಮನ ದೇವಸ್ಥಾನದ ಬಳಿ ಯುವಕರ ಗುಂಪೊಂದು ನಿಂತಿದ್ದನ್ನು ಕಂಡು ಜೀಪ್ ಅನ್ನು ನಿಧಾನ ಮಾಡಿದ್ದಾರೆ. ಈ ವೇಳೆ ತಕ್ಷಣ ರಸ್ತೆ ಬದಿ ಮರದ ಕೆಳಗೆ ನಿಂತಿದ್ದ ಗುಂಪೊಂದು ಕಲ್ಲು ತೂರಾಟ ನಡೆಸಿದೆ. ಬಳಿಕ ಯುವಕರ ಗುಂಪು ಬೈಕ್‌ನಲ್ಲಿ ಬೆನ್ನತ್ತಿದೆ. ದುಷ್ಕರ್ಮಿಗಳ ಹಠಾತ್ ದಾಳಿಯಿಂದ ಎಚ್ಚೆತ್ತುಕೊಂಡ ಉದ್ಯಮಿ ತಮ್ಮ ಕಾರನ್ನು ಎಲ್ಲಿಯೂ ನಿಲ್ಲಿಸದೆ ವೇಗವಾಗಿ ಚಾಲನೆ ಮಾಡಿಕೊಂಡು ಸುರಕ್ಷಿತವಾಗಿ ಮನೆಗೆ ವಾಪಸಾಗಿದ್ದಾರೆ.
ಈ ಘಟನೆ ಕುರಿತು ಪ್ರತಿಕ್ರಿಯಿಸಿರುವ ನಗರ ಪೊಲೀಸ್ ಆಯುಕ್ತ ಬಿ.ರಮೇಶ್, ನನಗೆ ಯಾರು ಬಂದು ದೂರು ನೀಡಿಲ್ಲ. ಮುಂಜಾಗ್ರತಾ ಕ್ರಮವಾಗಿ ರಿಂಗ್ ರಸ್ತೆ ಸೇರಿದಂತೆ ಹೆದ್ದಾರಿಗಳಲ್ಲಿ ಗಸ್ತು ತೀವ್ರಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.