ಜಿಲ್ಲೆ

ಫಾಸ್ಟ್‌ಫುಡ್ ತಗಾದೆ, ಸಹೋದರರಿಗೆ ಹಲ್ಲೆ : ಊಟ ಮಾಡಿದ ಬಳಿಕ ಬಿಲ್ ಕೊಡಲು ತಕರಾರು ಮಾಡಿದ ದುಷ್ಕರ್ಮಿಗಳು

ಸೌಮ್ಯ ಆರ್

ಉಳ್ಳಾಲ: ಆಹಾರ ಸೇವಿಸಿ ಬಿಲ್ ಕೊಡುವ ವಿಚಾರದಲ್ಲಿ ತಗಾದೆ ತೆಗೆದ ಯುವಕರ ತಂಡ ಅಂಗಡಿ ಮಾಲೀಕ ಮತ್ತು ಆತನ ಸಹೋದರರಿಗೆ ಹಲ್ಲೆಗೈದು ಚೂರಿಯಿಂದ ಇರಿಯಲೆತ್ನಿಸಿದ ಘಟನೆ ಅಂಬಿಕಾ ರೋಡ್ ಗಟ್ಟಿ ಸಮಾಜದ ಬಳಿ ಮಂಗಳವಾರ ರಾತ್ರಿ ನಡೆದಿದೆ. ಫಾಸ್ಟ್ ಫುಡ್ ಸೆಂಟರ್ ಮಾಲೀಕ ಅಬ್ದುಲ್ ಆಸೀಫ್ ಮತ್ತು ಸಹೋದರ ಅಬ್ದುಲ್ ರಶೀದ್ ಹಲ್ಲೆಗೊಳಗಾಗಿದ್ದು, ಮತ್ತೋರ್ವ ಸಹೋದರ ಬಶೀರ್ ಅವರಿಗೆ ಕತ್ತಿಯಿಂದ ಇರಿಯಲ್ಪಟ್ಟ ಗಾಯಗಳಾಗಿವೆ.

ಅಂಬಿಕಾ ರೋಡ್ ಗಟ್ಟಿ ಸಮಾಜದ ಎದುರಿನ ಹೆದ್ದಾರಿ ಅಂಚಿನಲ್ಲಿ ಇವರ ಫಾಸ್ಟ್‌ಫುಡ್ ಸೆಂಟರ್ ಇದ್ದು, ಮಂಗಳವಾರ ರಾತ್ರಿ 10.30ರ ವೇಳೆ ಬಂದ ಪರಿಚಯಸ್ಥರಾದ ಮುಝಮ್ಮಿಲ್, ನಿಸಾರ್ ಮತ್ತು ಸವಾದ್ ಎಂಬುವರು ಆಹಾರ ಸೇವಿಸಿ ಬಳಿಕ ಬಿಲ್ ಕೊಡುವ ವಿಚಾರಕ್ಕೆ ತಗಾದೆ ತೆಗೆದು ಹಲ್ಲೆ ನಡೆಸಿದ್ದಾರೆ. ಮೊದಲು ರಶೀದ್‌ಗೆ ಹಲ್ಲೆ ನಡೆಸಿದ್ದು, ಗಲಾಟೆ ತಡೆಯಲು ಬಂದ ಸಹೋದರ ಬಶೀರ್ ಮೇಲೂ ಹಲ್ಲೆಗೈದಿದ್ದಾರೆ. ಅಲ್ಲದೆ ಮುಝಮ್ಮಿಲ್ ತನ್ನಲ್ಲಿದ್ದ ಕತ್ತಿಯಿಂದ ಹೊಟ್ಟೆಗೆ ಇರಿಯಲೆತ್ನಿಸಿದ್ದಾನೆ. ಈ ವೇಳೆ ಬಶೀರ್ ಪ್ರಾಣರಕ್ಷಣೆಗಾಗಿ ತನ್ನ ಕೈಗಳನ್ನು ಅಡ್ಡ ಹಿಡಿದಾಗ ಅವರ ಕಿವಿ, ಕೆನ್ನೆ, ಕೈ, ಕಾಲು ಮತ್ತು ಬೆನ್ನಿಗೆ ಕತ್ತಿಯಿಂದ ಇರಿದ ಗಾಯಗಳಾಗಿವೆ.

ಸ್ಥಳದಲ್ಲಿ ಜನ ಜಮಾಯಿಸಿದ್ದನ್ನು ಕಂಡು ಆರೋಪಿಗಳು ಫಾಸ್ಟ್‌ಫುಡ್ ಮಾಲೀಕನಿಗೆ ಜೀವ ಬೆದರಿಕೆ ಹಾಕಿ ದ್ವಿಚಕ್ರ ವಾಹನದಲ್ಲಿ ಪರಾರಿಯಾಗಿದ್ದಾರೆಂದು ಆರೋಪಿಸಲಾಗಿದೆ. ಗಾಯಗೊಂಡ ಬಶೀರ್ ಅವರು ದೇರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸೀಫ್ ನೀಡಿದ ದೂರಿನಂತೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.