ಹೊಸನಗರ: ತಾಲೂಕು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ನಿತಿನ್ ಮತ್ತು ಸಹೋದರ ನವೀನ್ ಕಾರಿನಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ಅಡ್ಡಗಟ್ಟಿದ ಪ್ರಕಾಶ್ ಮತ್ತು ಸಹಚರರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ನಗರ ಪೊಲೀಸರಿಗೆ ದೂರು ನೀಡಲಾಗಿದೆ.
ಡಿಸೆಂಬರ್ 31ರ ರಾತ್ರಿ ಚಿಕ್ಕಪೇಟೆ ಹೋಟೆಲ್ ವ್ಯವಹಾರ ಮುಗಿಸಿಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಹಲ್ಲೆ ಮಾಡಲಾಗಿದ್ದು ಕರಿಮನೆ ಗ್ರಾಪಂ ಸದಸ್ಯ ಪ್ರಕಾಶ್, ಸಂದೇಶ್, ನಾಗೇಶ್, ನವೀನ್, ಸಚಿನ್ ಇತರರ ಮೇಲೆ ಕೇಸ್ ದಾಖಲಾಗಿದೆ. ಹಲ್ಲೆಗೊಳಗಾದ ನಿತಿನ್ ಮತ್ತು ನವೀನ್ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಳೆದ ಗಣಪತಿ ಹಬ್ಬದ ಸಂದರ್ಭದಲ್ಲಿ ನಿತಿನ್ ಹಾಕಿದ್ದ ಶುಭಾಶಯದ ಫ್ಲೆಕ್ಸೃ್ನ್ನು ಪ್ರಕಾಶ್ ಮತ್ತು ಸಹಚರರು ಹರಿದು ಹಾಕಿದ್ದರು. ಈ ವಿಚಾರದಲ್ಲಿ ಪೊಲೀಸರು ಎರಡು ಕಡೆಯವರಿಗೆ ತಿಳಿ ಹೇಳಿ ಎಚ್ಚರಿಕೆ ನೀಡಿದ್ದರು. ಭಾನುವಾರ ರಾತ್ರಿ ನವೀನ್‌ನೊಂದಿಗೆ ಬಸವನಬ್ಯಾಣದ ಮನೆಗೆ ತೆರಳುತ್ತಿರುವ ವೇಳೆ ಪ್ರಕಾಶ್ ಮತ್ತು ಸಹಚರರು ಹಿಂಬಾಲಿಸಿ ಅಡ್ಡಗಟ್ಟಿ ಮೊದಲು ಕಾರಿನ ಗ್ಲಾಸ್ ಒಡೆದಿದ್ದಾರೆ. ನಂತರ ಅವಾಚ್ಯವಾಗಿ ನಿಂದಿಸಿ ದೈಹಿಕವಾಗಿ ಹಲ್ಲೆ ಮಾಡಿದ್ದಾರೆ ಎಂದು ನಿತಿನ್ ನೀಡಿದ ದೂರಿನಲ್ಲಿ ಆರೋಪಿಸಲಾಗಿದೆ.
ಹಲ್ಲೆ ಖಂಡಿಸಿ ನಗರ ಚಿಕ್ಕಪೇಟೆ ಸರ್ಕಲ್ನಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ ಗಣಪತಿ ಬೆಳಗೋಡು ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಹಲ್ಲೆಕೋರರನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಯಿತು. ಪ್ರಮುಖರಾದ ಕೆ.ವಿ.ಕೃಷ್ಣಮೂರ್ತಿ, ಸುರೇಶ ಸ್ವಾಮಿರಾವ್, ರಾಜೇಶ ಹಿರಿಮನೆ, ಮಂಡಾನಿ ಮೋಹನ್, ಮನೋಧರ, ಸಂತೋಷ್ ಇತರರಿದ್ದರು.
ಪ್ರತಿದೂರು ಕೂಡ ದಾಖಲು: ಹಲ್ಲೆ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ತಾಲೂಕು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ನಿತಿನ್, ಸಹೋದರ ನವೀನ್ ಮೇಲೆ ನಗರ ಠಾಣೆಯಲ್ಲಿ ಪ್ರತಿದೂರು ಸಹ ದಾಖಲಾಗಿದೆ. ರವಿಚಂದ್ರ ಎಂಬಾತ ದೂರು ನೀಡಿದ್ದು ಬಸವನಬ್ಯಾಣದ ಅಕ್ಷಯ್ ಎಂಬಾತನ ಮನೆಯಲ್ಲಿ ಊಟ ಮುಗಿಸಿ ಬರುವಾಗ ಎದುರುಗಡೆಯಿಂದ ಬಂದ ಕಾರು ಚಾಲಕ ಸೈಡ್ ನೀಡಲು ಚಮಕಾಯಿಸಿದ್ದಾನೆ. ಆಗ ಮಳಲಿ ಪ್ರಕಾಶ ಕಾರು ನಿಲ್ಲಿಸಿ ಇಳಿದಾಗ ನಿತಿನ್ ಗಲಾಟೆ ಮಾಡಿದ್ದಾನೆ. ಜಗಳ ಬಿಡಿಸಲು ಮುಂದಾದಾಗ ನವೀನ್, ನನಗೆ ಮತ್ತು ಜತೆಗಿದ್ದ ಯಲ್ಲಪ್ಪ ಎಂಬಾತನಿಗೆ ಅವಾಚ್ಯವಾಗಿ ನಿಂದಿಸಿ ಹಲ್ಲೆ ಮಾಡಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ನಗರ ಪೊಲೀಸ್ ಠಾಣೆಯಲ್ಲಿ ದೂರು- ಪ್ರತಿದೂರು ದಾಖಲಾಗಿದೆ.