ಎನ್.ಆರ್.ಪುರ: ತಾಲೂಕಿನ ಬಿ.ಎಚ್.ಮರದ ಫಾಸ್ಟ್‌ಪುಡ್ ಅಂಗಡಿಯಲ್ಲಿ ಹಲವು ಬಾರಿ ಕರಿದ ಎಣ್ಣೆಯನ್ನು ಬಳಸುತ್ತಿದ್ದಾರೆ ಎಂಬ ಗ್ರಾಹಕರ ದೂರಿನ ಹಿನ್ನೆಲೆಯಲ್ಲಿ ಶುಕ್ರವಾರ ಕಡೂರಿನ ಆರೋಗ್ಯ ಸುರಕ್ಷಣಾಧಿಕಾರಿ ಮಹೇಂದ್ರ ಭೇಟಿ ನೀಡಿ ಕರಿದ ಎಣ್ಣೆಯನ್ನು ಸೀಜ್ ಮಾಡಿದ್ದಾರೆ.
ಗುರುವಾರ ಗುಡ್ಡೇಹಳ್ಳಯಲ್ಲಿ ಒಬ್ಬರು ಬಿ.ಎಚ್.ಕೈಮರದ ಫಾಸ್ಟ್‌ಪುಡ್ ಅಂಗಡಿಯಲ್ಲಿ ಫಾಸ್ಟ್‌ಪುಡ್‌ಗಳನ್ನು ಖರೀದಿ ಮಾಡುವಾಗ ಈ ಹಿಂದೆ ಕರಿದ ಎಣ್ಣೆಯಲ್ಲೇ ಮತ್ತೆ ಫಾಸ್ಟ್ ಪುಡ್ ತಯಾರಿಸುತ್ತಿರುವುದನ್ನು ಗಮನಿಸಿದ್ದಾರೆ. ನಂತರ ಅವರು ತಾಲೂಕು ಆರೋಗ್ಯಾಧಿಕಾರಿ ಡಾ.ವಿಜಯಕುಮಾರ್‌ಗೆ ದೂರು ನೀಡಿದ್ದಾರೆ. ಆರೋಗ್ಯಾಧಿಕಾರಿಗಳ ಸೂಚನೆಯಂತೆ ಸ್ಥಳಕ್ಕೆ ತಾಲೂಕು ಹಿರಿಯ ಆರೋಗ್ಯ ನಿರಕ್ಷಣಾಧಿಕಾರಿ ದರ್ಶನ್ ಮತ್ತು ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕರಿದ ಎಣ್ಣೆಯಲ್ಲಿ 500 ಎಂಎಲ್ ನಷ್ಟು ಎಣ್ಣೆ ಸಂಗ್ರಹಿಸಿ ಸೀಜ್ ಮಾಡಿದ್ದಾರೆ.
ಶುಕ್ರವಾರ ಶಾಸಕ ಟಿ.ಡಿ.ರಾಜೇಗೌಡ ಸೂಚನೆಯಂತೆ ಕಡೂರು ಆಹಾರ ಸುರಕ್ಷಣಾಧಿಕಾರಿ ಮಹೇಂದ್ರ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ನಂತರ ಅಂಗಡಿಯ ಮಾಲೀಕರನ್ನು ಕರೆಸಿ ಸ್ಥಳ ಮಹಜರು ನಡೆಸಿದರು. ಕರಿದ ಎಣ್ಣೆಯನ್ನು ಪರೀಕ್ಷೆಗಾಗಿ ಮೈಸೂರಿನ ಎಫ್‌ಎಸ್‌ಐಎಲ್‌ಗೆ ಕಳಿಸಿದರು.
ನಂತರ ಬಿ.ಎಚ್.ಕೈಮರದ ವಿವಿಧ ಹೋಟೆಲ್, ಫಾಸ್ಟ್ ಪುಡ್ ಅಂಗಡಿಗಳಿಗೆ ಭೇಟಿ ನೀಡಿ ಪರೀಕ್ಷೆ ನಡೆಸಿ ಮಾತನಾಡಿ, ಒಂದು ಬಾರಿ ಬಳಸಿದ ಎಣ್ಣೆಯನ್ನು ಮತ್ತೆ ಬಳಸಬಾರದು. ಅಡಿಗೆಗೆ ಟೆಸ್ಟಿಂಗ್ ಪುಡಿ ಬಳಸಬಾರದು. ಕೈಗಳನ್ನು ಸರಿಯಾಗಿ ತೊಳೆದುಕೊಳ್ಳಬೇಕು. ಗ್ರಾಹಕರಿಗೆ ಶುದ್ದ ಬಿಸಿ ನೀರು ನೀಡಬೇಕು. ಇನ್ನು ಮುಂದೆ ಪ್ರತಿ ಗುರುವಾರ ಎನ್.ಆರ್.ಪುರಕ್ಕೆ ಭೇಟಿ ನೀಡಿ ಎಲ್ಲ ಹೋಟೆಲ್‌ಗಳನ್ನು ಪರಿಶೀಲನೆ ನಡೆಸಲಾಗುವುದು ಎಂದರು.
ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ದರ್ಶನ್, ಆರ್.ಕೇಶವಮೂರ್ತಿ, ದೂರುದಾರ ಗುಡ್ಡೇಹಳ್ಳ ಸಂದೀಪ್, ಅಂಗಡಿ ಮಾಲೀಕ ಅಣ್ಣಯ್ಯ ಮತ್ತಿತರರು ಇದ್ದರು.