ಸಿದ್ದಾಪುರ: ತಾಲೂಕಿನ ಕಾನಗೋಡ ಗ್ರಾಮದಲ್ಲಿ ಭಾನುವಾರ ಕೆರೆ ಬೇಟೆಗೆ ಆಗಮಿಸಿದ್ದ ಜನರು ನಿರೀಕ್ಷಿಸಿದಷ್ಟು ಮೀನು ಸಿಕ್ಕಿಲ್ಲ ಎಂದು ಆಯೋಜಕರ ಮೇಲೆ ಸಿಟ್ಟಾಗಿ ದಾಂಧಲೆ ಎಬ್ಬಿಸಿ, ತಡೆಯಲು ಬಂದ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲದೆ, ಊರಿನ ಹಲವು ಮನೆ ಹಾಗೂ ಅಂಗಡಿಗಳಿಗೆ ನುಗ್ಗಿ ಕೈಗೆ ಸಿಕ್ಕ ವಸ್ತುಗಳನ್ನು ದೋಚಿಕೊಂಡು ಹೋಗಿದ್ದಾರೆ. ಕಾನಗೋಡಿನ ಈಶ್ವರ ದೇವಸ್ಥಾನ ಸೇವಾ ಟ್ರಸ್ಟ್ ಕೆರೆ ಬೇಟೆ ಏರ್ಪಡಿಸಿತ್ತು.
ದೇವಾಲಯದ ಕಟ್ಟಡದ ಸಹಾಯಾರ್ಥ ಸ್ಥಳೀಯ ದೊಡ್ಡಕೆರೆಯಲ್ಲಿ ಕೆರೆ ಬೇಟೆ ಮಾಡಲು ತಾಲೂಕಿನ ಜನರಷ್ಟೇ ಅಲ್ಲದೆ, ಹಿರೆಕೇರೂರು, ಸೊರಬ, ಶಿರಸಿ, ದಾವಣಗೆರೆ, ಸಾಗರ, ಶಿವಮೊಗ್ಗ ಭಾಗದಿಂದ ಅಂದಾಜು 7000 ಜನ ಬಂದಿದ್ದರು. ಎಲ್ಲರಿಂದಲೂ ತಲಾ 600 ರೂ. ಪಡೆದು ಸಂಘಟಕರು ಕೆರೆ ಬೇಟೆಗೆ ಪಾಸ್ ನೀಡಿದ್ದರು. ಇಡೀ ಕೆರೆಯಲ್ಲಿ ಒಂದು ಮೀನು ಸಹ ಕೆರೆ ಬೇಟೆಗೆ ಬಂದವರಿಗೆ ಸಿಗಲಿಲ್ಲ ಎನ್ನಲಾಗಿದೆ. ಮೀನನ್ನು ಮೊದಲೇ ಹಿಡಿಯಲಾಗಿದೆ ಎಂದು ಆರೋಪಿಸಿ ಹಣ ವಾಪಸ್ ನೀಡುವಂತೆ ಕೆರೆಬೇಟೆಗೆ ಬಂದವರು ಆಗ್ರಹಿಸಿದರು. ಆದರೆ ಸಮಿತಿಯವರು ಹಣ ಕೊಡಲು ಒಪ್ಪದಿದ್ದಾಗ ಗಲಾಟೆ ಪ್ರಾರಂಭವಾಯಿತು. ಬೆರಳೆಣಿಕೆಯಷ್ಟಿರುವ ಪೊಲೀಸರಿಗೆ ಪರಿಸ್ಥಿತಿ ನಿಭಾಯಿಸಲು ಸಾಧ್ಯವಾಗಲಿಲ್ಲ. ಅಲ್ಲದೆ, ಕೆರೆ ಬೇಟೆಗೆ ಬಂದವರು ತಾವು ತಂದ ‘ಕೂಣಿ’(ಮೀನು ಹಿಡಿಯುವ ಸಾಧನ)ಯಿಂದಲೇ ಹಲ್ಲೆ ನಡೆಸತೊಡಗಿದರು. ಈ ವೇಳೆ ಪಿಎಸ್ಐ ಮಹಾೆಂತೇಶ ಕುಂಬಾರ ಹಾಗೂ ಕೆಲವು ಸಿಬ್ಬಂದಿ ಗಾಯಗೊಂಡಿದ್ದಾರೆ. ನಂತರ ಶಿರಸಿಯಿಂದ ಹೆಚ್ಚಿನ ಪೊಲೀಸ್ ಸಿಬ್ಬಂದಿ ಆಗಮಿಸಿ ಜನರನ್ನು ನಿಯಂತ್ರಿಸಿದರು. ಸಮಿತಿಯವರಿಂದ ಕೆರೆ ಬೇಟೆಗಾರರಿಗೆ ಹಣ ಕೂಡ ವಾಪಸ್ ಕೊಡಿಸಲಾಯಿತು. ಸ್ಥಳಕ್ಕೆ ಹೆಚ್ಚುವರಿ ಎಸ್ಪಿ ಎಸ್. ಬದರಿನಾಥ, ಡಿವೈಎಸ್ಪಿ ರವಿ ನಾಯ್ಕ ಭೇಟಿ ನಿಡಿ ಪರಿಶೀಲನೆ ನಡೆಸಿದ್ದಾರೆ. ಸಿದ್ದಾಪುರ ಸಿಪಿಐ ಕುಮಾರ ಕೆ. ಹಾಗೂ ಸಿಬ್ಬಂದಿ ಸ್ಥಳದಲ್ಲಿ ಬಂದೋಬಸ್ತ್ ಮುಂದುವರಿಸಿದ್ದಾರೆ.
ಜನರು ಮನೆಗಳಿಗೆ ನುಗ್ಗಿ ಆಸ್ತಿ ಪಾಸ್ತಿ ಹಾನಿಮಾಡಿದ ಬಗ್ಗೆಯೂ ಆರೋಪ ಕೇಳಿ ಬಂದಿದೆ. ಆಯೋಜಕರಿಂದ ಸಂಪೂರ್ಣ ಮಾಹಿತಿ ಪಡೆದುಕೊಳ್ಳುತ್ತಿದ್ದೇವೆ. ಘಟನೆಗೆ ಕಾರಣರಾದವರ ಮೇಲೆ ಕ್ರಮ ಜರುಗಿಸುತ್ತೇವೆ. | ಬದರಿನಾಥ ಎಎಸ್ಪಿ
ಕೈಗೆ ಸಿಕ್ಕ ಸಾಮಗ್ರಿ ಕಳವು: ಕೆರೆ ಬೇಟೆಗೆ ಬಂದಿದ್ದ ಹಲವರು ಊರಿನ ಮನೆಮನೆಗೆ ನುಗ್ಗಿ ಕೈಗೆ ಸಿಕ್ಕ ಸಾಮಗ್ರಿಗಳನ್ನು ಹೊತ್ತೊಯ್ದರು. ತಡೆಯಲು ಯತ್ನಿಸಿದ ಮಹಿಳೆಯರು, ಮಕ್ಕಳ ಮೇಲೆಯೂ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ದೇವಸ್ಥಾನ ಸಮಿತಿಯ ಮುಖ್ಯಸ್ಥ ಮಾರುತಿ ನಾಯ್ಕ ಅವರ ಮನೆಗೆ ನುಗ್ಗಿ ಚೀಲಗಟ್ಟಲೆ ಬೆಲ್ಲ, ಶುಂಠಿ, ಪಂಪಸೆಟ್ ಸೇರಿ ಹಲವಾರು ವಸ್ತುಗಳನ್ನು ಹೊತ್ತೊಯ್ದಿದ್ದಲ್ಲದೆ, ಮನೆಗೆ ಹಾನಿ ಉಂಟುಮಾಡಿದ್ದಾರೆ. ಸ್ಥಳೀಯ ಹಾಲು ಉತ್ಪಾದಕರ ಸಂಘದ ಕಂಪ್ಯೂಟರ್ ಸೇರಿ ಲಕ್ಷಾಂತರ ರೂ.ಗಳ ವಸ್ತುಗಳನ್ನು ದೋಚಲಾಗಿದೆ.