ಮಂಗಳೂರು: ಸೆಂಟ್ರಿಂಗ್ ಕೆಲಸಕ್ಕೆ ತೆರಳುತ್ತಿದ್ದ ಬಿಜೆಪಿ ಕಾರ್ಯಕರ್ತನೋರ್ವನನ್ನ ಮಾರಕಾಸ್ತ್ರಗಳನ್ನ ಹಿಡಿದಿದ್ದ ಮೂವರ ತಂಡ ದಾಳಿಗೆ ಯತ್ನಿಸಿದ ಘಟನೆ ಬುಧವಾರ ಬೆಳಗ್ಗೆ ಉಚ್ಚಿಲ, ಮುಳ್ಳುಗಡ್ಡೆ ಎಂಬಲ್ಲಿ ನಡೆದಿದೆ.
ಉಚ್ಚಿಲ ಜಾಲ ಹಿತ್ತಿಲು ನಿವಾಸಿ ಕಿಶೋರ್ ಸಾಲ್ಯಾನ್ (49) ಎಂಬವರ ಮೇಲೆ ದಾಳಿಗೆ ಯತ್ನ ನಡೆದಿದೆ. ಬೆಳಗ್ಗೆ ಸುಮಾರು 7.30 ಗಂಟೆ ವೇಳೆಗೆ ಕಿಶೋರ್ ಅವರು ಮುಳ್ಳುಗುಡ್ಡೆಯ ನಿರ್ಜನ ಪ್ರದೇಶದಲ್ಲಿ ಕೆಲಸಕ್ಕೆ ತೆರಳುತ್ತಿದ್ದಾಗ ಮೂವರು ಆಗಂತುಕರು ಮಾರಕಾಸ್ತ್ರಗಳನ್ನ ಹಿಡಿದು ಅಟ್ಟಾಡಿಸಿದ್ದಾರೆ. ಕಿಶೋರ್ ಅವರು ಪ್ರಾಣ ಉಳಿಸಲು ಓಡಿದ್ದು ರಕ್ಷಣೆಗಾಗಿ ಅಲ್ಲೇ ಇದ್ದ ಮುಸ್ಲಿಮರ 3 ಅಂಗಡಿಯೊಂದಕ್ಕೆ ನುಗ್ಗಿದ್ದಾರೆ. ಈ ವೇಳೆ ಆಗಂತುಕರು ಪರಾರಿಯಾಗಿದ್ದಾರೆ.
ಕಿಶೋರ್ ಅವರು ಬಿಜೆಪಿ ಪಾಳಯದಲ್ಲಿ ಗುರುತಿಸಿದ್ದು ಈ ಹಿಂದೆ ಸೋಮೇಶ್ವರ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದರು.
ಕಿಶೋರ್ ದಾಳಿ ಬಗ್ಗೆ ಉಳ್ಳಾಲ ಪೊಲೀಸರಿಗೆ ದೂರು ನೀಡಿದ್ದು ಪೊಲೀಸರು ತಕ್ಷಣ ಕಾರ್ಯಪೃವೃತ್ತರಾಗಿದ್ದು ಆಗಂತುಕರ ಬಂಧನಕ್ಕೆ ಬಲೆ ಬೀಸಿದ್ದಾರೆ.